ಸುದ್ದಿಗಳು

ದೆಹಲಿ ನ್ಯಾಯಾಲಯದ ನ್ಯಾಯಾಧೀಶೆಗೆ ಶಿಕ್ಷೆಗೊಳಗಾದ ಅಪರಾಧಿ ಮತ್ತು ವಕೀಲರಿಂದ ಬೆದರಿಕೆ: ಶೋಕಾಸ್‌ ನೋಟಿಸ್‌ ಜಾರಿ

ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ತಿಳಿಸಲಾಗುವುದು ಎಂದು ನ್ಯಾಯಾಧೀಶೆ ಹೇಳಿದರು.

Bar & Bench

ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಆರೋಪಿ ಮತ್ತು ಆತನ ಪರ ವಕೀಲರು ದೆಹಲಿ ನ್ಯಾಯಾಲಯದ ನ್ಯಾಯಾಧೀಶೆಗೆ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.

ತನ್ನ ಪರ ಆದೇಶ ನೀಡದ ನ್ಯಾಯಾಧೀಶರ ಮೇಲೆ ಆರೋಪಿ ವಸ್ತುವೊಂದನ್ನು ಎಸೆಯಲು ಮುಂದಾದ. ನಂತರ ತನಗೆ ಅನುಕೂಲಕರವಾದ ತೀರ್ಪು ಪಡೆಯುವುದಕ್ಕಾಗಿ ಏನು ಬೇಕಾದರೂ ಮಾಡುವಂತೆ ತನ್ನ ಪರ ವಕೀಲರಿಗೆ ಸೂಚಿಸಿದ.

 “ನಿನ್ನನ್ನು ನೀನು ಏನಂದುಕೊಂಡಿದ್ದೀಯಾ…ಹೊರಗಡೆ ಸಿಗು ನೋಡಿಕೊಳ್ತೇವೆ ಜೀವಂತ ಮನೆಗೆ ಹೇಗೆ ಹೋಗುತ್ತೀಯಾ ಅಂತ?” ಎಂದು ಆರೋಪಿ ಬೆದರಿಕೆ ಹಾಕಿರುವುದನ್ನು ಏಪ್ರಿಲ್ 2ರಂದು ನ್ಯಾಯಾಲಯ ನೀಡಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ನೆಗೋಷಬಲ್‌ ಇನ್‌ಸ್ಟ್ರುಮೆಂಟ್‌ ಕಾಯಿದೆಯಡಿ ರೂಪುಗೊಂಡಿರುವ ನ್ಯಾಯಾಲಯದ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಶಿವಾಂಗಿ ಮಂಗ್ಳಾ ಅವರು ಕಾಯಿದೆಯ ಸೆಕ್ಷನ್ 138 (ಚೆಕ್ ಬೌನ್ಸ್‌) ಅಡಿಯಲ್ಲಿ ಆರೋಪಿ ತಪ್ಪಿತಸ್ಥ ಎಂದು ಘೋಷಿಸಿ ಮುಂದಿನ ವಿಚಾರಣೆಯ ದಿನ ಸಿಆರ್‌ಪಿಸಿ ಸೆಕ್ಷನ್‌ 437 ಎ ಅಡಿ ಜಾಮೀನು ಬಾಂಡ್‌ ಒಪ್ಪಿಸುವಂತೆ ನಿರ್ದೇಶಿಸಿದರು.

ಬಳಿಕ ಆರೋಪಿ ಮತ್ತು ಆತನ ಪರ ವಕೀಲರು ತನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದು ಹುದ್ದೆಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರಿದ್ದಾರೆ. ಆರೋಪಿಯನ್ನು ಖುಲಾಸೆಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ತನ್ನ ವಿರುದ್ಧ ದೂರು ದಾಖಲಿಸುವುದಾಗಿ ಮತ್ತು ಬಲವಂತದಿಂದ ರಾಜೀನಾಮೆ ಪಡೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆದೇಶದಲ್ಲಿ ನ್ಯಾಯಾಧೀಶೆ ಮಂಗ್ಳಾ ದಾಖಲಿಸಿದ್ದಾರೆ.

ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ತಿಳಿಸಲಾಗುವುದು ಎಂದು ನ್ಯಾಯಾಧೀಶೆ ಹೇಳಿದರು. ಇದೇ ವೇಳೆ ಅಪರಾಧಿ ಅತುಲ್‌ ಕುಮಾರ್‌ ಪರ ವಕೀಲರಿಗೆ ಶೋಕಾಸ್‌ ನೋಟಿಸ್‌ ನೀಡಿದ ನ್ಯಾಯಾಧೀಶೆ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೂಡಲು ಹೈಕೋರ್ಟ್‌ಗೆ ಏಕೆ ಶಿಫಾರಸ್ಸು ಮಾಡಬಾರದು ಎಂಬುದಕ್ಕೆ ಮುಂದಿನ ವಿಚಾರಣೆ ಹೊತ್ತಿಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ.