Partho dasgupta  
ಸುದ್ದಿಗಳು

[ಟಿಆರ್‌ಪಿ ಹಗರಣ] ಬಾರ್ಕ್‌ ಸಂಸ್ಥೆಯ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾಗೆ ಜಾಮೀನು ನಿರಾಕರಿಸಿದ ಮುಂಬೈ ನ್ಯಾಯಾಲಯ

ಪೊಲೀಸರು ಪತ್ತೆ ಹಚ್ಚಿರುವ ಸಾಕ್ಷ್ಯಗಳಿಂದ ಪ್ರಕರಣದಲ್ಲಿ ದಾಸ್‌ಗುಪ್ತ ಅವರ ಪಾತ್ರ ಇದೆ ಎಂಬುದು ಸಾಬೀತಾಗಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶಿಶೆರ್ ಹಿರೆ ಅವರು ವಾದಿಸಿದರು.

Bar & Bench

ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಸಾರ ವೀಕ್ಷಕ ಸಂಶೋಧನಾ ಮಂಡಳಿಯ (ಬಾರ್ಕ್‌) ಮಾಜಿ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಪಾರ್ಥೋ ದಾಸ್‌ಗುಪ್ತಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮುಂಬೈನ ಎಸ್ಪ್ಲನೇಡ್‌ನಲ್ಲಿರುವ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಸಿಎಂಎಂ) ನ್ಯಾಯಾಲಯ ತಿರಸ್ಕರಿಸಿದೆ. ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್‌ ತಿರುಚಿದ ಹಗರಣಕ್ಕೆ ಸಂಬಂಧಿಸಿದಂತೆ ಪಾರ್ಥೋ ದಾಸ್‌ಗುಪ್ತ ಅವರನ್ನು ಡಿ. 24ರಂದು ಮುಂಬೈ ಪೊಲೀಸರು ಬಂಧಿಸಿದ್ದರು.

ಡಿಸೆಂಬರ್‌ 30ರಂದು ದಾಸ್‌ಗುಪ್ತಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಡಿ. 28 ರವರೆಗೆ ದಾಸ್‌ಗುಪ್ತಾ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು ನಂತರ ಬಂಧನ ಅವಧಿಯನ್ನು ಅದೇ ತಿಂಗಳ 30ರವರೆಗೆ ವಿಸ್ತರಿಸಲಾಗಿತ್ತು.

ದಾಸ್‌ಗುಪ್ತಾ ಪರ ಹಾಜರಾದ ವಕೀಲ ಗಿರೀಶ್ ಕುಲಕರ್ಣಿ ಅವರು ತಮ್ಮ ಕಕ್ಷೀದಾರರ ವಿರುದ್ಧದ ಆರೋಪಗಳನ್ನು ಪೊಲೀಸರು ದೃಢೀಕರಿಸಿಲ್ಲ ಎಂದು ನ್ಯಾಯಾಲಯದಲ್ಲಿ ವಾದಿಸಿದರು. ದಾಸ್‌ಗುಪ್ತ ವಿರುದ್ಧದ ಅಪರಾಧ ಸಾಬೀತುಪಡಿಸುವಂತಹ ಯಾವುದೇ ಪುರಾವೆಗಳಿಲ್ಲ. ಅಲ್ಲದೆ ಪ್ರಕರಣದ ಉಳಿದ ಆರೋಪಿಗಳಿಗೆ ಜಾಮೀನು ನೀಡಲಾಗಿದೆ. ಪ್ರಕರಣದಲ್ಲಿ ವಿಶ್ವಾಸದ ಪ್ರಶ್ನೆ ಉದ್ಭವಿಸುವುದಿಲ್ಲವಾದ್ದರಿಂದ ನಂಬಿಕೆ ದ್ರೋಹದ ಪ್ರಶ್ನೆ ಮೂಡುವುದಿಲ್ಲ. ಜೊತೆಗೆ ಟಿಆರ್‌ಪಿ ಹಗರಣ ನಡೆಯುವುದಕ್ಕೆ ಬಹು ಹಿಂದೆ ಅಂದರೆ 2019ರ ನವೆಂಬರ್‌ನಲ್ಲಿಯೇ ಅವರು ಬಾರ್ಕ್‌ ಸಂಸ್ಥೆಯ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಕುಲಕರ್ಣಿ ವಿವರಿಸಿದರು.

ಆದರೆ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಶಿಶೆರ್‌ ಹಿರೆ ಅವರು ಪೊಲೀಸರು ಪತ್ತೆ ಹಚ್ಚಿರುವ ಸಾಕ್ಷ್ಯಗಳಿಂದ ಪ್ರಕರಣದಲ್ಲಿ ದಾಸ್‌ಗುಪ್ತ ಅವರ ಪಾತ್ರ ಇದೆ ಎಂಬುದು ಸಾಬೀತಾಗಿದೆ ಎಂದು ವಾದಿಸಿ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ನ್ಯಾಯಾಲಯ ದಾಸ್‌ಗುಪ್ತ ಅವರಿಗೆ ಜಾಮೀನು ನಿರಾಕರಿಸಿತು.