CBI and G Janardhana Reddy FB
ಸುದ್ದಿಗಳು

ಜನಾರ್ದನ ರೆಡ್ಡಿ ಅಕ್ರಮ ಹಣಗಳಿಕೆ: ನಾಲ್ಕು ದೇಶಗಳ ಪ್ರಾಧಿಕಾರಗಳಿಗೆ ಮಾಹಿತಿ ಒದಗಿಸಲು ಕೋರಿದ ಸಿಬಿಐ ವಿಶೇಷ ನ್ಯಾಯಾಲಯ

ಜನಾರ್ದನ ರೆಡ್ಡಿ ಸುಮಾರು 7 ರಿಂದ 8 ಮಿಲಿಯನ್ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ವಿವಿಧ ದೇಶಗಳಿಗೆ ರಫ್ತು ಮಾಡಿ ಅಪಾರ ಪ್ರಮಾಣದ ಹಣ ಗಳಿಸಿದ್ದು ಇದರ ಬಹುಪಾಲನ್ನು ವಿವಿಧ ದೇಶಗಳಲ್ಲಿ ಇರಿಸಿದ್ದಾರೆ ಎನ್ನಲಾಗಿದೆ.

Bar & Bench

ಕಬ್ಬಿಣ ಅದಿರಿನ ಅಕ್ರಮ ಮಾರಾಟದ ಮೂಲಕ ಗಳಿಸಿರುವ ವ್ಯಾಪಕ ಹಣವನ್ನುವಿವಿಧ ದೇಶಗಳಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಇರಿಸಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿ, ದಾಖಲೆಗಳನ್ನು ಪಡೆಯಲು ತನಿಖಾ ಸಂಸ್ಥೆಗೆ ಸಹಾಯ ಮಾಡುವಂತೆ ವಿವಿಧ ನಾಲ್ಕು ದೇಶಗಳ ಸಕ್ಷಮ ಪ್ರಾಧಿಕಾರಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಇತ್ತೀಚೆಗೆ ಮನವಿ ಮಾಡಿದೆ.

ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಇ ಚಂದ್ರಕಲಾ ಅವರು ಸ್ವಿಟ್ಜೆರ್ಲ್ಯಾಂಡ್‌, ಸಿಂಗಪೋರ್, ಯುಎಇ ಮತ್ತು ಐಲ್ ಆಫ್ ಮ್ಯಾನ್ ದೇಶಗಳ ನ್ಯಾಯಾಂಗ ಅಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ಕೋರಿದ್ದಾರೆ.

ಆರೋಪಿಗೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್ 166 (ಎ) ಪ್ರಕಾರ ಮನವಿ ಮಾಡುತ್ತಿದ್ದು, ಈ ಪ್ರಕರಣದಲ್ಲಿ ತನಿಖೆಗೆ ಸಹಕಾರ ನೀಡುವುದಕ್ಕಾಗಿ ಕೋರುತ್ತಿರುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.

ಸಿಬಿಐ ತನಿಖಾಧಿಕಾರಿಗಳು ಜಿಎಲ್‌ಎ(ಗಾಲಿ ಜನಾರ್ದನ ರೆಡ್ಡಿ) ಟ್ರೇಡಿಂಗ್ ಇಂಟರ್ ನ್ಯಾಶನಲ್ ಪ್ರೈವೇಟ್ ಲಿಮಿಟೆಡ್‌ನ ಸಂಯೋಜನೆಯ ವಿವರಗಳಂತಹ ಮಾಹಿತಿಯನ್ನು ಸಂಗ್ರಹಿಸಲು ನ್ಯಾಯಾಂಗದ ಸಹಾಯವನ್ನು ಕೋರಿದೆ. ಈ ನಿಟ್ಟಿನಲ್ಲಿ ಮನವಿ ಮಾಡಲಾಗುತ್ತಿದೆ ಎಂದು ನ್ಯಾಯಾಧೀಶರು ಕೋರಿದ್ದಾರೆ.

ಜಿಎಲ್‌ಎ ಕಂಪೆನಿಯ ಸ್ವರೂಪ, ಬ್ಯಾಂಕ್ ಖಾತೆಗೆ ಸಂಬಂಧಿಸಿದ ವಿವರ, ಮಾಲೀಕರು ಮತ್ತು ಅಧಿಕೃತವಾಗಿ ಸಹಿ ಹಾಕಿರುವ ವ್ಯಕ್ತಿಯ ವಿವರ. ಅದರ ಮುಂದಿನ ಫಲಾನುಭವಿಗಳು, ಕಂಪೆನಿಯ ಷೇರುಗಳ ವಿವರ, ಅದನ್ನು ಖರೀದಿ ಮಾಡಿರುವವರು ಮತ್ತು ಮಾರಾಟ ಮಾಡಿರುವವರು, ಕಂಪೆನಿಯ ನಿರ್ದೇಶಕರು ಮತ್ತು ಷೇರುದಾರರ ವಿವರ ಸೇರಿದಂತೆ ಲಭ್ಯವಿರುವ ಎಲ್ಲ ಮಾಹಿತಿಯನ್ನು ಒದಗಿಸುವಂತೆ ನ್ಯಾಯಾಲಯ ಕೋರಿದೆ.

ಗಾಲಿ ಜನಾರ್ದನ ರೆಡ್ಡಿ ಅವರು 2009-10ರ ಅವಧಿಯಲ್ಲಿ ಸುಮಾರು 7 ರಿಂದ 8 ಮಿಲಿಯನ್ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ವಿವಿಧ ದೇಶಗಳಿಗೆ ರಫ್ತು ಮಾಡುವ ಮೂಲಕ ಅಪಾರ ಪ್ರಮಾಣದ ಹಣ ಗಳಿಸಿದ್ದು ಇದರ ಬಹುಪಾಲನ್ನು ವಿವಿಧ ದೇಶಗಳಲ್ಲಿ ಇರಿಸಿದ್ದಾರೆ.

ಇದನ್ನು ಪತ್ತೆ ಹಚ್ಚುವ ಸಲುವಾಗಿ ಜಿಎಲ್‌ಎ ಟ್ರೇಡಿಂಗ್ ಇಂಟರ್ ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿರುವ ಕಂಪೆನಿ ಮತ್ತು ಬ್ಯಾಂಕ್ ಖಾತೆ ಇದೆಯೇ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಸಿಬಿಐ ನ್ಯಾಯಾಲಯವನ್ನು ಕೋರಿತ್ತು.

ಸಿಬಿಐ ಅಧಿಕಾರಿಗಳು ಸಲ್ಲಿಸಿರುವ ಆರೋಪ ಪಟ್ಟಿಯ ಪ್ರಕಾರ ನ್ಯಾಯಾಲಯವು ಸಂಜ್ಞೇಯ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸೆಕ್ಷನ್‌ 166-ಎ ಸಿಆರ್‌ಪಿಸಿ ಅಡಿ ಕೋರಲಾಗಿರುವಂತೆ ಸಂಬಂಧಪಟ್ಟ ದೇಶಗಳ ಪ್ರಾಧಿಕಾರಗಳ ಮೂಲಕ ಮಾಹಿತಿ ಪಡೆಯಲು ನ್ಯಾಯಾಂಗ ಸಹಕಾರವನ್ನು ಒದಗಿಸಬೇಕೆನ್ನುವ ಕೋರಿಕೆಯನ್ನು ನ್ಯಾಯಾಲಯವು ಮಾನ್ಯ ಮಾಡಿತು.

ಇದರಂತೆ, ವಿವಿಧ ದೇಶಗಳ ಸಕ್ಷಮ ಪ್ರಾಧಿಕಾರಗಳಿಗೆ ಮನವಿ ಪತ್ರವನ್ನು ನೀಡಲು ಕಚೇರಿಗೆ ಸೂಚಿಸಿತು. ಪ್ರಾಸಿಕ್ಯೂಷನ್‌ ಒದಗಿಸಿರುವ ದಾಖಲೆಗಳನ್ನು ಈ ಸಕ್ಷಮ ಪ್ರಾಧಿಕಾರಗಳಿಗೆ ಕಳುಹಿಸಿಕೊಡಲು ಕಚೇರಿಗೆ ನಿರ್ದೇಶಿಸಿತು.

ಸುಪ್ರೀಂಕೋರ್ಟ್ ನಿರ್ದೇಶನದಂತೆ ಕೇಂದ್ರೀಯ ತನಿಖಾ ದಳವು (ಸಿಬಿಐ) ಆಸೋಸಿಯೇಟೆಡ್ ಮೈನಿಂಗ್ ಕಂಪೆನಿಯ ಗಣಿಗಾರಿಕೆಗೆಗೆ ಸಂಬಂಧಿಸಿದಂತೆ ಗುತ್ತಿಗೆ ವಿಷಯದಲ್ಲಿ ವಿವಿಧ ವ್ಯಕ್ತಿಗಳು ನಡೆಸಿರುವ ಅಕ್ರಮ ಗಣಿಕಾರಿಕೆಯ ಕುರಿತು ತನಿಖೆ ನಡೆಸುತ್ತಿದೆ