UAPA 
ಸುದ್ದಿಗಳು

ಪಾಕ್ ಪ್ರಾಯೋಜಿತ ಕಾಶ್ಮೀರಿ ಸಂಘಟನೆಗಳ ಮೇಲೆ ನಿಷೇಧ: ಗೃಹ ಸಚಿವಾಲಯದ ಆದೇಶ ಎತ್ತಿಹಿಡಿದ ಯುಎಪಿಎ ನ್ಯಾಯಮಂಡಳಿ

ಮುಸ್ಲಿಂ ಲೀಗ್ ಜಮ್ಮು ಮತ್ತು ಕಾಶ್ಮೀರ (ಮಸರತ್ ಆಲಂ ಬಣ) ಹಾಗೂ ತೆಹ್ರೀಕ್ ಇ ಹುರಿಯತ್ ಜಮ್ಮು ಮತ್ತು ಕಾಶ್ಮೀರ ಇವು ಪ್ರತ್ಯೇಕತಾವಾದಿ ಚಟುವಟಿಕೆ ನಡೆಸುತ್ತಿರುವ ಪಾಕ್ ಪ್ರಾಯೋಜಿತ ಸಂಘಟನೆಗಳು ಎಂದು ನ್ಯಾಯಮಂಡಳಿ ಹೇಳಿದೆ.

Bar & Bench

ಜಮ್ಮು ಮತ್ತು ಕಾಶ್ಮೀರ ಮೂಲದ ಸಂಘಟನೆಗಳಾದ ಮುಸ್ಲಿಂ ಲೀಗ್ ಜಮ್ಮು ಮತ್ತು ಕಾಶ್ಮೀರ (ಮಸರತ್ ಆಲಂ ಬಣ) ಹಾಗೂ ತೆಹ್ರೀಕ್ ಇ ಹುರಿಯತ್ ಜಮ್ಮು ಮತ್ತು ಕಾಶ್ಮೀರವನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ಅಡಿ ಕಾನೂನುಬಾಹಿರ ಸಂಘಟನೆಗಳೆಂದು ಘೊಷಿಸುವ ಗೃಹ ಸಚಿವಾಲಯದ ಆದೇಶವನ್ನು ಯುಎಪಿಎ ನ್ಯಾಯಮಂಡಳಿ ಶನಿವಾರ ಎತ್ತಿಹಿಡಿದಿದೆ. 

ಕಾಶ್ಮೀರಿ-ಪ್ರತ್ಯೇಕತಾವಾದಿ ನಾಯಕ ದಿವಂಗತ ಸೈಯದ್ ಅಲಿ ಶಾ ಗಿಲಾನಿ ಅವರ ಮುಂದಾಳತ್ವದಲ್ಲಿ ರೂಪುಗೊಂಡಿದ್ದ ಈ ಸಂಘಟನೆಗಳ ಮೇಲೆ ಕೇಂದ್ರ ಹೇರಿದ್ದ ನಿಷೇಧವನ್ನು ನ್ಯಾಯಮಂಡಳಿ ಎತ್ತಿಹಿಡಿದಿದ್ದು ಮುಂದಿನ 5 ವರ್ಷಗಳ ಕಾಲ ನಿಷೇಧ ಜಾರಿಯಲ್ಲಿರುವಂತೆ ನೋಡಿಕೊಳ್ಳಲು ಸೂಚಿಸಿದೆ.

ಮುಂದಿನ ಐದು ವರ್ಷಗಳಲ್ಲಿ ಯಾವುದೇ ವ್ಯಕ್ತಿ ಈ ಸಂಘಟನೆಗಳ ಸದಸ್ಯ ಅಥವಾ ಸಹಾನುಭೂತಿ ಹೊಂದಿದವರು ಎಂದು ಹೇಳಿಕೊಂಡರೆ ಅವರು ಯುಎಪಿಎ ಅಡಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅದು ಹೇಳಿದೆ.

ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಸಚಿನ್ ದತ್ತಾ ಅವರು ನ್ಯಾಯಮಂಡಳಿಯ ಅಧ್ಯಕ್ಷತೆ ವಹಿಸಿದ್ದರು .

ಪಾಕಿಸ್ತಾನದೊಂದಿಗೆ ವಿಲೀನಗೊಳಿಸಲು ಮತ್ತು ಇಸ್ಲಾಂ ಆಡಳಿತ ಸ್ಥಾಪಿಸುವ ಉದ್ದೇಶದಿಂದ ರೂಪುಗೊಂಡ ಇವು ಪಾಕಿಸ್ತಾನದ ಪ್ರಾಯೋಜಿತ ಸಂಘಟನೆಗಳಾಗಿದ್ದು, ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ಉದ್ದೇಶದಿಂದ ಅಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ನಡೆಸುತ್ತಿವೆ ಎಂದು ಕೇಂದ್ರ ಸರ್ಕಾರ ಸಲ್ಲಿಸಿದ ಸಾಕ್ಷ್ಯಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಮಂಡಳಿ ತೀರ್ಮಾನಿಸಿತು.   

ಈ ಸಂಘಟನೆಗಳು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಹಫೀಜ್ ಸಯೀದ್‌ನ ಲಷ್ಕರ್-ಎ-ತೈಬಾ (ಎಲ್‌ಇಟಿ),ಇಫ್ತಿಕಾರ್‌ ಹೈದರ್ ರಾಣಾನ ಜಮಾತ್-ಉದ್-ದವಾ ಮತ್ತು ಸೈಯದ್ ಸಲಾವುದ್ದೀನ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಪರವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ಕೇಂದ್ರದ ವಾದವನ್ನು ನ್ಯಾಯಮಂಡಳಿ ಎತ್ತಿಹಿಡಿದಿದೆ.

ಕಾಶ್ಮೀರದಲ್ಲಿ ಉಗ್ರಗಾಮಿ ಕಾರ್ಯಾಚರಣೆಯನ್ನು ನಡೆಸಲು ಇಂತಹ ಭಯೋತ್ಪಾದಕ ಗುಂಪುಗಳು ನಿರಂತರ ಬೆಂಬಲ ನೀಡಿದ್ದವು ಎಂದು ದೂರಿ ಕೇಂದ್ರ ಸರ್ಕಾರ ಈ ವರ್ಷದ ಆರಂಭದಲ್ಲಿ ಕಾಶ್ಮೀರ ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಳಿದ ಏಳು ಸಂಘಟನೆಗಳನ್ನು ನಿಷೇಧಿಸಿತ್ತು.

ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು  ನೀನಾ ಬನ್ಸಾಲ್ ನೇತೃತ್ವದ ನ್ಯಾಯಮಂಡಳಿಗಳು ಈ ನಿಷೇಧ ಆದೇಶಗಳನ್ನು ಪರಿಶೀಲಿಸುತ್ತಿವೆ.