ಉಡುಪಿ ಜಿಲ್ಲೆಯ ಹಂಪನಕಟ್ಟೆ ಸಮೀಪದ ನೇಜಾರಿನ ತೃಪ್ತಿ ಲೇಔಟ್ ನಿವಾಸದಲ್ಲಿನ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿ ಪ್ರವೀಣ್ ಅರುಣ್ ಚೌಗುಲೆಯ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.
ಪ್ರವೀಣ್ ಅರುಣ್ ಚೌಗುಲೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎನ್ ಜಗದೀಶ್ ಅವರು “ಇದೊಂದು ಗಂಭೀರ ಪ್ರಕರಣ. ಮೃತ ಶರೀರಗಳ ಮೇಲಿದ್ದ ಆರೋಪಿಯ ಕೂದಲು ಡಿಎನ್ಎ ಪರೀಕ್ಷೆಯಲ್ಲಿ ಹೊಂದಾಣಿಕೆಯಾಗಿದೆ. ಕೊಲೆ ಮಾಡುವ ಸಮಯದಲ್ಲಿ ಆರೋಪಿಯ ಕೈಗೂ ಗಾಯವಾಗಿತ್ತು. ಇದಕ್ಕಾಗಿ ಆತ ಪಡೆದಿದ್ದ ವೈದ್ಯಕೀಯ ಚಿಕಿತ್ಸೆಯ ದಾಖಲೆ ಲಭ್ಯವಾಗಿದೆ. ಆತ ಕೃತ್ಯ ನಡೆಸಿದ ಸ್ಥಳಕ್ಕೆ ಬಂದು ಹೋಗಿದ್ದ ಬಗ್ಗೆ ಮೊಬೈಲ್ ಲೊಕೇಶನ್ ಕೂಡಾ ದೃಢಪಟ್ಟಿದೆ. ಹೀಗೆ, ಸಾಕಷ್ಟು ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್ ತನಿಖೆಯಲ್ಲಿ ಕಲೆ ಹಾಕಿದೆ. ಆದ್ದರಿಂದ, ಜಾಮೀನು ಮಂಜೂರು ಮಾಡಬಾರದು” ಎಂದು ವಾದಿಸಿದರು. ಇದನ್ನು ಪರಿಗಣಿಸಿದ ಪೀಠವು ಜಾಮೀನು ಕೋರಿಕೆ ಅರ್ಜಿಯನ್ನು ತಿರಸ್ಕರಿಸಿತು.
ಪ್ರಕರಣದ ಹಿನ್ನೆಲೆ: ನೇಜಾರಿನ ತೃಪ್ತಿ ಲೇಔಟ್‌ನಲ್ಲಿ 2023ರ ನವೆಂಬರ್ 12ರಂದು ಬೆಳಿಗ್ಗೆ ಹಸೀನಾ, ಅವರ ಮಕ್ಕಳಾದ ಅಫ್ನಾನ್ , ಅಯ್ನಾಜ್ ಹಾಗೂ ಅಸೀಮ್ ಅವರನ್ನು ಚೂರಿಯಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಚೂರಿ ಇರಿತಕ್ಕೊಳಗಾಗಿದ್ದ ಮೃತ ಹಸೀನಾ ಅವರ ಅತ್ತೆ ಹಾಜಿರಾ ಹಂತಕನಿಂದ ತಪ್ಪಿಸಿಕೊಂಡು ಶೌಚಾಲಯದೊಳಗೆ ಅವಿತು ಜೀವ ಉಳಿಸಿಕೊಂಡಿದ್ದರು.
ಮಹಾರಾಷ್ಟ್ರದ ಸಾಂಗ್ಲಿ ನಿವಾಸಿಯಾದ ಆರೋಪಿ ಪ್ರವೀಣ್ ಚೌಗುಲೆಯನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕುಡಚಿಯಲ್ಲಿ ಬಂಧಿಸಲಾಗಿತ್ತು. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 307 (ಕೊಲೆ ಯತ್ನ), 324 (ಮಾರಕಾಸ್ತ್ರದಿಂದ ಸರಳ ಗಾಯ ಉಂಟು ಮಾಡುವುದು) 449 (ಮರಣ ದಂಡನೆಗೆ ಒಳಗಾಗುವ ಅಪರಾಧ ಕೃತ್ಯ ಎಸಗಲು ಗೃಹ ಅತಿಕ್ರಮಣ) ಮತ್ತು 201 (ಸಾಕ್ಷ್ಯ ನಾಶ) ಆರೋಪಗಳಡಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚೌಗುಲೆಯ ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯ ತಿರಸ್ಕರಿಸಿತ್ತು.