Justice Deepak Gupta
Justice Deepak Gupta 
ಸುದ್ದಿಗಳು

ದುರದೃಷ್ಟವಶಾತ್‌ ನಿವೃತ್ತ ನ್ಯಾಯಮೂರ್ತಿಗಳಿಗೆ ನ್ಯಾಯಾಧಿಕರಣಗಳು ಆಶ್ರಯಧಾಮಗಳಾಗಿವೆ: ನ್ಯಾಯಮೂರ್ತಿ ದೀಪಕ್‌ ಗುಪ್ತ

Bar & Bench

ನ್ಯಾಯಾಧಿಕರಣಗಳು ನಿವೃತ್ತ ನ್ಯಾಯಮೂರ್ತಿಗಳಿಗೆ ಆಶ್ರಯತಾಣಗಳಾಗಿವೆ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ದೀಪಕ್‌ ಗುಪ್ತ ಹೇಳಿದ್ದಾರೆ. ಲೀಗಲ್ ಇಂಡಿಯಾ ಕಾನೂನು ಸೇವೆಗಳ ಮರು-ಬ್ರ್ಯಾಂಡಿಂಗ್ ಸ್ಮರಣೆಯಲ್ಲಿ ನಡೆದ ವರ್ಚುವಲ್‌ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು ನ್ಯಾಯಾಧಿಕರಣಗಳ ಬಗ್ಗೆ ಮಾತನಾಡಿದರು.

“ವೈಯಕ್ತಿಕವಾಗಿ ನ್ಯಾಯಾಧಿಕರಣದ ಬಗ್ಗೆ ನನಗೆ ವಿರೋಧವಿಲ್ಲ. ನ್ಯಾಯದಾನ, ಪ್ರಜಾಪ್ರಭುತ್ವ, ಕಾನೂನಿನ ಬಗ್ಗೆ ನಾವು ಮಾತನಾಡುವಾಗ ಭಯಮುಕ್ತವಾದ ನ್ಯಾಯಾಂಗ ಹೊಂದಿರುವುದು ನಮಗೆ ಬಹುಮುಖ್ಯವಾಗುತ್ತದೆ. ಇದರಲ್ಲಿ ನ್ಯಾಯಾಧಿಕರಣಗಳೂ ಸೇರುತ್ತವೆ. ದುರದೃಷ್ಟವಶಾತ್,‌ ಕಳೆದ 20-30 ವರ್ಷಗಳಲ್ಲಿ ನ್ಯಾಯಾಧಿಕರಣಗಳ ನ್ಯಾಯಬದ್ಧ ನಡೆಯ ವಿಚಾರದ ಕುರಿತು ಹೇಳುವುದಾದರೆ ನನ್ನ ಅನುಭವ ಅಷ್ಟೇನೂ ಹಿತಕರವಾಗಿಲ್ಲ” ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ದೀಪಕ್‌ ಗುಪ್ತ ಹೇಳಿದರು.

“ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳಿಂದ ಏನನ್ನು ಬಯಸುತ್ತೇವೆಯೋ ಅದನ್ನೇ ನ್ಯಾಯಾಧಿಕರಣದ ಸದಸ್ಯರಿಂದ ಬಯಸಬೇಕು. ದುರದೃಷ್ಟವಶಾತ್‌ ನ್ಯಾಯಾಧಿಕರಣಗಳು ನಿವೃತ್ತ ನ್ಯಾಯಮೂರ್ತಿಗಳಿಗೆ ಸ್ವರ್ಗದಂತಾಗಿವೆ” ಎಂದು ಅವರು ಮಾರ್ಮಿಕವಾಗಿ ನುಡಿದರು.

ನ್ಯಾಯಾಧಿಕರಣಗಳಲ್ಲಿ ಎರಡು ಹಂತದ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಮೊದಲ ಮೇಲ್ಮನವಿಯನ್ನು ನ್ಯಾಯಾಧಿಕರಣದ ವ್ಯವಸ್ಥೆಯ ವ್ಯಾಪ್ತಿಗೆ ಒಳಪಡುವಂತೆ ನೋಡಿಕೊಳ್ಳಬೇಕು. ನ್ಯಾಯಾಧಿಕರಣಗಳ ತೀರ್ಪನ್ನು ಪ್ರಶ್ನಿಸಿ ಸಲ್ಲಿಸುವ ಮೇಲ್ಮನವಿಗಳಿಗೆ ಸುಪ್ರೀಂ ಕೋರ್ಟ್‌ ಮೊದಲ ವೇದಿಕೆಯಾಗಬಾರದು, ಅದೇನಿದ್ದರೂ ಎರಡನೆಯ ಎಂದು ಅವರು ಹೇಳಿದ್ದಾರೆ.

ಆಡಳಿತಾತ್ಮಕ ನ್ಯಾಯಾಧಿಕರಣಗಳ ಕುರಿತು ದೀಪಕ್‌ ಗುಪ್ತ ಪ್ರಮುಖ ಪ್ರಶ್ನೆಯನ್ನು ಎತ್ತಿದರು, “ನ್ಯಾಯಾಧಿಕರಣಗಳನ್ನು ಸೃಷ್ಟಿಸುವ ಮೂಲಕ ಬಡವರಿಗೆ ನ್ಯಾಯದಾನ ನಿರಾಕರಿಸಲಾಗುತ್ತಿದೆ. ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳಲ್ಲಿ ಕೇಂದ್ರೀಯ ಆಡಳಿತ ನ್ಯಾಯಾಧಿಕರಣಗಳು ಇಲ್ಲ. ಇಂಥ ರಾಜ್ಯಗಳಲ್ಲಿನ ಬಡವರು ದೆಹಲಿಗೆ ಬರಬೇಕು ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ?” ಎಂದು ಅವರು ಪ್ರಶ್ನಿಸಿದರು.

ನಿಯಂತ್ರಣ ನ್ಯಾಯಾಧಿಕರಣಗಳು ಮಹತ್ತರ ಕೆಲಸ ಮಾಡಿವೆ ಎಂದಿರುವ ಗುಪ್ತ ಅವರು ನಿವೃತ್ತ ನ್ಯಾಯಮೂರ್ತಿಗಳು ಇಂಥ ನ್ಯಾಯಾಧಿಕರಣಗಳ ಮುಖ್ಯಸ್ಥರಾಗಬಾರದು ಎಂದಿದ್ದಾರೆ. “ಇವುಗಳು ವಿಶೇಷ ಜ್ಞಾನದ ಕ್ಷೇತ್ರಗಳಾಗಿದ್ದು, ಅವುಗಳ ಬಗ್ಗೆ ನ್ಯಾಯಮೂರ್ತಿಗಳಿಗೆ ಅಗತ್ಯ ಜ್ಞಾನ ಅಥವಾ ಅನುಭವ ಇರುವುದಿಲ್ಲ. ನಿವೃತ್ತ ನ್ಯಾಯಮೂರ್ತಿಗಳು ಇಂಥ ನ್ಯಾಯಾಧಿಕರಣದ ಮುಖ್ಯಸ್ಥರಾಗುವುದು ಸರಿಯಲ್ಲ” ಎಂದರು.

“ಎನ್‌ಸಿಎಲ್‌ಟಿ, ಎನ್‌ಸಿಎಲ್‌ಎಟಿ ಅಗತ್ಯವಿಲ್ಲ. ಕಂಪೆನಿ ಪ್ರಕರಣಗಳನ್ನು ಹೈಕೋರ್ಟ್‌ಗಳು ಸರಿಯಾಗಿ ನಡೆಸುತ್ತಿವೆ. ಈ ನ್ಯಾಯಾಧಿಕರಣಗಳಿಗೆ ಒಂದು ವರ್ಷವಾದರೂ ಮುಖ್ಯಸ್ಥರು ನೇಮಕವಾಗದೇ ಇರುವಾಗ ಅವುಗಳು ಸಮರ್ಥವಾಗಿ ಕಾರ್ಯನಿರ್ವಹಿಸುವುದಾದರೂ ಹೇಗೆ?” ಎಂದು ಅವರು ಪ್ರಶ್ನಿಸಿದರು.

“ನ್ಯಾಯಾಧಿಕರಣದ ಸದಸ್ಯರಿಗೆ ಹೆಚ್ಚಿನ ಅಧಿಕಾರಾವಧಿ ನಿಗದಿಗೊಳಿಸಬೇಕು. ಅಧಿಕಾರಾವಧಿ ಕಡಿಮೆ ಮಾಡುವುದು ನ್ಯಾಯಾಧಿಕರಣದ ಸ್ವಾತಂತ್ರ್ಯವನ್ನೇ ಅಪಹಾಸ್ಯ ಮಾಡಿದಂತಾಗುತ್ತದೆ” ಎಂದೂ ಅವರು ಹೇಳಿದ್ದಾರೆ.

ನ್ಯಾಯಾಧಿಕರಣಗಳ ಕಾರ್ಯವೈಖರಿಯನ್ನು ಆಗಾಗ್ಗೆ ಪರಾಮರ್ಶೆಗೆ ಒಳಪಡಿಸಬೇಕು ಎಂದಿರುವ ನಿವೃತ್ತ ನ್ಯಾಯಮೂರ್ತಿ ದೀಪಕ್‌ ಗುಪ್ತ ಅವರು “ಹಲವು ನ್ಯಾಯಾಧಿಕರಣಗಳು ರಾಜ್ಯ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿದ್ದು, ಅದೇ ಇಲಾಖೆ ನ್ಯಾಯಾಲಯಗಳಲ್ಲಿ ಹೆಚ್ಚಿನ ದಾವೆಗಳನ್ನು ಹೂಡಿರುವ ಸಾಧ್ಯತೆ ಇರುತ್ತದೆ” ಎಂದು ಅಲ್ಲಿನ ವಿರೋಧಾಭಾಸವನ್ನು ಅನಾವರಣಗೊಳಿಸಿದರು.

ಇದಕ್ಕೂ ಮುನ್ನ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ನ್ಯಾಯಾಂಗದ ಮೇಲಿನ ಅತಿಕ್ರಮಣ ಎಂದು ಬಿಂಬಿಸುವುದು ಶುದ್ಧ ರಾಜಕೀಯ ಮತ್ತು ಮಾಧ್ಯಮದ ಅಪಪ್ರಚಾರವಾಗಿದೆ ಎಂದು ಶಿಕ್ಷಣ ತಜ್ಞ ಪ್ರೊ. ಉಪೇಂದ್ರ ಬಕ್ಷಿ ಹೇಳಿದರು. ಲೀಗಲ್ ಇಂಡಿಯಾ ಕಾನೂನು ಸೇವೆಗಳ ಮರು-ಬ್ರ್ಯಾಂಡಿಂಗ್ ನೆನಪಿಗಾಗಿ ನಡೆದ ಚರ್ಚೆಯಲ್ಲಿ ಪಿಐಎಲ್ ಪರಿಕಲ್ಪನೆಯ ಕುರಿತು ಅವರು ಮಾತನಾಡಿದರು.

“ಪಿಐಎಲ್‌ಗಳು ನ್ಯಾಯಾಂಗದ ಮೇಲಿನ ಅತಿಕ್ರಮಣವಾಗಿದೆ ಎಂದು ಹೇಳುವುದು ಶುದ್ಧ ಅಪಪ್ರಚಾರ… 32ನೇ ವಿಧಿಯು ಸಂವಿಧಾನದ ಆತ್ಮವಾಗಿದೆ” ಎಂದು ಬಕ್ಷಿ ಹೇಳಿದರು. “ನಮ್ಮ ಸಂವಿಧಾನವು ಎಕ್ಸ್‌ ಅಥವಾ ವೈ ಸಂಸ್ಥೆಯು ಸಾರ್ವಭೌಮ ಎಂದು ಹೇಳುವುದಿಲ್ಲ. ತನ್ನ ವ್ಯಾಪ್ತಿಯಲ್ಲಿ ಪ್ರತಿಯೊಂದು ಮಹತ್ವವಾದದ್ದು ಎಂದು ಹೇಳುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.