Karnataka HC Chief Justice P B Varale and Justice Ashok S Kinagi 
ಸುದ್ದಿಗಳು

ಜನವಸತಿ ಪ್ರದೇಶದಲ್ಲಿ ಅನಧಿಕೃತ ವಾಣಿಜ್ಯ ವ್ಯವಹಾರಗಳಿಗೆ ಅವಕಾಶವಿಲ್ಲ: ಹೈಕೋರ್ಟ್‌ಗೆ ಬಿಬಿಎಂಪಿ ವಿವರಣೆ

ಜನವಸತಿ ಪ್ರದೇಶದಲ್ಲಿ ಸಣ್ಣಪುಟ್ಟ ಅಂಗಡಿ, ಹಾಲಿನ ಬೂತ್‌, ಸ್ಟೇಷನರಿ ಅಂಗಡಿ, ಬೇಕರಿ, ಎಸ್‌ಟಿಡಿ ಬೂತ್ ಮತ್ತು ಬ್ಯಾಂಕ್ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಿರುವ ಇತರೆ ಸೇವೆಗಳಿಗೆ ಮಾತ್ರ ಅವಕಾಶವಿರಲಿದೆ ಎಂದು ತಿಳಿಸಿರುವ ಬಿಬಿಎಂಪಿ.

Bar & Bench

ಬೆಂಗಳೂರಿನ ಜನವಸತಿ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಸೇವೆ ಹೊರತುಪಡಿಸಿ ಯಾವುದೇ ರೀತಿಯ ಅನಧಿಕೃತ ವಾಣಿಜ್ಯ ವ್ಯವಹಾರಗಳಿಗೆ ಅವಕಾಶ ನೀಡುವುದಿಲ್ಲ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ಭರವಸೆ ನೀಡಿದೆ.

ಬೆಂಗಳೂರಿನ ವಿಲ್ಸನ್ ಗಾರ್ಡನ್ ಜನವಸತಿ ಪ್ರದೇಶದ ರಸ್ತೆ ಮತ್ತು ಪಾದಚಾರಿ ಮಾರ್ಗದ ಮೇಲೆ ಅನಧಿಕೃತವಾಗಿ ತೆರೆದಿರುವ ಹೂವಿನ ಅಂಗಡಿಗಳನ್ನು ತೆರೆವುಗೊಳಿಸಲು ಬಿಬಿಎಂಪಿಗೆ ಆದೇಶಿಸುವಂತೆ ಕೋರಿ ಸ್ಥಳೀಯ ನಿವಾಸಿಗಳ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ವಿ ಶ್ರೀನಿಧಿ ಅವರು “ಜನವಸತಿ ಪ್ರದೇಶದಲ್ಲಿ ಸಣ್ಣಪುಟ್ಟ ಅಂಗಡಿ, ಹಾಲಿನ ಬೂತ್‌, ಸ್ಟೇಷನರಿ ಅಂಗಡಿ, ಬೇಕರಿ, ಎಸ್‌ಟಿಡಿ ಬೂತ್ ಮತ್ತು ಬ್ಯಾಂಕ್ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಿರುವ ಇತರೆ ಸೇವೆಗಳಿಗೆ ಮಾತ್ರ ಅವಕಾಶವಿರಲಿದೆ. ಯಾವುದೇ ರೀತಿಯ ಅನಧಿಕೃತ ವಾಣಿಜ್ಯ ವ್ಯವಹಾರಗಳಿಗೆ ಅವಕಾಶ ಕಲ್ಪಿಸುವುದಿಲ್ಲ. ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಉಲ್ಲೇಖಿಸಿದ್ದ ಅಫಿಡವಿಟ್‌ ಸಲ್ಲಿಸಿದರು.

“ಹೈಕೋರ್ಟ್ ಆದೇಶದಂತೆ ವಿಲ್ಸನ್ ಗಾರ್ಡನ್ ವಸತಿ ಪ್ರದೇಶದಲ್ಲಿ ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಅನಧಿಕೃತವಾಗಿ ತೆರೆಯಲಾಗಿರುವ 101 ಹೂವಿನ ಅಂಗಡಿಗಳ ಪೈಕಿ ಈಗಾಗಲೇ 60 ಅನ್ನು ತೆರವುಗೊಳಿಸಲಾಗಿದೆ. ಉಳಿದ 41 ಅಂಗಡಿಗಳನ್ನು ಮುಂದಿನ ಎರಡು ವಾರಗಳಲ್ಲಿ ತೆರವು ಮಾಡಲಾಗುವುದು” ಎಂದು ಬಿಬಿಎಂಪಿ ಅಧಿಕಾರಿಗಳು ಪೀಠಕ್ಕೆ ಭರವಸೆ ನೀಡಿದ್ದಾರೆ.

“ಹಿಂದಿನ ಸ್ಥಳೀಯ ಅಧಿಕಾರಿಗಳಿಂದ ಆರು ಹೂವಿನ ಅಂಗಡಿಗಳಿಗೆ ಅನಧಿಕೃತವಾಗಿ ವ್ಯಾಪಾರ ಪರವಾನಗಿ ದೊರೆತಿದೆ. ಅನಧಿಕೃತ ಪರವಾನಗಿ ಮಂಜೂರು ಮಾಡಿದ ಸಂಬಂಧಪಟ್ಟ ಆರೋಗ್ಯ ಅಧಿಕಾರಿ ವಿರುದ್ಧ ಬಿಬಿಎಂಪಿಯ ಮುಖ್ಯ ಆಯುಕ್ತರು ಕ್ರಮ ಜರುಗಿಸಲಿದ್ದಾರೆ” ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಇದನ್ನು ಪರಿಗಣಿಸಿದ ಪೀಠವು ಪರಿಷ್ಕೃತ ಮಾಸ್ಟರ್ ಪ್ಲಾನ್-2015ರ ಪ್ರಕಾರ ವಸತಿ ಪ್ರದೇಶದಲ್ಲಿ ಅನುಮತಿ ನೀಡಲಾದ ಚಟುವಟಿಕೆಗಳಿಗೆ ಬಿಟ್ಟು ಇತರೆ ಯಾವುದೇ ಚುಟುವಟಿಕೆಗಳಿಗೆ ಅನುಮತಿ ಕಲ್ಪಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಜತೆಗೆ, ವಿಲ್ಸನ್ ಗಾರ್ಡನ್ ಬಡಾವಣೆಯಲ್ಲಿರುವ 41 ಅನಧಿಕೃತ ಹೂವಿನ ಅಂಗಡಿ ಮತ್ತು ದಾಸ್ತಾನು ಘಟಕಗಳ ತೆರವು ಕಾರ್ಯಚರಣೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ನಿರ್ದೇಶಿಸಿ ವಿಚಾರಣೆಯನ್ನು ಡಿಸೆಂಬರ್‌ 6ಕ್ಕೆ ಮುಂದೂಡಿತು.