NLSIU 
ಸುದ್ದಿಗಳು

ಶುಲ್ಕ ಪಾವತಿಸಲಾಗದ ಸ್ಥಿತಿ ದುರದೃಷ್ಟಕರ: ತೃತೀಯ ಲಿಂಗಿ ನೀತಿ ಜಾರಿ ಕುರಿತು ಅಫಿಡವಿಟ್‌ ಸಲ್ಲಿಸಲು ಹೈಕೋರ್ಟ್‌ ಸೂಚನೆ

ತೃತೀಯ ಲಿಂಗಿ ನೀತಿಯನ್ನು ಸರ್ಕಾರ ಹೇಗೆ ಜಾರಿ ಮಾಡುತ್ತಿದೆ. ಹಣಕಾಸಿನ ನೆರವು ನೀಡಲಾಗುತ್ತಿದೆಯೇ, ನೀಡಿದರೆ ಎಷ್ಟು ನೆರವು ನೀಡಲಾಗುತ್ತಿದೆ, ಅದನ್ನು ಪಡೆಯುವುದು ಹೇಗೆ ಎಂದು ತಿಳಿಸುವಂತೆ ನಿರ್ದೇಶಿಸಿದ ನ್ಯಾಯಾಲಯ.

Siddesh M S

ತೃತೀಯ ಲಿಂಗಿಯೊಬ್ಬರು ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ಎನ್‌ಎಲ್‌ಎಸ್‌ಐಯು) ಕಾನೂನು ಅಧ್ಯಯನ ಮಾಡಲು ಹಣಕಾಸಿನ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಶುಲ್ಕ ಪಾವತಿಸಲಾಗದಿರುವುದು ದುರದೃಷ್ಟಕರ ಎಂದಿರುವ ಕರ್ನಾಟಕ ಹೈಕೋರ್ಟ್‌, ರಾಜ್ಯ ತೃತೀಯ ಲಿಂಗಿಗಳ ನೀತಿ-2017ಅನ್ನು ಹೇಗೆ ಜಾರಿ ಮಾಡಲಾಗುತ್ತಿದೆ ಎಂಬುದನ್ನು ಸವಿವರವಾಗಿ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿ ಸಲ್ಲಿಸುವಂತೆ ಈಚೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಎನ್‌ಎಲ್‌ಎಸ್‌ಐಯು ಪ್ರವೇಶ ನಿರಾಕರಿಸಿದ್ದಕ್ಕೆ ಆಕ್ಷೇಪಿಸಿ ಮತ್ತು ರಾಜ್ಯದಲ್ಲಿ ತೃತೀಯ ಲಿಂಗಿ ನೀತಿ ಜಾರಿಗೆ ಕೋರಿ ತೃತೀಯ ಲಿಂಗಿ ಮುಗಿಲ್‌ ಅನ್ಬು ವಸಂತ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ರವಿ ವಿ. ಹೊಸಮನಿ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರವು ತೃತೀಯ ಲಿಂಗಿ ನೀತಿಯನ್ನು ಹೇಗೆ ಜಾರಿ ಮಾಡುತ್ತಿದೆ. ನೀತಿಯ ಭಾಗವಾಗಿ ತೃತೀಯ ಲಿಂಗಿಗಳಿಗೆ ಹಣಕಾಸಿನ ನೆರವು ನೀಡಲಾಗುತ್ತಿದೆಯೇ, ಒಂದೊಮ್ಮೆ ನೀಡಿದರೆ ಎಷ್ಟು ನೆರವು ನೀಡಲಾಗುತ್ತಿದೆ ಮತ್ತು ಅದನ್ನು ಪಡೆಯುವುದು ಹೇಗೆ ಎಂಬುದು ಸೇರಿದಂತೆ ಅಗತ್ಯ ವಿಚಾರಗಳನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸಬೇಕು ಎಂದು ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶಿಸಿದೆ.

ತಮ್ಮ ಅರ್ಜಿಯಲ್ಲಿ ಅರ್ಜಿದಾರರು ಸರ್ಕಾರವು ಕರ್ನಾಟಕ ರಾಜ್ಯ ತೃತೀಯ ಲಿಂಗಿಗಳ ನೀತಿಯನ್ನು ಜಾರಿಗೊಳಿಸಲಾಗಿಲ್ಲ ಎಂದು ಆಕ್ಷೇಪಿಸಿದ್ದಾರೆ. ನೀತಿಯಲ್ಲಿ ಹಣಕಾಸಿನ ನೆರವಿನ ವಿಚಾರ ಇತ್ಯಾದಿ ಸೇರಿದೆ. ಈ ಸಂಬಂಧ ಹಣಕಾಸಿನ ನೆರವು ಇತ್ಯಾದಿ ಕೋರಲು ಅರ್ಜಿಯಲ್ಲಿ ತಿದ್ದುಪಡಿ ಮಾಡುವ ಸಂಬಂಧ ಅರ್ಜಿದಾರರು ಮನವಿ ಸಲ್ಲಿಕೆ ಮಾಡಿದ್ದಾರೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ಮಧ್ಯಂತರ ಆದೇಶದ ಮೂಲಕ 2023ರ ಆಗಸ್ಟ್‌ 22ರಂದು ಹೈಕೋರ್ಟ್‌ ಮುಗಿಲ್‌ ಅನ್ಬು ವಸಂತ ಅವರಿಗೆ ಎನ್‌ಎಲ್‌ಎಸ್‌ಐಯು ಪ್ರವೇಶ ಕಲ್ಪಿಸಬೇಕು ಎಂದಿತ್ತು. ಆದರೆ, ದಯನೀಯ ಹಣಕಾಸಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ಗೆ ಅವರಿಗೆ ಶುಲ್ಕ ಪಾವತಿಸಲು ಸಾಧ್ಯವಾಗದಿರುವುದು ದುರುದೃಷ್ಟಕರದಂತೆ ಭಾಸವಾಗುತ್ತಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಅರ್ಜಿದಾರರ ಪರ ವಕೀಲರು “ಅಗತ್ಯ ಹಣಕಾಸಿನ ನೆರವು ಕಲ್ಪಿಸದೇ ಪ್ರವೇಶಾತಿಗೆ ಮೀಸಲಾತಿ ನಿಗದಿಪಡಿಸುವುದು ಅಥವಾ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವುದು ಅಥವಾ ಹಾಲಿ ಪ್ರಕರಣದಲ್ಲಿ ಅರ್ಜಿದಾರರಿಗೆ ಪ್ರವೇಶಾತಿ ಕಲ್ಪಿಸುವಂತೆ ಮಧ್ಯಂತರ ಆದೇಶ ಮಾಡುವುದರಿಂದ ತೃತೀಯ ಲಿಂಗಿಗಳು ಎದುರಿಸುವ ಸಮಸ್ಯೆಗೆ ಸ್ಪಂದಿಸಿದಂತಾಗದು” ಎಂದರು.

ಎನ್‌ಎಲ್‌ಎಸ್‌ಐಯು ಪರವಾಗಿ ವಾದಿಸಿದ ವಕೀಲರು “ಲಭ್ಯವಿರುವ ಕಾನೂನು ಚೌಕಟ್ಟಿನಲ್ಲಿ ಅರ್ಜಿದಾರರಿಗೆ ಎಲ್ಲಾ ಅಗತ್ಯ ನೆರವು ಕಲ್ಪಿಸಲಾಗಿದೆ. ಇದಕ್ಕೆ ಅರ್ಜಿದಾರರು ಯಾವುದೇ ಆಕ್ಷೇಪ ಎತ್ತಿಲ್ಲ. ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ ಬೋಧನೆ ಆರಂಭವಾಗಿದೆ. ಈಗ ಅರ್ಜಿದಾರರು ಶುಲ್ಕ ಪಾವತಿಸಿದರೂ ಬಾಕಿ ಉಳಿದಿರುವ ಅವಧಿಯು ವಿಶ್ವವಿದ್ಯಾಲಯದ ನಿಯಮಗಳ ಅನ್ವಯ ಅಗತ್ಯ ಹಾಜರಾತಿ ಪಡೆಯಲು ಸಾಧ್ಯವಾಗದು. ಹೀಗಾಗಿ, ನ್ಯಾಯಾಲಯ ಕಲ್ಪಿಸಿರುವ ಪರಿಹಾರವು ಅನೂರ್ಜಿತವಾಗಲಿದೆ” ಎಂದರು.