ಸುದ್ದಿಗಳು

ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ಪಾವತಿಸದಿರಲು ನಿರುದ್ಯೋಗ, ಕಡಿಮೆ ವರಮಾನ ಸಕಾರಣಗಳಲ್ಲ: ಕರ್ನಾಟಕ ಹೈಕೋರ್ಟ್‌

Bar & Bench

ಕ್ರಿಮಿನಲ್‌ ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 125ರ ಅಡಿ ಪತ್ನಿ ಮತ್ತು ಮಕ್ಕಳ ಜೀವನಾಂಶ ಪಾವತಿಸದಿರಲು ನಿರುದ್ಯೋಗ ಮತ್ತು ಕಡಿಮೆ ವರಮಾನದ ಕಾರಣಗಳನ್ನು ಪತಿ ನೀಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ.

ಕೂಲಿ ಕೆಲಸ ಮಾಡುತ್ತಿರುವುದರಿಂದ ಅಪ್ರಾಪ್ತ ಮಗುವಿನ ಜೀವನ ನಿರ್ವಹಣೆ ಮಾಡಲಾಗದು ಎಂದು ಆ ಜವಾಬ್ದಾರಿಯಿಂದ ವಿಮುಖವಾಗುವಂತಿಲ್ಲ ಎಂದು ನವೆಂಬರ್‌ 17ರ ತೀರ್ಪಿನಲ್ಲಿ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ಪೀಠವು ಹೇಳಿದೆ.

“ಅಪ್ರಾಪ್ತ ಮಗುವಿನ ಜೀವನ ನಿರ್ವಹಣೆಯು ತಂದೆಯ ವೈಯಕ್ತಿಕ ಜವಾಬ್ದಾರಿಯಾಗಿದೆ. ಆದ್ದರಿಂದ, ನಿರುದ್ಯೋಗ, ಕಡಿಮೆ ಸಂಪಾದನೆಯ ಕಾರಣಗಳನ್ನು ನೀಡಿ ಪತ್ನಿ ಮತ್ತು ಮಕ್ಕಳ ಬದುಕಿನ ನಿರ್ವಹಣೆಯಿಂದ ನುಣಿಚಿಕೊಳ್ಳಲಾಗದು. ಕೂಲಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಕುಟುಂಬ ನಿರ್ವಹಣೆಯಿಂದ ಅದರಲ್ಲೂ ಅಪ್ರಾಪ್ತ ಬಾಲಕನ ಜೀವನ ನಿರ್ವಹಣೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾಗದು” ಎಂದು ನ್ಯಾಯಾಲಯ ಹೇಳಿದೆ.

ಅಪ್ರಾಪ್ತ ಪುತ್ರ ಪ್ರೌಢಾವಸ್ಥೆಗೆ ಬರುವವರಿಗೆ 3,500 ರೂಪಾಯಿ ಪಾವತಿಸುವಂತೆ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ವಜಾಗೊಳಿಸುವಂತೆ ಕೋರಿ ಸುನಿಲ್‌ ಎಂಬಾತ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ಪತಿ-ಪತ್ನಿಯು ವಿಚ್ಛೇದನ ಪಡೆದ ಬಳಿಕ ಇಬ್ಬರೂ ವಿಭಿನ್ನ ಬದುಕಿನ ದಾರಿ ಹಿಡಿದಿದ್ದು, ಅಪ್ರಾಪ್ತ ಮಗುವನ್ನು ನ್ಯಾಯಾಲಯ ತಾಯಿಯ ಮಡಿಲಿಗೆ ಹಾಕಿತ್ತು. ಸುಸ್ಥಿತಿಯಲ್ಲಿದ್ದರೂ ತಂದೆಯು ತನ್ನ ಜೀವನ ನಿರ್ವಹಣೆಗೆ ನ್ಯಾಯಾಲಯ ಆದೇಶಿಸಿದಷ್ಟು ಜೀವನಾಂಶ ಪಾವತಿಸುತ್ತಿಲ್ಲ ಎಂದು ಆರೋಪಿಸಿ ಅಪ್ರಾಪ್ತ ಬಾಲಕ ತಾಯಿಯ ಮೂಲಕ ಸಿಆರ್‌ಪಿಸಿ ಸೆಕ್ಷನ್‌ 125ರ ಅಡಿ ಜೀವನಾಂಶ ಕೊಡಿಸುವಂತೆ ನ್ಯಾಯಾಲಯವನ್ನು ಕೋರಿಕೊಂಡಿದ್ದನು.

ಮಗುವಿನ ಆರೈಕೆ ಮಾಡುವುದರಿಂದ ಉದ್ದೇಶಪೂರ್ವಕವಾಗಿ ತಂದೆ ವಿಮುಖವಾಗುತ್ತಿದ್ದಾರೆ ಎಂಬುದನ್ನು ಪತ್ನಿಯು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ಇದನ್ನು ಆಧರಿಸಿ ನ್ಯಾಯಾಲಯವು ಜೀವನ ನಿರ್ವಹಣೆ ಆದೇಶ ಹೊರಡಿಸಿತ್ತು. ಈ ಆದೇಶವನ್ನು ವಜಾಗೊಳಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ನಿರುದ್ಯೋಗ, ಕಡಿಮೆ ವರಮಾನದ ಕಾರಣಗಳನ್ನು ನೀಡಿ ಪತ್ನಿ ಮತ್ತು ಮಕ್ಕಳ ನಿರ್ವಹಣೆಯಿಂದ ವಿಮುಖವಾಗುವಂತಿಲ್ಲ.
ಕರ್ನಾಟಕ ಹೈಕೋರ್ಟ್‌

ಕೌಟುಂಬಿಕ ನ್ಯಾಯಾಲಯವು ಗಂಭೀರ ಮಾಹಿತಿ ಕೊರತೆಯಿಂದ ಆದೇಶ ಹೊರಡಿಸಿದ್ದು, ಅದು ಬದಿಗೆ ಸರಿಸಲು ಅರ್ಹವಾಗಿದೆ ಎಂದು ಅರ್ಜಿದಾರರ ಪರ ವಕೀಲ ಕೆ ಪ್ರಸನ್ನ ಶೆಟ್ಟಿ ವಾದಿಸಿದರು. ಕೌಟುಂಬಿಕ ನ್ಯಾಯಾಲಯವು ತನಗೆ ಸಲ್ಲಿಸಲಾಗಿರುವ ಮೌಖಿಕ ಮತ್ತು ಸಾಕ್ಷ್ಯದ ದಾಖಲೆಗಳನ್ನು ಪರಿಶೀಲಿಸಲು ವಿಫಲವಾಗಿದೆ. ಬಾಲಕನ ತಂದೆ-ತಾಯಿ ಈಗಾಗಲೇ ವಿಚ್ಛೇದನ ಪಡೆದಿರುವುದರಿಂದ ಪರಿಹಾರ ಕೋರಿಕೆಯ ಅರ್ಜಿಯು ಸಿಂಧುವಲ್ಲ ಎಂದು ನ್ಯಾಯಾಧೀಶರು ಅದನ್ನು ವಜಾಗೊಳಿಸಬಹುದಿತ್ತು. ತನ್ನ ಕಕ್ಷಿದಾರರು ಕೂಲಿ ಕೆಲಸ ಮಾಡುತ್ತಿದ್ದು, ಕಡಿಮೆ ಆದಾಯ ಗಳಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪಾಲಿಸಲು ಕಕ್ಷಿದಾರರು ಅರ್ಹವಾಗಿಲ್ಲ ಎಂದು ವಾದಿಸಿದ್ದರು.

ಅರ್ಜಿದಾರರ ವಾದದಲ್ಲಿ ತಿರುಳಿಲ್ಲ ಎಂದು ಭಾವಿಸಿರುವ ನ್ಯಾಯಾಲಯವು “ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿಯು ಆಸ್ತಿ ಹೊಂದಿದ್ದರೂ ಅಥವಾ ಹೊಂದಿಲ್ಲದಿದ್ದರೂ ತನ್ನ ಪತ್ನಿ, ಅಪ್ರಾಪ್ತ ಪುತ್ರರು ಮತ್ತು ಅವಿವಾಹಿತ ಪುತ್ರಿಯರು, ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವುದು ಕಾನೂನಾತ್ಮಕ ಜವಾಬ್ದಾರಿಯಾಗಿದೆ” ಎಂದಿದೆ.

“ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿಯು ಆಸ್ತಿ ಹೊಂದಿದ್ದರೂ ಅಥವಾ ಹೊಂದಿಲ್ಲದಿದ್ದರೂ ತನ್ನ ಪತ್ನಿ, ಅಪ್ರಾಪ್ತ ಪುತ್ರರು ಮತ್ತು ಅವಿವಾಹಿತ ಪುತ್ರಿಯರು, ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವುದು ಕಾನೂನಾತ್ಮಕ ಜವಾಬ್ದಾರಿಯಾಗಿದೆ.”
ಕರ್ನಾಟಕ ಹೈಕೋರ್ಟ್‌

“ತನ್ನ ಸಂಬಂಧಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ವೈಯಕ್ತಿಕ, ಕಾನೂನು ಮತ್ತು ಸಂಪೂರ್ಣ ನಡತೆಗೆ ಸಂಬಂಧಿಸಿದ್ದಾಗಿದೆ. ಇದು ಪಕ್ಷಕಾರರ ಸಂಬಂಧದ ಅಸ್ತಿತ್ವದಿಂದಲೇ ಉದ್ಭವಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.

“ಪೋಷಕರು-ಮಕ್ಕಳ ಸಂಬಂಧಗಳನ್ನು ಬಲಪಡಿಸಲು ಕೆಲಸ, ಪರಸ್ಪರ ತಿಳುವಳಿಕೆ ಮತ್ತು ಪ್ರಯತ್ನಗಳು ಬೇಕಾಗುತ್ತವೆ. ಪೋಷಕರ ಕೆಲಸವು ಅತ್ಯಂತ ಕಷ್ಟದ ಕೆಲಸ. ನಿಮ್ಮ ಮಕ್ಕಳೊಂದಿಗೆ ನಿಕಟ ಸಂಬಂಧ ಮತ್ತು ಮುಕ್ತ ಸಂವಹನವನ್ನು ಕಾಪಾಡಿಕೊಳ್ಳುವುದರಿಂದ ಪೋಷಕರು ಜೀವನದ ಎಲ್ಲಾ ಹಂತಗಳಲ್ಲಿ ಅವರೊಂದಿಗೆ ಸಂಪರ್ಕದಲ್ಲಿರಬಹುದು” ಎಂದು ನ್ಯಾಯಾಲಯ ಹೇಳಿದೆ.

ಅಪ್ರಾಪ್ತ ಬಾಲಕನು ವಯಸ್ಕ ಹಂತ ಮೀರಿರುವುದರಿಂದ ಆತನಿಗೆ ಅರ್ಜಿದಾರರು ಜೀವನಾಂಶ ಪಾವತಿಸುವ ಅಗತ್ಯ ಉದ್ಭವಿಸುವುದಿಲ್ಲ ಎಂದು ಶೆಟ್ಟಿ ಅಂತಿಮವಾಗಿ ವಾದಿಸಿದರು. 2013ರಲ್ಲಿ ಬಾಲಕ 8ನೇ ತರಗತಿ ಓದುತ್ತಿದ್ದಾಗ ಜೀವನಾಂಶಕ್ಕೆ ಕೋರಿಕೆ ಸಲ್ಲಿಸಲಾಗಿದೆ. 2014ರಲ್ಲಿ ಕೌಟುಂಬಿಕ ನ್ಯಾಯಾಲಯ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಅದೇ ವರ್ಷ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.

“ಕೌಟುಂಬಿಕ ನ್ಯಾಯಾಲಯದ ಆದೇಶದಂತೆ ತಂದೆಯು ಜೀವನಾಂಶ ಪಾವತಿಸಿದ್ದರೆ ಬಾಲಕ ಅದನ್ನು ತನ್ನ ಶಿಕ್ಷಣಕ್ಕೆ ಬಳಸಿಕೊಳ್ಳುತ್ತಿದ್ದ. ಈ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನ ಅಲಂಕರಿಸುತ್ತಿದ್ದ” ಎಂದು ನ್ಯಾಯಾಲಯ ಹೇಳಿದೆ. ಮೇಲಿನ ಕಾರಣಗಳ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯದ ಜೀವನ ನಿರ್ವಹಣೆ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿರುವ ನ್ಯಾಯಾಲಯವು ಮನವಿಯನ್ನು ವಜಾಗೊಳಿಸಿದೆ.