ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾಯಾಂಗವನ್ನು ವಿಮರ್ಶಿಸಿ ಮಾಡಿದ್ದ ಎರಡು ಟ್ವೀಟ್ ಗಳನ್ನು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಿ, ದೋಷಿ ಎಂದು ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ನಡೆಗೆ ಆತಂಕ ವ್ಯಕ್ತಪಡಿಸಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಬಾರ್ ಮಾನವ ಹಕ್ಕುಗಳ ಸಮಿತಿಯು (ಬಿಎಚ್‌ಆರ್‌ಸಿ) ಸುದೀರ್ಘ ಹೇಳಿಕೆ ಬಿಡುಗಡೆ ಮಾಡಿದೆ.
ಪ್ರಶಾಂತ್ ಭೂಷಣ್ ಅವರ ಎರಡು ವಿವಾದಾತ್ಮಕ ಟ್ವೀಟ್ ಗಳಿಗೆ ಸಂಬಂಧಿಸಿದಂತೆ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅವರನ್ನು ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ದೋಷಿ ಎಂದು ತೀರ್ಪು ನೀಡಿತ್ತು. 108 ಪುಟಗಳ ಸುದೀರ್ಘ ತೀರ್ಪು ನೀಡಿದ್ದ ನ್ಯಾಯಪೀಠವು ನ್ಯಾಯಾಲಯದ ಮೇಲಿನ ಈ ಪರಿಯ ದಾಳಿಯನ್ನು ಸಮರ್ಥವಾಗಿ ನಿಭಾಯಿಸದಿದ್ದರೆ, ರಾಷ್ಟ್ರೀಯ ಗೌರವ ಮತ್ತು ಘನತೆಗೆ ಚ್ಯುತಿ ಉಂಟು ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ ಆರ್ ಗವಾಯಿ ಮತ್ತು ಕೃಷ್ಣ ಮುರಾರಿ ನೇತೃತ್ವದ ತ್ರಿಸದಸ್ಯ ಪೀಠವು “ಧಾರಾಳತೆಯನ್ನು ಹೆಚ್ಚು ವಿಸ್ತರಿಸಲಾಗದು. ಏಕೆಂದರೆ, ಇದರಿಂದ ನ್ಯಾಯಾಂಗದ ತಳಹದಿಯ ಮೇಲೆ ನಡೆಯುವ ದುರುದ್ದೇಶಪೂರಿತ, ಭಯಾನಕ ಮತ್ತು ವ್ಯವಸ್ಥಿತ ದಾಳಿಗಳನ್ನು ಹತ್ತಿಕ್ಕಲಾದ ದುರ್ಬಲ ಸ್ಥಿತಿ ನಿರ್ಮಾಣವಾಗಬಹುದು” ಎಂದು ಹೇಳಿತ್ತು.
ಸುಪ್ರೀಂ ಕೋರ್ಟ್ ತೀರ್ಪಿಗೆ ಆತಂಕ ವ್ಯಕ್ತಪಡಿಸಿರುವ ಬಿಎಚ್‌ಆರ್‌ಸಿಯು ಕೋರ್ಟ್ ನಡೆ-ನುಡಿಗಳನ್ನು ವಿಮರ್ಶಿಸುವ ಮೂಲಕ ತನಗೆ ದೊರೆತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸುವ ಅಧಿಕಾರ ವಕೀಲರಿಗಿದ್ದು, ಅದನ್ನು ಅನುಸರಿಸಲಾಗಿದೆ ಎಂದಿದೆ. ಬಿಎಚ್‌ಆರ್‌ಸಿಯ ಹೇಳಿಕೆ ವಿವರ ಹೀಗಿದೆ:
ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುವುದೇನೆಂದರೆ:
ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ಪ್ರಶಾಂತ್ ಭೂಷಣ್ ಅವರನ್ನು ದೋಷಿ ಎಂದು ಘೋಷಿಸಿದ ತೀರ್ಪಿನ ಮರುಪರಿಶೀಲನೆಗೆ ಪರಿಣಾಮಕಾರಿಯಾದ ವ್ಯವಸ್ಥೆ ಜಾರಿಗೊಳಿಸಿ.
ಅಂತಹ ಮರುಪರಿಶೀಲನೆ ಆಗುವವರೆಗೆ ಭೂಷಣ್ ಗೆ ಶಿಕ್ಷೆ ವಿಧಿಸುವುದನ್ನು ತಡೆಹಿಡಿಯಿರಿ
ಪ್ರಶಾಂತ್ ಭೂಷಣ್ ಅವರು ಶಿಕ್ಷೆ ಅನುಭವಿಸುವುದರಿಂದ ಮುಕ್ತಗೊಳಿಸಿ. ಕಾನೂನು ವೃತ್ತಿಯಲ್ಲಿರುವವರಿಗೆ ದೊರೆತಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಸನಬದ್ಧ ಟೀಕೆಯ ಹಕ್ಕನ್ನು ಸಾರ್ವಜನಿಕ ವಲಯದಲ್ಲಿ ಮುಕ್ತವಾಗಿ ಚಲಾಯಿಸಲು ಅವಕಾಶ ಮಾಡಿಕೊಡಬೇಕು.
ನ್ಯಾಯಾಂಗ ನಿಂದನೆ ಕಾಯ್ದೆ 1971ರಲ್ಲಿ ಬರುವ ಸೆಕ್ಷನ್ 2(c)(i), ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ಸದರಿ ಸೆಕ್ಷನ್ ಅನ್ನು ಸಂಸತ್ತಿನಲ್ಲಿ ಚರ್ಚಿಸಿ ಕಾಯ್ದೆಗೆ ತಿದ್ದುಪಡಿ ಮಾಡುವ ಕೆಲಸವನ್ನು ಸದನ ಮತ್ತು ಭಾರತ ಸರ್ಕಾರ ಮಾಡಬೇಕು.ಬಿಎಚ್‌ಆರ್‌ಸಿ ಇಂಗ್ಲೆಂಡ್ ಮತ್ತು ವೇಲ್ಸ್
ಇಂಗ್ಲೆಂಡ್ ನಲ್ಲಿ ಶಾಸನಬದ್ಧವಾದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಬಗ್ಗೆ ಸುದೀರ್ಘವಾದ ಚರ್ಚೆ ನಡೆದಿದ್ದು, 2012ರಲ್ಲಿ ಕಾನೂನು ಆಯೋಗದ ಶಿಫಾರಸಿನ ಮೇರೆಗೆ 2013ರಲ್ಲಿ ಅದನ್ನು ತೆಗೆದುಹಾಕಲಾಗಿದೆ.ಈ ಸಾಮಾನ್ಯ ಕಾನೂನು ಅಪರಾಧವನ್ನು ಸುಮಾರು 80 ವರ್ಷಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿರಲಿಲ್ಲ.
ನ್ಯಾಯಾಂಗ ಅಥವಾ ನ್ಯಾಯಾಲಯದ ಹೆಸರಿಗೆ ಅಪಕೀರ್ತಿ ತರುವ ನ್ಯಾಯಾಂಗ ನಿಂದನೆಯು ಮೂಲಭೂತ ಹಕ್ಕಿಗೆ ವಿರುದ್ಧವಾಗಿದೆ ಎಂದು ಗುರುತಿಸಿದ ಬ್ರಿಟಿಷ್ ಕಾನೂನು ಆಯೋಗವು ಅದನ್ನು ಕೈಬಿಟ್ಟಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ನ್ಯಾಯಾಂಗವನ್ನು ವಿಮರ್ಶೆ ಮಾಡುವುದು ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ.
ಭೂಷಣ್ ಅವರ ಟ್ವೀಟ್ ಗಳು ದುರುದ್ದೇಶ ಮತ್ತು ಕೀಳು ಅಭಿರುಚಿಯಿಂದ ಕೂಡಿವೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಸಾರ್ವಜನಿಕವಾಗಿ ನ್ಯಾಯದಾನವನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದರ ಕುರಿತು ಟೀಕೆ-ಟಿಪ್ಪಣಿ ನಡೆಸುವ ಅಧಿಕಾರವನ್ನು ವಕೀಲರು ಹೊಂದಿದ್ದಾರೆ ಎಂಬುದನ್ನು ಮರೆತಂತಿದೆ ಎಂದು ಬಿಎಚ್‌ಆರ್‌ಸಿ ಹೇಳಿದೆ.
ನ್ಯಾಯಾಲಯದ ಕಾರ್ಯಚಟುವಟಿಕೆಯ ಬಗ್ಗೆ ಮುಕ್ತ ಮತ್ತು ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟಾಗ ಮಾತ್ರ ಸ್ವತಂತ್ರ ಮತ್ತು ನಿಷ್ಟಕ್ಷಪಾತವಾದ ನ್ಯಾಯಾಂಗದ ಬಲ ಹೆಚ್ಚಾಗುತ್ತದೆಬಿಎಚ್ಆರ್ಸಿ ಇಂಗ್ಲೆಂಡ್ ಮತ್ತು ವೇಲ್ಸ್
ಕಾನೂನು ವೃತ್ತಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು 'ಮುಕ್ತ ನ್ಯಾಯ' ವಿಧಾನವನ್ನು ದೃಢೀಕರಿಸುತ್ತದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ನ್ಯಾಯದಾನ ವ್ಯವಸ್ಥೆಯ ಮೇಲೆ ಸಾರ್ವಜನಿಕರ ನಂಬಿಕೆ ಹೆಚ್ಚಾಗುವಂತೆ ಮಾಡುತ್ತದೆ ಎಂದು ಬಿಎಚ್‌ಆರ್‌ಸಿ ವಿವರಿಸಿದೆ.