ಬೆಂಗಳೂರಿನ ಲಾಲ್‌ಬಾಗ್ ಸಸ್ಯಕಾಶಿಯಲ್ಲಿರುವ ಅತ್ಯಂತ ಪುರಾತನವಾದ ಶಿಲಾ ರಚನೆ ಪೆನಿನ್ಸುಲರ್ ಗ್ನೀಸ್ ಸ್ಮಾರಕ ಅಥವಾ ಲಾಲ್‌ಬಾಗ್ ಬಂಡೆಗೆ ಬಂಧಿಸಿದಂತೆ ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ (ಜಿಎಸ್‌ಐ) ಸಂಸ್ಥೆ ಸಿದ್ಧಪಡಿಸಿರುವ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ. ಈ ಸ್ಮಾರಕ ಸ್ಥಳಾಂತರವು ಮಹತ್ವಕಾಂಕ್ಷಿ ಯೋಜನೆಯಾದ 16.7 ಕಿ ಮೀ ಬೆಂಗಳೂರು ಅವಳಿ ಸುರಂಗ ಮಾರ್ಗ ಯೋಜನೆಗೆ ಸವಾಲಿನದು ಎಂದು ಪರಿಗಣಿಸಲಾಗಿದೆ.
ಸುರಂಗ ಮಾರ್ಗ ಯೋಜನೆಗೆ ಆಕ್ಷೇಪಿಸಿ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರ ವಿಭಾಗೀಯ ಪೀಠ ನಡೆಸಿತು.
ಅರ್ಜಿದಾರರ ಪರವಾಗಿ ಹಾಜರಾಗಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ಮತ್ತು ವಕೀಲ ತೇಜಸ್ವಿ ಸೂರ್ಯ ಅವರು “ಜಿಎಸ್‌ಐ ವರದಿ ಸಲ್ಲಿಸಲು ಸಂಬಂಧಿತ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕು” ಎಂದು ಕೋರಿದರು. ಈ ಕೋರಿಕೆಯನ್ನು ಪುರಸ್ಕರಿಸಿದ ಪೀಠವು ವರದಿ ಸಲ್ಲಿಸಲು ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶಿಸಿತು.
ಇದೇ ಸುರಂಗ ಮಾರ್ಗ ಯೋಜನೆ ಪ್ರಶ್ನಿಸಿರುವ ಅರ್ಜಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ ಪೀಠವು ಹೆಬ್ಬಾಳ ಕೆರೆಯಲ್ಲಿ ಸುರಂಗ ಮಾರ್ಗ ಹಾದುಹೋಗುವ ಹಿನ್ನೆಲೆಯಲ್ಲಿ ಎದುರಾಗಿರುವ ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ ಎಂಜಿನಿಯರ್ ಅವರಿಂದ ತಾಂತ್ರಿಕ ಉಪನ್ಯಾಸ (ಪ್ರೆಸೆಂಟೇಷನ್) ಏರ್ಪಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಸುರಂಗ ಮಾರ್ಗದಿಂದ ಹೆಬ್ಬಾಳ ಕೆರೆಗೆ ಒಳ ಹರಿವು ಅಥವಾ ಹೊರ ಹರಿವು ಹಾಗೂ ಅಂತರ್ಜಲದ ಹರಿವಿಗೆ ಅಡ್ಡಿಪಡಿಸಲಿದೆಯೇ ಎಂಬುದನ್ನು ಉಪನ್ಯಾಸದಲ್ಲಿ ಸ್ಪಷ್ಟಪಡಿಸಬೇಕು. ಕೆರೆಯ ತಳದಲ್ಲಿ ಸುರಂಗ ಮಾರ್ಗ ಹಾದು ಹೋಗುವುದರಿಂದ ಇದು ಹೆಬ್ಬಾಳ ಕೆರೆಗೆ ಸೇರುವ ರಾಜಕಾಲುವೆ ಜಾಲಕ್ಕೆ ಅಡ್ಡಿಪಡಿಸುವ ಸಾಧ್ಯತೆಯನ್ನು ಅರ್ಜಿದಾರರು ವ್ಯಕ್ತಪಡಿಸಿದ್ದಾರೆ ಎಂದು ಪೀಠ ಹೇಳಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲೆ ಸ್ನೇಹಾ ನಾಗರಾಜ್ ಅವರು “ಪ್ರಸ್ತಾವಿತ ಯೋಜನೆಯು ಕೆರೆಯ ಬಫರ್ ವಲಯದಲ್ಲಿ ಮಾತ್ರ ಹಾದು ಹೋಗುವುದಿಲ್ಲ, ಅದು ಕೆರೆಜಾಗದಲ್ಲಿ ಹೋಗುತ್ತದೆ. ಹೆಬ್ಬಾಳ ಕೆರೆಯು 136 ಎಕರೆ ಇದ್ದು, 3.5 ಎಕರೆ ಭೂಮಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಯೋಜನೆಗೆ ಸ್ವಾಧೀನಪಡಿಸಿಕೊಂಡಿದೆ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯಿದೆ ಅಡಿ ಪ್ರಸ್ತಾವಿತ ಯೋಜನೆಗೆ ಕೆರೆಯ ಜಾಗವನ್ನು ವರ್ಗಾಯಿಸಲು ಶಾಸನಬದ್ಧ ಅಧಿಕಾರವಿಲ್ಲ” ಎಂದರು.
ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಪ್ರಸ್ತಾವಿತ ಯೋಜನೆಯು ಹೆಬ್ಬಾಳ ಕೆರೆಯ ಒಳಹರಿವು ಮತ್ತು ಹೊರ ಹರಿವಿಗೆ ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲ” ಎಂದರು.
ಆಗ ಪೀಠವು “ಅರ್ಜಿದಾರರ ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ ಎಂಜಿನಿಯರ್ ತಾಂತ್ರಿಕ ಉಪನ್ಯಾಸ ನೀಡುವುದು ಒಳಿತು” ಎಂದಿತು. ಇದಕ್ಕೆ ಎಜಿ ಒಪ್ಪಿಗೆ ಸೂಚಿಸಿದರು.
ವಿಸ್ತೃತ ಯೋಜನಾ ವರದಿ (ಡಿಪಿಆರ್) ಉಲ್ಲೇಖಿಸಿ ಅರ್ಜಿದಾರರು ಇದು ಕೆರೆಯ ಒಳ ಮತ್ತು ಹೊರ ಹರಿವಿಗೆ ಹಾನಿ ಮಾಡುತ್ತದೆ ಎಂದು ವಾದಿಸಿದ್ದಾರೆ. ಸುರಂಗ ಮಾರ್ಗ ಯೋಜನೆಗೆ ಒಪ್ಪಿಗೆ ನೀಡುವುದಕ್ಕೂ ಮುನ್ನ ಸ್ವತಂತ್ರವಾದ ಜಲವಿಜ್ಞಾನ, ಜಲಭೂವಿಜ್ಞಾನ ಅಥವಾ ಪರಿಸರ ಅಧ್ಯಯನ ನಡೆಸಲಾಗಿಲ್ಲ ಎಂಬುದು ಅರ್ಜಿದಾರರ ವಾದವಾಗಿದೆ.
ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಸೆಪ್ಟೆಂಬರ್ 10ಕ್ಕೆ ನಿಗದಪಡಿಸಿದೆ.