<div class="paragraphs"><p>Students, MLA Raghupati Bhat and Karnataka HC</p></div>

Students, MLA Raghupati Bhat and Karnataka HC

 
ಸುದ್ದಿಗಳು

ಉಡುಪಿ ಕಾಲೇಜು ಹಿಜಾಬ್ ಪ್ರಕರಣ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್; ಶಾಸಕ ರಘುಪತಿ ಭಟ್ ಪ್ರತಿವಾದಿ

Siddesh M S

ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಮುಸ್ಲಿಮ್‌ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಹಾಜರಾಗುವುದಕ್ಕೆ ಅಡ್ಡಿ ಪಡಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿ ಮಾಡಿದೆ. ಉಡುಪಿ ಶಾಸಕ ರಘುಪತಿ ಭಟ್‌ ಅವರು ಕಾನೂನುಬಾಹಿರವಾಗಿ ಕಾಲೇಜಿನ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆಕ್ಷೇಪಿಸಲಾಗಿದ್ದು, ಅವರನ್ನೂ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿಸಲಾಗಿದೆ.

ವಿದ್ಯಾರ್ಥಿನಿಯರಾದ ಆಯೇಷಾ ಹಜೀರಾ ಅಲ್ಮಾಸ್‌, ರೇಶಮ್ ಫಾರೂಕ್‌, ಅಲಿಯಾ ಅಸ್ಸಾದಿ, ಶಫಾ, ಶಮೀಮ್‌, ಮುಸ್ಕಾನ್‌ ಜೈನಬ್‌ ಅವರನ್ನು ಅವರ ತಾಯಂದಿರುವ ಪ್ರತಿನಿಧಿಸಿದ್ದು, ವಕೀಲ ಮೊಹಮ್ಮದ್‌ ತಾಹೀರ್‌ ಅವರ ಮೂಲಕ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಮನವಿಯಲ್ಲಿ ಪ್ರತಿವಾದಿಗಳನ್ನಾಗಿಸಲಾಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು, ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜಿನ ಉಪ ನಿರ್ದೇಶಕರು, ಉಡುಪಿ ಜಿಲ್ಲಾಧಿಕಾರಿ, ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಿಗೆ ನ್ಯಾಯಾಲಯವು ನೋಟಿಸ್‌ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸುವಂತೆ ಆದೇಶಿಸಿದೆ. ವಿಚಾರಣೆಯನ್ನು ಮಂಗಳವಾರಕ್ಕೆ (ಫೆಬ್ರವರಿ 8) ಮುಂದೂಡಲಾಗಿದೆ.

ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ, ಉಪಪ್ರಾಂಶುಪಾಲ ಗಂಗಾಧರ ಶರ್ಮಾ, ಇತಿಹಾಸ ವಿಷಯದ ಪ್ರಾಧ್ಯಾಪಕ ಡಾ. ಯಾದವ್, ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಪ್ರಕಾಶ್‌ ಶೆಟ್ಟಿ, ಸಮಾಜ ಶಾಸ್ತ್ರದ ಪ್ರಾಧ್ಯಾಪಕ ಡಿ ದಯಾನಂದ, ರಸಾಯನಿಕ ವಿಜ್ಞಾನದ ಪ್ರಾಧ್ಯಾಪಕ ರುದ್ರಪ್ಪ, ಜೀವ ವಿಜ್ಞಾನದ ಪ್ರಾಧ್ಯಾಪಕಿ ಶಾಲಿನಿ ನಾಯಕ್‌, ಭೌತ ವಿಜ್ಞಾನದ ಛಾಯಾ ಶೆಟ್ಟಿ, ಪ್ರಾಧ್ಯಾಪಕಿ ಡಾ. ಉಷಾ ನವೀನ್‌ ಚಂದ್ರ, ಉಡುಪಿ ಶಾಸಕ ರಘುಪತಿ ಭಟ್‌ ಮತ್ತು ಯಶ್‌ಪಾಲ್‌ ಆನಂದ್‌ ಸುರಾನ ಅವರನ್ನು ಕ್ರಮವಾಗಿ ಐದರಿಂದ 16ನೇ ಪ್ರತಿವಾದಿಗಳನ್ನಾಗಿಸಲಾಗಿದೆ. ರಘುಪತಿ ಭಟ್‌ ಮತ್ತು ಯಶ್‌ಪಾಲ್‌ ಆನಂದ್‌ ಸುರಾನ ಅವರು ಕಾಲೇಜು ಅಭಿವೃದ್ಧಿ ಸಮಿತಿಯ ಅನಧಿಕೃತ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಅರ್ಜಿದಾರರ ಮನವಿಗಳೇನು?

  • 2021-22ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯು 6ನೇ ಅಧ್ಯಾಯದಲ್ಲಿ ಮಹತ್ವದ ಮಾಹಿತಿ ಎಂಬ ತಲೆಬರಹದಡಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದನ್ನು ಉಲ್ಲಂಘಿಸಿರುವ ಕಾಲೇಜಿನ ಪ್ರಾಚಾರ್ಯರ ವಿರುದ್ಧ ತನಿಖೆಗೆ ಆದೇಶಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ನಿರ್ದೇಶಿಸಬೇಕು.

  • ಅರ್ಜಿದಾರರ ವಿದ್ಯಾರ್ಥಿಗಳ ವಿರುದ್ಧ ತಾರತಮ್ಯದ ನೀತಿ ಅನುಸರಿಸುತ್ತಿರುವ 6 ರಿಂದ 14 ನೇ ಪ್ರತಿವಾದಿಗಳ ವಿರುದ್ದ ತನಿಖೆ ನಡೆಸಲು ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜಿನ ಉಪ ನಿರ್ದೇಶಕರಿಗೆ ಆದೇಶಿಸಬೇಕು.

  • ಉಡುಪಿ ಶಾಸಕ ರಘುಪತಿ ಭಟ್‌ ಮತ್ತು ಯಶ್‌ಪಾಲ್‌ ಆನಂದ್‌ ಸುರಾನ ಅವರು ಕಾನೂನಿನ ಯಾವ ನಿಯಮದಡಿ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಆಡಳಿತದಲ್ಲಿ ಮಧ್ಯಪ್ರವೇಶಿಸಿ, ತಮ್ಮ ರಾಜಕೀಯ ಅಜೆಂಡಾ ಹರಡಲು ಯತ್ನಿಸುತ್ತಿದ್ದಾರೆ ಎಂಬುದನ್ನು ವಿವರಿಸುವಂತೆ ಆದೇಶ ಮಾಡಬೇಕು.

  • 2021-22ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಹೊರಡಿಸಿರುವ ನಿಯಮಾವಳಿಗಳಿಗೆ ಅನುಗುಣವಾಗಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಮಾಡಬೇಕು.

  • ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳಲು ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಿಬ್ಬಂದಿಯ ಪಕ್ಷಪಾತದ ನಿಲುವಿನಿಂದಾಗಿ ಬಲವಂತವಾಗಿ ತರಗತಿಯಿಂದ ದೂರ ಉಳಿಯುವಂತೆ ಮಾಡಿರುವ ದಿನಗಳಿಗೆ ಅಥವಾ ಅರ್ಜಿ ವಿಲೇವಾರಿಯಾಗುವವರೆಗೆ ಹಾಜರಾತಿ ನೀಡಲು ಉಡುಪಿ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಪ್ರಾಚಾರ್ಯರು ಮತ್ತು ಉಪ ಪ್ರಾಚಾರ್ಯರಿಗೆ ನಿರ್ದೇಶಿಸಬೇಕು ಎಂದು ಮಧ್ಯಂತರ ಮನವಿ ಮಾಡಲಾಗಿದೆ.

ಒಟ್ಟಾಗಿ ಆಲಿಸಲು ನಿರ್ಧಾರ

ಉಡುಪಿ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ರೇಶಮ್‌ ಫಾರೂಕ್‌ ಅವರು ವಕೀಲ ಶತಭಿಷ್‌ ಶಿವಣ್ಣ ಅವರ ಮೂಲಕ ಪ್ರತ್ಯೇಕವಾಗಿ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ನೇತೃತ್ವದ ಪೀಠವು ನಡೆಸಿತು. ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ಪ್ರಕರಣದ ಸಂಬಂಧ ವಾದಿಸಲು ಬಯಸಿದ್ದಾರೆ. ಏರಡೂ ಪ್ರಕರಣಗಳನ್ನು ಒಟ್ಟಾಗಿ ಆಲಿಸಲಾಗುವುದು ಎಂದು ಹೇಳಿ ಪೀಠವು ವಿಚಾರಣೆಯನ್ನು ಮಂಗಳವಾರಕ್ಕೆ (ಫೆ. 8) ಮುಂದೂಡಿತು.