Kangana Ranaut 
ಸುದ್ದಿಗಳು

[ರೈತರ ವಿರುದ್ಧ ಟ್ವೀಟ್] ಕಂಗನಾ ಅರ್ಜಿಗೆ ಸಂಬಂಧಿಸಿದಂತೆ ಕ್ಯಾತ್ಸಂದ್ರ ಪೊಲೀಸರಿಗೆ ನೋಟಿಸ್ ನೀಡಿದ ಕರ್ನಾಟಕ ಹೈಕೋರ್ಟ್

ಪೊಲೀಸರು ಬಾಡಿ ವಾರೆಂಟ್ ನೀಡಿರುವ ಹಿನ್ನೆಲೆಯಲ್ಲಿ ತಮ್ಮ ಕಕ್ಷೀದಾರರಿಗೆ ಮಧ್ಯಂತರ ರಕ್ಷಣೆ ನೀಡುವಂತೆ ಕಂಗನಾ ಪರ ವಕೀಲರು ಮನವಿ ಮಾಡಿದರು.

Bar & Bench

ರೈತರ ಪ್ರತಿಭಟನೆ ವಿರುದ್ಧ ಆಕ್ಷೇಪಾರ್ಹ ಟ್ವೀಟ್‌ ಮಾಡಿದ ಕುರಿತಂತೆ ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಿಸಲು ಮತ್ತು ವಿಚಾರಣೆ ನಡೆಸಲು ತುಮಕೂರಿನ ವಿಚಾರಣಾ ನ್ಯಾಯಾಲಯವೊಂದು ನೀಡಿರುವ ಆದೇಶ ಪ್ರಶ್ನಿಸಿ ಬಾಲಿವುಡ್‌ ನಟಿ ಕಂಗನಾ ರನೌತ್‌ ಅವರು ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ ತುಮಕೂರಿನ ಕ್ಯಾತ್ಸಂದ್ರ ಪೊಲೀಸರಿಗೆ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ. ಅಲ್ಲದೆ ನಟಿ ವಿರುದ್ಧ ದೂರು ದಾಖಲಿಸಿದ ವಕೀಲ ಎಲ್‌ ರಮೇಶ್‌ ನಾಯಕ್‌ ಅವರಿಗೆ ಕೂಡ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರಿದ್ದ ಪೀಠ ನೋಟಿಸ್‌ ನೀಡಿದೆ.

ಪೊಲೀಸರು ಬಾಡಿ ವಾರೆಂಟ್‌ ನೀಡಿರುವ ಹಿನ್ನೆಲೆಯಲ್ಲಿ ತಮ್ಮ ಕಕ್ಷೀದಾರರಿಗೆ ಮಧ್ಯಂತರ ರಕ್ಷಣೆ ನೀಡುವಂತೆ ಕಂಗನಾ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ ರಮೇಶ್‌ ನಾಯಕ್‌ ಅವರು ಅರ್ಜಿದಾರರು ತಮ್ಮ ಅರ್ಜಿಯ ಪ್ರತಿಯನ್ನು ಸಲ್ಲಿಸಲು ಸೂಚಿಸುವಂತೆ ನ್ಯಾಯಾಲಯವನ್ನು ಕೋರಿದರು.

ಮಧ್ಯಂತರ ರಕ್ಷಣೆ ಕುರಿತ ಅಹವಾಲನ್ನು ಮುಂದಿನ ಗುರುವಾರ (ಮಾರ್ಚ್‌ 25) ಪರಿಗಣಿಸಲಾಗುವುದು ಎಂದ ನ್ಯಾಯಾಲಯ ದೂರಿನ ಪ್ರತಿಯನ್ನು ಒದಗಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು.

ಸೆಪ್ಟೆಂಬರ್‌ 21ರಂದು ಕಂಗನಾ “ಕೃಷಿ ಕಾಯಿದೆಗಳ ಬಗ್ಗೆ ತಪ್ಪು ಮಾಹಿತಿಯನ್ನು ನೀಡುತ್ತಿರುವ ಜನರೇ ಈ ಹಿಂದೆ ಸಿಎಎ ಬಗ್ಗೆಯೂ ತಪ್ಪು ಮಾಹಿತಿ ನೀಡಿ ಗಲಭೆಗೆ ಕಾರಣರಾಗಿದ್ದರು. ಇವರು ದೇಶದಲ್ಲಿ ಭಯದ ಸ್ಥಿತಿಯನ್ನು ಉಂಟು ಮಾಡುತ್ತಿದ್ದು ಭಯೋತ್ಪಾದಕರಾಗಿದ್ದಾರೆ” ಎಂದು ಟ್ವೀಟ್‌ ಮಾಡಿದ್ದರು.

“ಇಂತಹ ಟ್ವೀಟ್‌ಗಳಿಗೆ ಅನುಮತಿ ನೀಡಿದರೆ ದೇಶದ ರೈತರಿಗೆ ಅಪಾರವಾದ ಮತ್ತು ಸರಿಪಡಿಸಲು ಸಾಧ್ಯವಿಲ್ಲದಷ್ಟು ಹಾನಿ ಉಂಟಾಗುತ್ತದೆ” ಎಂದು ರಮೇಶ್‌ ನಾಯಕ್‌ ಅವರು ತುಮಕೂರಿನ ಪ್ರಧಾನ ಸಿವಿಲ್‌ ಜಡ್ಜ್‌ (ಜೂನಿಯರ್‌ ಡಿವಿಷನ್‌) ಮತ್ತು ಜೆಎಂಎಫ್‌ಸಿ – II ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಕ್ಯಾತ್ಸಂದ್ರ ಪೊಲೀಸರು ಅಕ್ಟೋಬರ್‌ 12ರಂದು ನಟಿ ವಿರುದ್ಧ ಎಫ್‌ಐರ್‌ ದಾಖಲಿಸಿಕೊಂಡಿದ್ದರು.