ಬಾಬರಿ ಮಸೀದಿ ಧ್ವಂಸಕ್ಕೆ ಸಂಚು ರೂಪಿಸಿದ ಆರೋಪ ಹೊತ್ತಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜಕೀಯ ಪ್ರಮುಖರನ್ನು ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರವೂ ವಿಚಾರಣಾ ನ್ಯಾಯಾಲಯವು ಹೇಗೆ ಖುಲಾಸೆಗೊಳಿಸಿತು ಎಂಬುದನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಗುರುವಾರ ವಿವರಿಸಿದರು.
ಭಾರತದ 26ನೇ ಮುಖ್ಯ ನ್ಯಾಯಮೂರ್ತಿ ಎ ಎಂ ಅಹ್ಮದಿ ಅವರ ನೆನಪಿನಲ್ಲಿ ಸ್ಥಾಪಿಸಲಾದ ಅಹ್ಮದಿ ಫೌಂಡೇಶನ್‌ನ ಉದ್ಘಾಟನಾ ಉಪನ್ಯಾಸದ ವೇಳೆ ಅವರು ಈ ಮಾಹಿತಿಗಳನ್ನು ಹಂಚಿಕೊಂಡರು. 'ಜಾತ್ಯತೀತತೆ ಮತ್ತು ಭಾರತೀಯ ಸಂವಿಧಾನ' ವಿಷಯದ ಕುರಿತು ಮಾತನಾಡುತ್ತಿದ್ದ ನ್ಯಾ. ನಾರಿಮನ್, ಸುಮಾರು 25 ವರ್ಷಗಳ ಕಾಲ ಪ್ರಗತಿಕಾಣದೆ ಸ್ಥಗಿತಗೊಂಡಿದ್ದ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ಪುನರಾರಂಭಿಸುವ ಆದೇಶಗಳನ್ನು ತಾವು ಹೇಗೆ ನೀಡಿದೆ ಎಂಬ ಸಂಗತಿಗಳನ್ನು ಹಂಚಿಕೊಂಡರು.
ಬಹುತೇಕ ಸ್ಥಗಿತಗೊಂಡಿದ್ದ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಚಾಲನೆ ನೀಡಿದ ಹೊರತಾಗಿಯೂ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಸಿಬಿಐ ನ್ಯಾಯಾಧೀಶ ಸುರೇಂದ್ರ ಯಾದವ್ ಅವರು ಅಂತಿಮವಾಗಿ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದರು ಹಾಗೂ ತಮ್ಮ ನಿವೃತ್ತಿಯ ನಂತರ ಉತ್ತರ ಪ್ರದೇಶ ರಾಜ್ಯದಲ್ಲಿ ಉಪ ಲೋಕಾಯುಕ್ತರಾಗಿ ಪದಗ್ರಹಣ ಮಾಡಿದರು ಎಂದು ವಿವರಿಸಿದ ನಾರಿಮನ್ ಅವರು ಈ ದೇಶದ ಪರಿಸ್ಥಿತಿ ಹೀಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಲಖನೌನ ವಿಶೇಷ ನ್ಯಾಯಾಲಯವು 2020 ರ ಸೆಪ್ಟೆಂಬರ್‌ನಲ್ಲಿ ಮಾಜಿ ಉಪ ಪ್ರಧಾನಿ ಎಲ್‌ಕೆ ಅಡ್ವಾಣಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಬಿಜೆಪಿ ನಾಯಕರಾದ ಮುರಳಿ ಮನೋಹರ್ ಜೋಷಿ, ಉಮಾಭಾರತಿ ಹಾಗೂ ಇತರ ಹಲವರನ್ನು ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಖುಲಾಸೆಗೊಳಿಸಿತ್ತು.
1992ರ ಡಿಸೆಂಬರ್‌ನಲ್ಲಿ ನಡೆದಿದ್ದ ಬಾಬರಿ ಮಸೀದಿಯ ಧ್ವಂಸವು ದಶಕಗಳ ಕಾಲ ಭಾರತದ ರಾಜಕೀಯ ನಿರೂಪಣೆಯಲ್ಲಿ ಪ್ರಾಬಲ್ಯ ಸಾಧಿಸಿತ್ತು. ಸುಪ್ರೀಂ ಕೋರ್ಟ್‌ನ ಮಾತುಗಳಲ್ಲಿಯೇ ಹೇಳುವುದಾದರೆ ಭಾರತದ ಸಂವಿಧಾನದ ಜಾತ್ಯತೀತ ಹೆಣಿಗೆಯನ್ನು ಸಡಿಲಗೊಳಿಸಿತು.
ಆದಾಗ್ಯೂ, ಮಸೀದಿಯ ಧ್ವಂಸಕ್ಕೆ ಕಾರಣವಾದ ಸಂಚನ್ನು ನಿರೂಪಿಸುವಂತಹ ಯಾವುದೇ ನಿರ್ಣಾಯಕ ಸಾಕ್ಷ್ಯವನ್ನು ನೀಡಲು ಕೇಂದ್ರೀಯ ತನಿಖಾ ದಳ (ಸಿಬಿಐ) ವಿಫಲವಾಗಿದೆ ಎಂದು ವಿಶೇಷ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟು ಆರೋಪಿಗಳನ್ನು ಖುಲಾಸೆಗೊಳಿಸಿತು.
ಸೆಕ್ಷನ್ 147 (ಗಲಭೆ), 153-ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 153-ಬಿ (ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವಂತಹ ಪೂರ್ವಾಗ್ರಹಗಳನ್ನು ಬಿತ್ತುವುದು) 295 (ಪವಿತ್ರ ಸ್ಥಳಗಳನ್ನು ಅಪವಿತ್ರಗೊಳಿಸುವುದು, ಧಕ್ಕೆ ತರುವುದು) 295-ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು), ಮತ್ತು 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಹಾಗೂ ಇವುಗಳೊಂದಿಗೆ IPC ಸೆಕ್ಷನ್ 149 (ಕಾನೂನುಬಾಹಿರ ಸಭೆ) ಮತ್ತು 120B (ಕ್ರಿಮಿನಲ್ ಪಿತೂರಿ) ಅಡಿ ದಾಖಲಿಸಿದ್ದ ಆರೋಪಗಳ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ನಡೆಸಿತ್ತು. ಅಂತಿಮವಾಗಿ ಬಾಬರಿ ಮಸೀದಿ ಧ್ವಂಸಗೊಳಿಸುವ ಪಿತೂರಿಯನ್ನು ನಿರೂಪಿಸುವಂತಹ ಯಾವುದೇ ದಾಖಲೆಗಳಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
ಗುರುವಾರದ ತಮ್ಮ ಭಾಷಣದಲ್ಲಿ, ನ್ಯಾಯಮೂರ್ತಿ ನಾರಿಮನ್ ಅವರು ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳ ಖುಲಾಸೆಗೆ ಕಾರಣವಾದ ಘಟನೆಗಳ ಸರಣಿಯನ್ನು ವಿವರಿಸಿದರು. ಬಾಬರಿ ಮಸೀದಿ ಧ್ವಂಸದ ನಂತರ ಎರಡು ಪ್ರಥಮ ಮಾಹಿತಿ ವರದಿಗಳು (ಎಫ್‌ಐಆರ್) ದಾಖಲಾದವು. "ಮಸೀದಿ ಒಡೆದ ನಂತರ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು. ಒಂದು, ಎಫ್‌ಐಆರ್ 197, ಮಸೀದಿಗೆ ಬಂದು ಕೆಡವಿದ ಕರಸೇವಕರ ಕೃತ್ಯಗಳಿಗೆ ಸಂಬಂಧಿಸಿದ್ದಾಗಿತ್ತು. ಇನ್ನೊಂದು, ಎಫ್‌ಐಆರ್ 198, ಬಿಜೆಪಿಯ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ ಮತ್ತು ಅವರ ಸಹವರ್ತಿಗಳ ವಿರುದ್ಧವಾಗಿತ್ತು. ಇವರು ಕರಸೇವಕರನ್ನು ಧ್ವಂಸ ಕೃತ್ಯಕ್ಕೆ ಪ್ರೇರೇಪಿಸಿದ್ದರು," ಎಂದು ನ್ಯಾಯಮೂರ್ತಿ ನಾರಿಮನ್ ವಿವರಿಸಿದರು
ಆದರೆ, ಈ ಎರಡು ಪ್ರಕರಣಗಳ ಕುರಿತಾಗಿ 25 ವರ್ಷಗಳ ಕಾಲ ಅಂದರೆ 2017ರಲ್ಲಿ ನ್ಯಾ. ಪಿನಾಕಿ ಚಂದ್ರಘೋಷ್ ಅವರೊಂದಿಗೆ ತಾವಿದ್ದ ನ್ಯಾಯಪೀಠದ ಮುಂದೆ ಪ್ರಕರಣ ಬರುವವರೆಗೆ ಯಾವುದೇ ಬೆಳವಣಿಗೆಗಳು ಘಟಿಸಿರಲಿಲ್ಲವೆನ್ನುವುದು ದಿಗ್ಭ್ರಮೆಯ ವಿಚಾರವಾಗಿತ್ತು ಎಂದು ನಾರಿಮನ್ ನೆನಪಿಸಿಕೊಂಡರು. ಎರಡು ಎಫ್‌ಐಆರ್‌ಗಳ ವಿಚಾರಣೆಯು ಎರಡು ಸ್ಥಳಗಳಲ್ಲಿ ಪ್ರತ್ಯೇಕವಾಗಿ ಮುಂದುವರಿಯುತ್ತಿದ್ದ ಪರಿಣಾಮವಾಗಿ ಪಿತೂರಿ ಆರೋಪವನ್ನು ಕೈಬಿಡಲಾಗಿತ್ತು ಎನ್ನುವ ಅಂಶವನ್ನು ಇದೇ ವೇಳೆ ವಿವರಿಸಿದರು.
ಎರಡು ಪ್ರತ್ಯೇಕ ಪ್ರಕರಣಗಳು ನಡೆಯುತ್ತಿದ್ದ ಪರಿಣಾಮ ಪಿತೂರಿಯ ಆರೋಪವು ಇಲ್ಲದೆ ಹೋಗಿದ್ದನ್ನು ಗಮನಿಸಿದೆವು. ನಂತರ ಸಂವಿಧಾನದ 142ನೇ ವಿಧಿಯನ್ನು ಬಳಸಿ ಒಂದೇ ಜಂಟಿ ವಿಚಾರಣೆಯನ್ನು ನಡೆಸಲು ಆದೇಶಿಸಿದೆವು, ಪಿತೂರಿಯ ಆರೋಪವನ್ನು ಮರುಸ್ಥಾಪಿಸಿದೆವು ಎಂದು ಅವರು ನೆನೆದರು.
ಇಷ್ಟು ಮಾತ್ರವೇ ಅಲ್ಲದೆ, ಅದಾಗಲೇ ಸುದೀರ್ಘ ವಿಳಂಬಗೊಂಡಿದ್ದ ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸಲು ಈ ಪ್ರಕರಣವನ್ನು ಆಲಿಸುವ ವಿಚಾರಣಾ ನ್ಯಾಯಾಧೀಶರನ್ನು ವರ್ಗಾವಣೆ ಮಾಡಬಾರದು ಹಾಗೂ ಎರಡು ವರ್ಷದೊಳಗೆ ಪ್ರಕರಣದ ವಿಚಾರಣೆ ಮುಗಿಸಬೇಕು ಎಂದು ತಮ್ಮ ನೇತೃತ್ವದ ಪೀಠವು ಆದೇಶಿಸಿದ್ದನ್ನು ಅವರು ವಿವರಿಸಿದರು.
ಇಷ್ಟೆಲ್ಲಾ ಆದ ನಂತರ ಎರಡು ವರ್ಷಗಳ ಬಳಿಕ ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಧೀಶರು ತಮಗೆ ಮತ್ತಷ್ಟು ಸಮಯ ಬೇಕು ಎಂದು ಕೋರಿದರು. ನಾವು ಮತ್ತೆ ಸ್ವಲ್ಪ ಸಮಯ ನೀಡಲು ಒಪ್ಪಿದೆವು. ಆದರೆ, ಈ ವೇಳೆ ನಮಗೆ ಅವರು ಇನ್ನೇನು ಕೆಲ ದಿನಗಳಲ್ಲಿಯೇ ನಿವೃತ್ತರಾಗಲಿದ್ದಾರೆ ಎನ್ನುವ ಅಂಶ ತಿಳಿದಿರಲಿಲ್ಲ. ಇದು ಅರಿವಿಗೆ ಬಂದ ನಂತರ ಅವರು ಪ್ರಕರಣದಲ್ಲಿ ತೀರ್ಪು ನೀಡುವವರೆಗೆ ನಿವೃತ್ತರಾಗಬಾರದು ಎಂದು ಆದೇಶಿಸಿದೆವು. ಆ ಮೂಲಕ ಅವರ ಕೊರಳಪಟ್ಟಿ ಹಿಡಿದು 'ನೀವು ತೀರ್ಪು ನೀಡಬೇಕು' ಎಂದಿದ್ದಾಯಿತು. ಈ ವೇಳೆಯೂ ನಮ್ಮ ನೆರವಿಗೆ ಬಂದದ್ದು 142ನೇ ವಿಧಿ ಎಂದು ನಾರಿಮನ್ ಪ್ರಕರಣದ ವಿವಿಧ ಮಜಲುಗಳ ಬಗ್ಗೆ ಬೆಳಕು ಚೆಲ್ಲಿದರು.
ವಿಪರ್ಯಾಸವೆಂದರೆ, ಇದೆಲ್ಲದರ ಹೊರತಾಗಿಯೂ ಏನಾಯಿತು ಎನ್ನುವುದು ನಿಮಗೆಲ್ಲ ತಿಳಿದಿದೆ. ನ್ಯಾಯಾಧೀಶರು ಪ್ರಕರಣದಲ್ಲಿನ ಎಲ್ಲರನ್ನೂ ಆರೋಪಮುಕ್ತಗೊಳಿಸಿದರು. ಇದಕ್ಕಾಗಿ ಅವರು ಭರ್ತಿ ಮೂರೂವರೆ ವರ್ಷಗಳನ್ನು ತೆಗೆದುಕೊಂಡರು. ಹೀಗೆ ಎಲ್ಲರನ್ನೂ ಖುಲಾಸೆಗೊಳಿಸಿದ ನಂತರ ಅವರು ನಿವೃತ್ತರಾದರು. ನಿವೃತ್ತರಾಗಿ ತದನಂತರ ಅದೇ ಉತ್ತರ ಪ್ರದೇಶ ರಾಜ್ಯದಲ್ಲಿ ಉಪ ಲೋಕಾಯುಕ್ತರೂ ಆದರು ಎಂದು ನ್ಯಾಯದಾನದ ವ್ಯಂಗ್ಯಕ್ಕೆ ಕನ್ನಡಿ ಹಿಡಿದರು.
ಸಮಾರಂಭದಲ್ಲಿ ನ್ಯಾಯಮೂರ್ತಿ ಅಹ್ಮದಿ ಅವರ ಜೀವನಚರಿತ್ರೆ - 'ದಿ ಫಿಯರ್‌ಲೆಸ್ ಜಡ್ಜ್' ಅನ್ನು ಸಹ ಬಿಡುಗಡೆ ಮಾಡಲಾಯಿತು