ಸುದ್ದಿಗಳು

ಗಂಭೀರ ಅಪರಾಧ ಎಸಗಿದ್ದರೂ ದೀರ್ಘ ಕಾಲ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಜಾಮೀನು ನೀಡಬೇಕು: ಬಾಂಬೆ ಹೈಕೋರ್ಟ್

Bar & Bench

ವಿಚಾರಣಾಧೀನ ಕೈದಿಗಳು ದೀರ್ಘ ಕಾಲದಿಂದ ಜೈಲು ಶಿಕ್ಷೆಗೆ ಗುರಿಯಾಗಿದ್ದರೆ ಅವರು ಎಸಗಿದ್ದರೆನ್ನಲಾದ ಅಪರಾಧಗಳು ಗಂಭೀರವಾಗಿದ್ದರೂ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಬೇಕು ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ತಿಳಿಸಿದೆ [ಆಕಾಶ್ ಸತೀಶ್ ಚಾಂಡಾಲಿಯಾ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಕಳೆದ 7.5 ವರ್ಷಗಳಿಂದ ಜೈಲಿನಲ್ಲಿದ್ದ ಜೋಡಿ ಕೊಲೆ ಆರೋಪಿ ಆಕಾಶ್ ಚಾಂಡಾಲಿಯಾಗೆ ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಮೂರ್ತಿ ಭಾರತಿ ಡಾಂಗ್ರೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತ್ವರಿತ ವಿಚಾರಣೆ ನಡೆಯುತ್ತದೆ ಎಂಬುದು ಖಾತ್ರಿ ಇಲ್ಲದಿದ್ದಾಗ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಭಾರತದ ಸಂವಿಧಾನದ 21 ನೇ ವಿಧಿಗೆ ಅನುಗುಣವಾಗಿರುವುದಿಲ್ಲ ಎಂದು ಅವರು ಹೇಳಿದರು.

"ತ್ವರಿತ ವಿಚಾರಣೆ ಖಾತ್ರಿಪಡಿಸದೆ ವೈಯಕ್ತಿಕ ಸ್ವಾತಂತ್ರ್ಯ ಕಸಿದುಕೊಳ್ಳುವುದು ಸಂವಿಧಾನದ 21 ನೇ ವಿಧಿಗೆ ಅನುಗುಣವಾಗಿರದು. ಸಕಾಲಿಕ ವಿಚಾರಣೆ ಸಾಧ್ಯವಾಗದಿದ್ದಾಗ, ಆರೋಪಿಯು ಈಗಾಗಲೇ ಪ್ರಸ್ತಾಪಿಸಲಾದ ಗರಿಷ್ಠ ಅವಧಿಗೆ ಶಿಕ್ಷೆಗೆ ಒಳಗಾಗಿದ್ದರೆ, ಆತ ಮತ್ತಷ್ಟು ಸೆರೆವಾಸ ಅನುಭವಿಸುವಂತಿಲ್ಲ. ಅಂತಹ ಸಂದರ್ಭಗಳಲ್ಲಿ, ಅವರು ಎದುರಿಸುತ್ತಿರುವ ಆರೋಪಗಳ ಗಂಭೀರತೆಯನ್ನು ಬದಿಗಿಟ್ಟು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ನ್ಯಾಯಾಲಯ ಸಾಮಾನ್ಯವಾಗಿ ಬದ್ಧವಾಗಿರುತ್ತದೆ,” ಎಂದು ನ್ಯಾಯಾಧೀಶರು ತಮ್ಮ 7 ಪುಟಗಳ ಆದೇಶದಲ್ಲಿ ತಿಳಿಸಿದ್ದಾರೆ.

ಇದೇ ಪ್ರಕರಣದ ಇಬ್ಬರು ಸಹ ಆರೋಪಿಗಳಾದ ವಿಕಾಸ್ ಗಾಯಕ್ವಾಡ್ ಮತ್ತು ಯಾಸ್ಮಿನ್ ಸಯ್ಯದ್ ಅವರು ಈಗಾಗಲೇ 2022 ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ಆರೋಪಿ ತನ್ನ ಜಾಮೀನು ಅರ್ಜಿಯಲ್ಲಿ ಗಮನಸೆಳೆದಿದ್ದ.

ವಿಚಾರಣೆ ವಿಳಂಬವಾಗಿದ್ದರಿಂದ ಈ ಇಬ್ಬರೂ ಸಹ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ ಎನ್ನುವುದನ್ನು ನ್ಯಾಯಮೂರ್ತಿ ಡಾಂಗ್ರೆ ಗಮನಿಸಿದರು. ಅದರಂತೆ ಚಾಂಡಾಲಿಯಾ ಕೂಡ ಜಾಮೀನಿನ ಮೇಲೆ ಬಿಡುಗಡೆಯಾಗಲು ಯಾವುದೇ ತೊಂದರೆ ಇಲ್ಲ ಎಂದು ಅವರು ಹೇಳಿದರು.