Gangadhara C M, Judge, NIA Special Court
Gangadhara C M, Judge, NIA Special Court 
ಸುದ್ದಿಗಳು

ಐಸಿಸ್‌ಗೆ ಟ್ವೀಟ್‌ ಬೆಂಬಲ: ಬಿ.ಟೆಕ್‌ ಪದವೀಧರನಿಗೆ 10 ವರ್ಷ ಜೈಲು, 2.15 ಲಕ್ಷ ದಂಡ ವಿಧಿಸಿದ ಎನ್‌ಐಎ ನ್ಯಾಯಾಲಯ

Bar & Bench

ಕುಖ್ಯಾತ ಭಯೋತ್ಪಾದಕ ಸಂಘಟನೆ ಐಸಿಸ್‌/ಐಎಸ್‌ಐಎಲ್‌ ಪರವಾಗಿ ಟ್ವಿಟರ್‌ ಖಾತೆ ತೆರೆದು ಅದರಲ್ಲಿ ಸಾವಿರಾರು ಟ್ವೀಟ್‌ ಮತ್ತು ರೀಟ್ವೀಟ್‌ಗಳ ಮೂಲಕ ಕ್ರೂರ ಚಟುವಟಿಕೆಗೆ ಬೆಂಬಲ ನೀಡಿದ ಆರೋಪದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ಪಶ್ಚಿಮ ಬಂಗಾಳದ ಬಿ.ಟೆಕ್‌ ಪದವೀಧರ ಮೆಹ್ದಿ ಮಸ್ರೂರ್‌ ಬಿಸ್ವಾಸ್‌ನನ್ನು ದೋಷಿ ಎಂದು ಘೋಷಿಸಿರುವ ಎನ್‌ಐಎ ವಿಶೇಷ ನ್ಯಾಯಾಲಯವು 10 ವರ್ಷ ಶಿಕ್ಷೆ ವಿಧಿಸಿದ್ದು, ಒಟ್ಟಾರೆ 2.15 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಐಸಿಸ್‌ ಮೃದುಧೋರಣೆ ಹೊಂದಿದ್ದ @ಶಮಿವಿಟ್ನೆಸ್‌ ಟ್ವಿಟರ್‌ ಹ್ಯಾಂಡಲ್‌ ತೆರೆದು ಚಟುವಟಿಕೆ ನಡೆಸುತ್ತಿದ್ದ ಬಿಸ್ವಾನನ್ನು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಿ ಎಂ ಗಂಗಾಧರ ಅವರು ದೋಷಿ ಎಂದು ಘೋಷಿಸಿದ್ದಾರೆ.

“ಬಿ.ಟೆಕ್‌ ಪದವೀಧರನಾದ ದೋಷಿಯು ತನ್ನ ಟ್ವಿಟರ್‌ ಖಾತೆಯನ್ನು ನಿರಂತರವಾಗಿ ತೆರೆಯುತ್ತಿರಲಿಲ್ಲ. ಆದರೆ, ಆಗಾಗ್ಗೆ ಖಾತೆ ತೆರೆದು ಐಸಿಸ್‌/ಐಎಸ್‌ಐಎಲ್‌ಗೆ ಬೆಂಬಲಿಸುವುದರ ಪರಿಣಾಮ ಅರಿವಿಲ್ಲದೇ ಟ್ವೀಟ್‌ ಮಾಡಿದ್ದಾನೆ. ತನ್ನ ಗುರುತು ಮುಚ್ಚಿಡಲು ಪ್ರಾಕ್ಸಿ ಐಪಿ ಅಡ್ರೆಸ್‌ ಮೂಲಕ ಟ್ವಿಟರ್‌ ಖಾತೆಯನ್ನು ಬಿಸ್ವಾಸ್‌ ತೆರೆಯುತ್ತಿದ್ದನು. ಇದರಿಂದ ತಿಳಿಯುವುದೇನೆಂದರೆ ಟ್ವಿಟರ್‌ ಖಾತೆ ತೆರೆಯುವ ಸ್ಪಷ್ಟ ಉದ್ದೇಶದ ಅರಿವು ಆತನಗಿತ್ತು. ಬಿ.ಟೆಕ್‌ ಪದವೀಧರನಾದ ಬಿಸ್ವಾಸ್‌ಗೆ ಜಗತ್ತಿನ ಜ್ಞಾನದ ಅರಿವಿದ್ದು, ಅಪರಾಧ ಎಸಗುವ ಸಂದರ್ಭದಲ್ಲಿ ಅದರ ಪರಿಣಾಮದ ಅರಿವು ಆತನಿಗೆ ಇತ್ತು. ಒಂದು ಟ್ವೀಟ್‌ನಲ್ಲಿ ಆತ ಪ್ರೌಢಶಾಲೆಯ ದಿನಗಳಿಂದಲೂ ಇಸ್ಲಾಮಿಕ್‌ ಸ್ಟೇಟ್‌ ಆಫ್‌ ಇರಾಕ್‌ ಚಟುಟವಿಕೆಯನ್ನು ಗಮನಿಸುತ್ತಿದ್ದೇನೆ ಎಂದು ಹೇಳಿದ್ದಾನೆ. ಇದರ ಅರ್ಥ ಟ್ವಿಟರ್‌ ಖಾತೆ ತೆರಯುವುದಕ್ಕೂ ಮುಂಚಿನಿಂದಲೂ ಆತ ಯೋಜನೆ ಹೊಂದಿದ್ದ ಎಂಬುದಾಗಿದೆ" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ದಾಖಲಿಸಿದೆ.

ಮುಂದುವರೆದು, "ಐಸಿಸ್‌ ಚಟುವಟಿಕೆ ಬೆಂಬಲಿಸಿ ದೋಷಿಯು ಹತ್ತು, ಇಪ್ಪತ್ತು ಅಥವಾ ನೂರು ಬಾರಿ ಟ್ವೀಟ್‌ ಮಾಡಿಲ್ಲ. ಸಾವಿರಾರು ಟ್ವೀಟ್‌/ರೀಟ್ವೀಟ್‌ ಮಾಡಿದ್ದಾನೆ. ಆ ಮೂಲಕ ಬೇರೆ ಧರ್ಮದ ಜನರ ಸಾಮೂಹಿಕ ಕೊಲೆಗೆ ಬೆಂಬಲಿಸಿದ್ದು, ಐಸಿಸ್‌ ಹೋರಾಟಗಾರರನ್ನು ಹುತಾತ್ಮರು ಎಂದು ಬಿಂಬಿಸಿದ್ದಾನೆ. ಸಿರಿಯಾ ಸರ್ಕಾರದ ಮುಖ್ಯಸ್ಥರು ಮತ್ತು ಅವರ ಸುತ್ತಲಿನವರ ಕೊಲೆ ಮಾಡುವುದಕ್ಕೆ ದೋಷಿ ಸಲಹೆ ನೀಡಿದ್ದು, ಪ್ರಜಾಪ್ರಭುತ್ವದ ವಿರುದ್ಧದ ಹೋರಾಟ ಮಾಡಿ, ಸಿರಿಯಾ ಮತ್ತು ಇರಾಕ್‌ ವಿರುದ್ಧ ದಂಗೆ ಏಳಲು ಅಗತ್ಯವಾದ ಶಸ್ತ್ರಾಸ್ತ್ರ ಸಂಗ್ರಹಿಸುವುದಕ್ಕೆ ಸಲಹೆ ಮಾಡಿದ್ದಾನೆ. ಈ ಮೂಲಕ ಆರೋಪಿಯು ಹೀನ ಕೃತ್ಯ ಎಸಗಿದ್ದಾನೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ ಕಾನೂನುಬಾಹಿರ ಚಟುವಟಕೆಗಳ ನಿಷೇಧ ಕಾಯಿದೆ (ಯುಎಪಿಎ) ಸೆಕ್ಷನ್‌ 13ರ ಅಡಿ ಅಪರಾಧಕ್ಕೆ ಏಳು ವರ್ಷ ಶಿಕ್ಷೆ 25,000 ದಂಡ, ಸೆಕ್ಷನ್‌ 18-ಬಿ ಅಡಿ ಅಪರಾಧಕ್ಕೆ 10 ವರ್ಷ ಶಿಕ್ಷೆ ಮತ್ತು 50,000 ದಂಡ, ಸೆಕ್ಷನ್‌ 39ರ ಅಡಿ ಅಪರಾಧಕ್ಕೆ 10 ವರ್ಷ ಶಿಕ್ಷೆ ಮತ್ತು 50,000 ದಂಡ, ಐಪಿಸಿ ಸೆಕ್ಷನ್‌ಗಳಾದ 125ರ ಅಡಿ ಅಪರಾಧಕ್ಕೆ 10 ವರ್ಷ ಶಿಕ್ಷೆ ಮತ್ತು 50,000 ದಂಡ, 153ಎ ಅಡಿ ಅಪರಾಧಕ್ಕೆ ಮೂರು ವರ್ಷ ಶಿಕ್ಷೆ 10,000 ದಂಡ, 505(1)(ಬಿ) ಅಡಿ ಅಪರಾಧಕ್ಕೆ ಮೂರು ವರ್ಷ ಶಿಕ್ಷೆ 10,000 ದಂಡ, 505(1)(ಸಿ) ಅಡಿ ಅಪರಾಧಕ್ಕೆ ಮೂರು ವರ್ಷ ಶಿಕ್ಷೆ 10,000 ದಂಡ, 505(2) ಅಡಿ ಅಪರಾಧಕ್ಕೆ ಮೂರು ವರ್ಷ ಶಿಕ್ಷೆ 10,000 ದಂಡ ವಿಧಿಸಲಾಗಿದೆ. ಶಿಕ್ಷೆಯು ಏಕಕಾಲಕ್ಕೆ ಜಾರಿಯಾಗಲಿದೆ. ನ್ಯಾಯಾಂಗ ಬಂಧನದಲ್ಲಿ ಆರೋಪಿಯು ಕಳೆದಿರುವ ಅವಧಿಯನ್ನು ಕಳೆದು ಅವಧಿಯ ಶಿಕ್ಷೆಯನ್ನು ದೋಷಿ ಅನುಭವಿಸಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

CCB Vs Mehdi Masroor Biswas.pdf
Preview