ಪದವಿ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ನಡೆಸಲಾಗುವ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯು (ಸಿಎಲ್‌ಎಟಿ) ಡಿಸೆಂಬರ್ 3ಕ್ಕೆ ನಿಗದಿಯಾಗಿದ್ದು, ಪ್ರಶ್ನೆ ಪತ್ರಿಕೆಯಲ್ಲಿ 120 ಪ್ರಶ್ನೆಗಳು ಮಾತ್ರವೇ ಇರಲಿವೆ. ಕಳೆದ ವರ್ಷ ಪ್ರಶ್ನೆಪತ್ರಿಕೆ 150 ಪ್ರಶ್ನೆಗಳನ್ನು ಒಳಗೊಂಡಿತ್ತು.
ಪರೀಕ್ಷೆಗೆ ಮೀಸಲಾಗಿದ್ದ ಸಮಯ ಮತ್ತು ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟದ ಆಡಳಿತ ಮಂಡಳಿಯು ತಿಳಿಸಿದೆ. ಮಂಡಳಿಯು ಮೇ 20ರಂದು ನಡೆಸಿದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಜೂನ್ 15ರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಕಳೆದ ವರ್ಷದಂತೆ ಪರೀಕ್ಷೆಗೆ 2 ಗಂಟೆ ನಿಗದಿಪಡಿಸಲಾಗಿದ್ದು, ಐದು ವಿಭಾಗಗಳಲ್ಲಿ 120 ಪ್ರಶ್ನೆಗಳು ಇರಲಿವೆ. ಇದರಲ್ಲಿ ಆಂಗ್ಲ ಭಾಷೆ, ಸಾಮಾನ್ಯ ಜ್ಞಾನ ಸೇರಿ ಸಮಕಾಲೀನ ವಿಚಾರಗಳು, ಕಾನೂನು ತಾರ್ಕಿಕತೆ (ಲೀಗಲ್ ರೀಸನಿಂಗ್), ವಿವೇಚನಾ ತಾರ್ಕಿಕತೆ (ಲಾಜಿಕಲ್ ರೀಸನಿಂಗ್), ಪರಿಮಾಣಾತ್ಮಕ ತಂತ್ರಗಳು (ಕ್ವಾಂಟಿಟೇಟಿವ್ ಟೆಕ್ನಿಕ್ಸ್) ಸೇರಿವೆ” ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸ್ನಾತಕೋತ್ತರ ಸಿಎಲ್‌ಎಟಿಯಲ್ಲಿ ಪಠ್ಯಕ್ರಮ ಅಥವಾ ಪ್ರಶ್ನೆಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಲಾ ಪ್ರಿಪ್ ಟುಟೋರಿಯಲ್‌ನ ನಿರ್ದೇಶಕಿ ಅನುಪಮಾ ಜೋಶಿ ಅವರು ಬಾರ್ ಅಂಡ್ ಬೆಂಚ್‌ಗೆ ತಿಳಿಸಿದ್ದಾರೆ.
“ಪ್ರಶ್ನೆಗಳ ಸಂಖ್ಯೆ ಕಡಿತ ಮಾಡಿರುವುದು ಸ್ವಾಗತಾರ್ಹ ಬದಲಾವಣೆ. ವಾಕ್ಯಗಳನ್ನು ಬರೆಯಲಾಗುವ ಪ್ರಶ್ನೆಗಳು ಹಾಗೆ ಇರಲಿವೆಯೇ ಅಥವಾ ಇಲ್ಲವೇ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಹಿಂದಿ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಸಿಎಲ್‌ಎಟಿ ಬರೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಒಕ್ಕೂಟದ ವಿರುದ್ಧ ಪ್ರಕರಣ ದಾಖಲಾಗಿರುವುದರಿಂದ ಹೀಗೆ ಆಗಿರುವ ಸಾಧ್ಯತೆ ಇದೆ. ಹೆಚ್ವಿನ ವಿಶ್ಲೇಷಣೆಗೂ ಮುನ್ನ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆಯಾಗುವವರೆಗೆ ವಿದ್ಯಾರ್ಥಿಗಳು ಕಾಯಬೇಕು” ಎಂದಿದ್ದಾರೆ.