Eknath Shinde and Uddhav Thackeray , Supreme Court 
ಸುದ್ದಿಗಳು

ಶಾಸಕರ ಅನರ್ಹತೆ ಪ್ರಕರಣ: ಮಹಾರಾಷ್ಟ್ರ ಸ್ಪೀಕರ್‌ಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಮೊರೆ ಹೋದ ಉದ್ಧವ್ ಠಾಕ್ರೆ ಬಣ

ಅಚ್ಚರಿಯ ಬೆಳವಣಿಗೆಯಲ್ಲಿ ಎನ್‌ಸಿಪಿ ನಾಯಕ ಅಜಿತ್ ಪವಾರ್, ಪ್ರಫುಲ್ ಪಟೇಲ್, ಛಗನ್ ಭುಜಬಲ್ ಸೇರಿದಂತೆ ಎಂಟು ಶಾಸಕರು ಶಿಂಧೆ-ಫಡ್ನವೀಸ್ ಸರ್ಕಾರವನ್ನು ಸೇರಿದ ಬೆನ್ನಲ್ಲೇ ಶಾಸಕ ಪ್ರಭು ಈ ಮನವಿ ಸಲ್ಲಿಸಿದ್ದಾರೆ.

Bar & Bench

ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣ ಹಾಗೂ ಠಾಕ್ರೆ ಬಣಕ್ಕೆ ಸೇರಿದ ಶಾಸಕರ ವಿರುದ್ಧ ಬಾಕಿ ಇರುವ ಅನರ್ಹತೆ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ಗೆ ನಿರ್ದೇಶನ ನೀಡುವಂತೆ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಎನ್‌ಸಿಪಿ ನಾಯಕ ಅಜಿತ್ ಪವಾರ್ ಮತ್ತು ಪ್ರಫುಲ್ ಪಟೇಲ್ ಮತ್ತು ಛಗನ್ ಭುಜಬಲ್ ಸೇರಿದಂತೆ ಎಂಟು ಶಾಸಕರು ಶಿಂಧೆ ಸರ್ಕಾರದೊಂದಿಗೆ ಕೈಜೋಡಿಸಿದ ಹಿನ್ನೆಲೆಯಲ್ಲಿ ಶಿವಸೇನೆಯ (ಉದ್ಧವ್ ಬಣ) ಶಾಸಕ ಸುನಿಲ್ ಪ್ರಭು ಅವರು ಸುಪ್ರೀಂ ಕೋರ್ಟ್‌ಗೆ ಈ ಅರ್ಜಿ ಸಲ್ಲಿಸಿದ್ದಾರೆ.

ಬಾಕಿ ಉಳಿದಿರುವ ಅನರ್ಹತೆ ಅರ್ಜಿಗಳನ್ನು ಸೂಕ್ತ ಅವಧಿಯಲ್ಲಿ ನಿರ್ಧರಿಸುವಂತೆ ಸ್ಪೀಕರ್‌ಗೆ ಈ ಹಿಂದೆ ಮೇ 11ರಂದು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಸೂಚಿಸಿತ್ತು. ಆದರೆ, ಈವರೆಗೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಭು ತಮ್ಮ ಮನವಿಯಲ್ಲಿ ವಿವರಿಸಿದ್ದಾರೆ.

ಸ್ಪೀಕರ್‌ ಅವರು ತ್ವರಿತವಾಗಿ ಅನರ್ಹತೆ ಪ್ರಕರಣ ಇತ್ಯರ್ಥಪಡಿಸುವಂತೆ ಸಾಂವಿಧಾನಿಕ ನ್ಯಾಯಸಮ್ಮತತೆಯ ಅವಶ್ಯಕತೆಯು ಅವರಿಗೆ ಜವಾಬ್ದಾರಿ ವಹಿಸುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

“ಅನರ್ಹತೆಯ ಪ್ರಕ್ರಿಯೆಗಳನ್ನು ನಿರ್ಧರಿಸುವಲ್ಲಿ ಸ್ಪೀಕರ್ ಅವರ ನಿಷ್ಕ್ರಿಯತೆಯು ಗಂಭೀರವಾದ ಸಾಂವಿಧಾನಿಕ ಅನುಚಿತತೆಯಾಗಿದೆ. ಏಕೆಂದರೆ ಅವರ ನಿಷ್ಕ್ರಿಯತೆಯಿಂದಾಗಿ ಮುಖ್ಯಮಂತ್ರಿ ಸೇರಿದಂತೆ ಅನರ್ಹತೆಗೆ ಹೊಣೆಗಾರರಾಗಿರುವ ಶಾಸಕರು ವಿಧಾನಸಭೆಯಲ್ಲಿ ಮುಂದುವರಿಯಲು ಮತ್ತು ಮಹಾರಾಷ್ಟ್ರ ಸರ್ಕಾರದಲ್ಲಿ ಜವಾಬ್ದಾರಿಯುತ ಸ್ಥಾನ ಅಲಂಕರಿಸಲು ಅನುವು ಮಾಡಿಕೊಡುತ್ತದೆ” ಎಂದು ಪ್ರಭು ದೂರಿದ್ದಾರೆ.

ಶಿವಸೇನೆಯು ಎರಡು ಬಣಗಳಾಗಿ ವಿಭಜನೆಯಾಗಿರುವುದರ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮೇ 11ರಂದು ತೀರ್ಪು ನೀಡಿತ್ತು.