ಭಾರತೀಯ ವಕೀಲ ಪರಿಷತ್ (ಬಿಸಿಐ) ಸಹ ಅಧ್ಯಕ್ಷ ಹಾಗೂ ಹಿರಿಯ ವಕೀಲ ವೈ ಆರ್ ಸದಾಶಿವ ರೆಡ್ಡಿ ಅವರ ಮೇಲೆ ಅವರ ಕಚೇರಿಯಲ್ಲಿ ಮೂವರು ಅಪರಿಚಿತರು ಹಲ್ಲೆ ನಡೆಸಿದ ಆರೋಪದ ಸಂಬಂಧ ಬೆಂಗಳೂರಿನ ಹಲಸೂರು ಗೇಟ್ ಠಾಣೆಯಲ್ಲಿ ಈಚೆಗೆ ಎಫ್‌ಐಆರ್ ದಾಖಲಾಗಿದೆ. ರೆಡ್ಡಿ ಅವರ ಮೇಲಿನ ಹಲ್ಲೆಯನ್ನು ಬಿಸಿಐ ಖಂಡಿಸಿದೆ.
ಏಪ್ರಿಲ್ 16ರಂದು ಬೆಳಿಗ್ಗೆ 8.30ಕ್ಕೆ ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿರುವ ತನ್ನ ಕಚೇರಿಗೆ ಇಬ್ಬರು ಅಪರಿಚಿತರು ಬಂದು ಫೈಬರ್ ಪೈಪ್‌ನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಬಲಗೈ ಮೂಳೆ ಮುರಿತವಾಗಿದ್ದು, ಗಾಯಗಳಾಗಿವೆ. ಈ ಸಂದರ್ಭದಲ್ಲಿ ತನ್ನ ಜೊತೆ ಇದ್ದ ಕಿರಿಯ ಸಹೋದ್ಯೋಗಿ ಸುನಂದಾ ಅವರ ವಿರುದ್ಧ ದುರ್ವರ್ತನೆ ತೋರಿದ್ದಾರೆ. ಎರಡು ವರ್ಷಗಳ ಹಿಂದೆ ತನ್ನ ವಿರುದ್ಧ ಮಹಿಳೆಯೊಬ್ಬರು ರಾಜ್ಯ ವಕೀಲರ ಪರಿಷತ್‌ಗೆ ದೂರು ನೀಡಿದ್ದರು. ಅದನ್ನು ತಾನು ತಿರಸ್ಕರಿಸಿದ್ದಾಗಿ ಹಲ್ಲೆಕೋರರು ಆರೋಪಿಸಿದರು ಎಂದು ದೂರಿನಲ್ಲಿ ರೆಡ್ಡಿ ವಿವರಿಸಿದ್ದಾರೆ.
ಅನಾಮಿಕ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 109, 126(2), 3(5), 329(3), 351(2), 352, 61(2) ಹಾಗೂ ವಕೀಲರ ಮೇಲೆ ದೌರ್ಜನ್ಯ ನಿಷೇಧ ಕಾಯಿದೆ ಸೆಕ್ಷನ್ 3, 4 ಅಡಿ ಪ್ರಕರಣ ದಾಖಲಿಸಲಾಗಿದೆ.
ಬಿಸಿಐ ಖಂಡನೆ: ಸದಾಶಿವ ರೆಡ್ಡಿ ಅವರನ್ನು ಕೇಂದ್ರೀಕರಿಸಿ ಅಮಾನವೀಯವಾಗಿ ಹಲ್ಲೆ ನಡೆಸಲಾಗಿದೆ. ದಾಳಿಯಲ್ಲಿ ರೆಡ್ಡಿ ಅವರಿಗೆ ಹಲವು ಗಾಯಗಳಾಗಿವೆ. ಚುನಾಯಿತ ಪ್ರತಿನಿಧಿಯಾಗಿರುವ ರೆಡ್ಡಿ ಅವರ ಧ್ವನಿಯನ್ನು ಅಡಗಿಸುವ ಮತ್ತು ಬೆದರಿಸುವ ಉದ್ದೇಶದಿಂದ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಇದು ಕಾನೂನು ವೃತ್ತಿಯ ಸ್ವತಂತ್ರದ ಮೇಲಿನ ಹಲ್ಲೆಯಾಗಿದೆ. ಈ ಸಂಬಂಧ ತಕ್ಷಣ ತನಿಖೆ ನಡೆಸಿ, ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದು ಬಿಸಿಐ ಆಗ್ರಹಿಸಿದೆ.