ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕ ವಹೀದ್ ಉರ್ ರೆಹಮಾನ್ ಪರ್‍ರ, (ವಹೀದ್ ಪರ್‍ರ,) ಅವರಿಗೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ನೀಡಿದ ಜಾಮೀನನ್ನು ಸುಪ್ರೀಂ ಕೋರ್ಟ್ ಕಳೆದ ವಾರ ಎತ್ತಿ ಹಿಡಿದಿದೆ. [ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಮತ್ತು ವಹೀದ್ ಉರ್ ರೆಹಮಾನ್ ಪರ್‍ರ ನಡುವಣ ಪ್ರಕರಣ].
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಎಸ್ ಓಕಾ ಅವರಿದ್ದ ಪೀಠ ಈ ಆದೇಶ ನೀಡಿದೆ. ಆದರೂ ಯುಎಪಿಎ ಕುರಿತಂತೆ ಹೈಕೋರ್ಟ್ ಆದೇಶದಲ್ಲಿ ಮಾಡಲಾಗಿರುವ ಅವಲೋಕನಗಳಿಗೆ ತನ್ನ ಸಮ್ಮತಿ ಇಲ್ಲ ಎಂದು ಅದು ಇದೇ ವೇಳೆ ಸ್ಪಷ್ಟಪಡಿಸಿದೆ.
"ಜಾಮೀನು ಮಂಜೂರಾತಿ ವಿಚಾರದಲ್ಲಿ ನಾವು ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಆದರೆ ಯುಎಪಿಎ ಕಾಯಿದೆಯ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ಆಕ್ಷೇಪಿತ ಆದೇಶದಲ್ಲಿ ಬರುವ ಯಾವುದೇ ಅವಲೋಕನಗಳಿಗೆ ಖಂಡಿತವಾಗಿಯೂ ನಮ್ಮ ಸಮ್ಮತಿ ಇಲ್ಲ" ಎಂದು ಆದೇಶ ಹೇಳಿದೆ.
ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿ ಸಂಘಟನೆಗಳೊಂದಿಗೆ ರಹಸ್ಯ ನಂಟು ಹೊಂದಿದ ಆರೋಪ ಪರ್‍ರ ಎದುರಿಸುತ್ತಿದ್ದಾರೆ. ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎನಿಂದ ಬಂಧಿತರಾಗಿದ್ದ ಅವರಿಗೆ ಎನ್‌ಐಎ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಆದರೆ ಜಮ್ಮು ಕಾಶ್ಮೀರ ಹೈಕೋರ್ಟ್ ಮೇ 25ರಂದು ಅದನ್ನು ರದ್ದುಗೊಳಿಸಿ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಕಾಶ್ಮೀರ ಕೇಂದ್ರಾಡಳಿತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.