Justice T G Shivashankare Gowda
Justice T G Shivashankare Gowda 
ಸುದ್ದಿಗಳು

[ಡಿಎಲ್ ರಹಿತ ಪ್ರಕರಣ] ಕಂಪೆನಿ ಸಂತ್ರಸ್ತರಿಗೆ ಪರಿಹಾರ ಪಾವತಿಸಿ ನಂತರ ವಾಹನ ಮಾಲೀಕರಿಂದ ವಸೂಲಿ ಮಾಡಬಹುದು: ಹೈಕೋರ್ಟ್‌

Bar & Bench

ರಸ್ತೆ ಅಪಘಾತದಲ್ಲಿ ವಾಹನ ಚಾಲಕ ಮೃತಪಟ್ಟಾಗ ಆತ ಚಾಲನಾ ಪರವಾನಗಿ (ಡಿಎಲ್) ಹೊಂದಿರುವುದು ಸಾಬೀತಾಗದ ಸಂದರ್ಭದಲ್ಲಿ 'ಪಾವತಿ ಮತ್ತು ವಸೂಲಾತಿ' ನೀತಿಯ ಅನುಸಾರ ವಿಮಾ ಕಂಪೆನಿ ಸಂತ್ರಸ್ತರಿಗೆ ಪರಿಹಾರ ಪಾವತಿಸಿ ನಂತರ ವಾಹನ ಮಾಲೀಕರಿಂದ ವಸೂಲಿ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಲಾರಿ ಚಾಲಕನಿಗೆ ಪರಿಹಾರ ಪಾವತಿಯ ಹೊಣೆಯನ್ನು ತನಗೆ ಹೊರಿಸಿದ ಚಿತ್ರದುರ್ಗದ ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕರ ಪರಿಹಾರ ಆಯುಕ್ತರ ಆದೇಶ ಪ್ರಶ್ನಿಸಿ ನ್ಯೂ ಇಂಡಿಯಾ ಇನ್ಸೂರೆನ್ಸ್‌ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ಏಕಸದಸ್ಯ ಪೀಠ ಭಾಗಶಃ ಮಾನ್ಯ ಮಾಡಿದೆ.

ಹಾಲಿ ಪ್ರಕರಣದಲ್ಲಿ ಲಾರಿ ಮಾಲೀಕ ಮತ್ತು ಮೃತ ಚಾಲಕನ ನಡುವೆ ಉದ್ಯೋಗದಾತ -ಉದ್ಯೋಗಿ ಸಂಬಂಧವಿರುವುದು ದೃಢಪಟ್ಟಿದೆ. ಮೃತ ವ್ಯಕ್ತಿ ಚಾಲನಾ ಪರವಾನಗಿ ಹೊಂದಿದ್ದ ಎಂಬುದಾಗಿ ಆತನ ಕುಟುಂಬದ ಸದಸ್ಯರು ಹೇಳುತ್ತಾರೆ. ಆದರೆ, ಅದಕ್ಕೆ ಯಾವುದೇ ಪುರಾವೆ ಒದಗಿಸಿಲ್ಲ. ಮೃತರು ಚಾಲನಾ ಪರವಾನಗಿ ಹೊಂದಿರುವುದು ಸಾಬೀತಾಗದ ವೇಳೆ ಪಾವತಿ ಮತ್ತು ವಸೂಲಾತಿ ನೀತಿಯನ್ನು ಅನ್ವಯಿಸಬಹುದು. ಅದರಂತೆ ಪರಿಹಾರ ಮೊತ್ತವನ್ನು ಮೊದಲು ಲಾರಿಗೆ ವಿಮೆ ಸೌಲಭ್ಯ ಕಲ್ಪಿಸಿದ್ದ ಕಂಪೆನಿ ಪಾವತಿಸಬೇಕು. ನಂತರ ಆ ಮೊತ್ತವನ್ನು ಲಾರಿ ಮಾಲೀಕನಿಂದ ವಸೂಲಿ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಮೃತರ ಚಾಲನಾ ಪರವಾನಗಿ ಅಪಘಾತ ಸಂಭವಿಸಿದ ಸ್ಥಳದಲ್ಲಿ ಪತ್ತೆಯಾಗಿಲ್ಲ ಮತ್ತು ಚಾಲಕ ಅಧಿಕೃತ ಚಾಲನಾ ಪರವಾನಗಿ ಹೊಂದಿರುವ ಬಗ್ಗೆ ಯಾವುದೇ ಸಾಕ್ಷ್ಯ ಒದಗಿಸಿಲ್ಲ. ಚಾಲನಾ ಪರವಾನಗಿ ಇಲ್ಲದೆಯೇ ಲಾರಿ ಚಲಾಯಿಸಲು ಚಾಲಕನಿಗೆ ಅನುಮತಿಸಿರುವುದು ಮಾಲೀಕನ ತಪ್ಪಾಗಿದೆ. ಹೀಗಾಗಿ, ಪ್ರಕರಣದ ಸಂತ್ರಸ್ತರಿಗೆ ಪರಿಹಾರ ಪಾವತಿಸುವ ಹೊಣೆ ಲಾರಿ ಮಾಲೀಕನ ಮೇಲಿರುತ್ತದೆ ಎಂದು ಅರ್ಜಿದಾರ ಪರ ವಕೀಲರು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಎಸ್ ಎಂ ನೂರುದ್ದೀನ್ ಒಡೆತನದ ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಫೌಸ್‌, 2008ರಲ್ಲಿ ಚಿತ್ರದುರ್ಗದ ಅಡಕಮಾರನಹಳ್ಳಿ ಬಳಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮೃತನ ಕುಟುಂಬದವರಿಗೆ ವಾರ್ಷಿಕ ಶೇ.12ರಷ್ಟು ಬಡ್ಡಿದರಲ್ಲಿ 4,23,580 ರೂಪಾಯಿ ಪರಿಹಾರ ಪಾವತಿಸುವಂತೆ ವಿಮಾ ಕಂಪೆನಿಗೆ ನಿರ್ದೇಶಿಸಲಾಗಿತ್ತು. ಅದನ್ನು ಪ್ರಶ್ನಿಸಿ ವಿಮಾ ಕಂಪೆನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

New India Assurance Company Ltd Vs Sadhika and others.pdf
Preview