High Court of Karnataka 
ಸುದ್ದಿಗಳು

ಹೆಬ್ಬಾಳ-ಸಿಲ್ಕ್‌ಬೋರ್ಡ್‌ ಸುರಂಗ ಮಾರ್ಗ: ಫೆಬ್ರವರಿ ಅಂತ್ಯಕ್ಕೆ ಕಾರ್ಯಾದೇಶ ಎಂಬ ವರದಿ ಅಲ್ಲಗಳೆದ ಸರ್ಕಾರ

“ಫೆಬ್ರವರಿ ಅಂತ್ಯಕ್ಕೆ ಕಾರ್ಯಾದೇಶ ನೀಡುವುದರಲ್ಲಿ ವಾಸ್ತವಾಂಶವಿಲ್ಲ. ಅದು ಸಂಪೂರ್ಣ ಸುಳ್ಳು. ಆ ಕುರಿತು ನಾನು ನ್ಯಾಯಾಲಯಕ್ಕೆ ಭರವಸೆ ನೀಡುತ್ತೇನೆ” ಎಂದ ಅಡ್ವೊಕೇಟ್‌ ಜನರಲ್.

Bar & Bench

ಬೆಂಗಳೂರಿನ ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ವರೆಗೆ ಜೋಡಿ ಸುರಂಗ ಮಾರ್ಗದ ಯೋಜನೆ ಕಾಮಗಾರಿ ಆರಂಭಿಸಲು ಫೆಬ್ರವರಿ ಅಂತ್ಯಕ್ಕೆ ಸರ್ಕಾರವು ಕಾರ್ಯಾದೇಶ ನೀಡಲಿದೆ ಎಂಬುದು ಸುಳ್ಳು ಎಂದು ರಾಜ್ಯ ಅಡ್ವೋಕೇಟ್‌ ಜನರಲ್‌ ಅವರು ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ಸ್ಪಷ್ಟಪಡಿಸಿದರು.

ಸುರಂಗ ಮಾರ್ಗ ನಿರ್ಮಾಣಕ್ಕೆ ಕರೆದಿರುವ ಟೆಂಡರ್‌ ರದ್ದುಪಡಿಸುವಂತೆ ಕೋರಿ ರಂಗಭೂಮಿ ನಿರ್ದೇಶಕ ಪ್ರಕಾಶ್ ಬೆಳವಾಡಿ ಮತ್ತು ಡಾ.ಆದಿಕೇಶವುಲು ರವೀಂದ್ರ ಸೇರಿದಂತೆ ಮತ್ತಿತರರು ಸಲ್ಲಿಸಿರುವ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಅಡ್ವೋಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸ್ವಲ್ಪ ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ಅರ್ಜಿದಾರರ ಪರ ವಕೀಲರು “ಯೋಜನೆ ಕಾಮಗಾರಿ ಕೈಗೆತ್ತಿಗೊಳ್ಳಲು ಫೆಬ್ರವರಿ ಅಂತ್ಯಕ್ಕೆ ಸರ್ಕಾರ ಕಾರ್ಯಾದೇಶ ನೀಡಲಿದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ” ಎಂದು ಪೀಠದ ಗಮನಕ್ಕೆ ತಂದರು.

ಅದಕ್ಕೆ ಅಡ್ವೋಕೇಟ್‌ ಜನರಲ್‌ ಅವರು “ಫೆಬ್ರವರಿ ಅಂತ್ಯಕ್ಕೆ ಕಾರ್ಯಾದೇಶ ನೀಡುವುದರಲ್ಲಿ ವಾಸ್ತವಾಂಶವಿಲ್ಲ. ಅದು ಸಂಪೂರ್ಣ ಸುಳ್ಳು. ಆ ಕುರಿತು ನಾನು ನ್ಯಾಯಾಲಯಕ್ಕೆ ಭರವಸೆ ನೀಡುತ್ತೇನೆ” ಎಂದರು.

ಮತ್ತೊಬ್ಬ ಅರ್ಜಿದಾರರ ಪರ ವಕೀಲರು “ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಸುರಂಗ ಮಾರ್ಗ ನಿರ್ಮಾಣಕ್ಕೆ ಯೋಜನೆಗೆ ರೂಪಿಸಿದ ಮತ್ತು ಭೂ ಸರ್ವೇ ನಡೆಸಿರುವ ನವ ದೆಹಲಿಯ ರೋಡಿಕ್‌ ಕನ್ಸಲ್‌ಟೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಆಲ್ಟಿನೋಕ್‌ ಕನ್ಸಲ್‌ಟಿಂಗ್‌ ಎಂಜಿನಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌ಗೆ ಅರ್ಜಿ ಸಂಬಂಧ ನ್ಯಾಯಾಲಯ ನೀಡಿರುವ ನೋಟಿಸ್‌ ಕಳುಹಿಸಲಾಗಿತ್ತು. ಆದರೆ, ಆ ಸಂಸ್ಥೆಗಳು ವಿಳಾಸದಲ್ಲಿಲ್ಲ ಎಂಬುದಾಗಿ ಹಿಂಬರಹ ಬಂದಿದೆ” ಎಂದು ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಫೆಬ್ರವರಿ 23ಕ್ಕೆ ಮುಂದೂಡಿತು. ಜೊತೆಗೆ, ರೋಡಿಕ್‌ ಕನ್ಸಲ್‌ಟೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಆಲ್ಟಿನೋಕ್‌ ಕನ್ಸಲ್‌ಟಿಂಗ್‌ ಎಂಜಿನಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌ಗೆ ನ್ಯಾಯಾಲಯ ಜಾರಿಗೊಳಿಸಿರುವ ನೋಟಿಸ್‌ ಅನ್ನು ಅರ್ಜಿದಾರರು ಖುದ್ದಾಗಿ ತಲುಪಿಸಬಹುದು ಎಂದು ತಿಳಿಸಿತು.