ಸುದ್ದಿಗಳು

ಏಕರೂಪ ನಾಗರಿಕ ಸಂಹಿತೆ: ದಂಡದೊಂದಿಗೆ ಬಿಜೆಪಿ ವಕ್ತಾರನ ಅರ್ಜಿ ವಜಾಗೊಳಿಸಲು ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಮನವಿ

ಸಂಸತ್ತು ಕಾನೂನು ಜಾರಿಗೆ ಸಾರ್ವಭೌಮ ಅಧಿಕಾರ ಬಳಸುತ್ತದೆ. ಯಾವುದೇ ಬಾಹ್ಯ ಶಕ್ತಿ ಅಥವಾ ಅಧಿಕಾರ ನಿರ್ದಿಷ್ಟ ಶಾಸನ ಜಾರಿಗೊಳಿಸಲು ನಿರ್ದೇಶಿಸುವಂತಿಲ್ಲ ಎಂದು ಕೇಂದ್ರದ ಅಫಿಡವಿಟ್‌ನಲ್ಲಿ ತಿಳಿಸಿದೆ.

Bar & Bench

ವಿಚ್ಛೇದನ ವಿಧಾನ ಹಾಗೂ ಮಕ್ಕಳ ದತ್ತು ಮತ್ತು ಪಾಲನೆಗೆ ಸಂಬಂಧಿಸಿದಂತೆ ಎಲ್ಲ ಧರ್ಮಗಳಿಗೂ ಏಕರೂಪದ ವಿಧಾನ ಅನ್ವಯಿಸುವಂತೆ ಕೋರಿ ಬಿಜೆಪಿ ವಕ್ತಾರ ಮತ್ತು ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ [ಅಶ್ವಿನಿ ಕುಮಾರ್ ಉಪಾಧ್ಯಾಯ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಏಕರೂಪ ನಾಗರಿಕ ಸಂಹಿತೆ ಕೋರಿ ಅಶ್ವಿನಿ ಅವರೇ ಸಲ್ಲಿಸಿರುವ ಅರ್ಜಿ ದೆಹಲಿ ಹೈಕೋರ್ಟ್‌ನಲ್ಲಿ ಬಾಕಿ ಇರುವಾಗ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣದ ಅಂಶಗಳು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯೊಂದಿಗೆ ಸಂಬಂಧ ಹೊಂದಿರುವ ಕಾರಣಕ್ಕೆ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿ ಪ್ರಾಮಾಣಿಕವಾಗಿದೆ ಎನ್ನಲಾಗದು ಎಂಬುದಾಗಿ ಅಫಿಡವಿಟ್‌ ತಿಳಿಸಿದೆ. ಹೀಗಾಗಿ ಸರ್ಕಾರ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಯನ್ನು ದಂಡದೊಂದಿಗೆ ವಜಾಗೊಳಿಸಬೇಕೆಂದು ಅದು ಮನವಿ ಮಾಡಿದೆ.

  • ವಿಷಯದ ಸೂಕ್ಷ್ಮತೆ ಮತ್ತು ಆಳವಾದ ಅಧ್ಯಯನ ನಡೆಯಬೇಕಾದ ಹಿನ್ನೆಲೆಯಲ್ಲಿ ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಪರಿಶೀಲಿಸಿ ಶಿಫಾರಸು ಮಾಡುವಂತೆ ಭಾರತದ ಕಾನೂನು ಆಯೋಗಕ್ಕೆ ಮನವಿ ಮಾಡಲಾಗಿತ್ತು.  22ನೇ ಕಾನೂನು ಆಯೋಗದ ವರದಿ ಬಂದ ಬಳಿಕ ಸರ್ಕಾರ ಸಂಬಂಧಪಟ್ಟವರೊಡನೆ ಸಮಾಲೋಚಿಸಿ ಪರಿಶೀಲನೆ ನಡೆಸಲಾಗುವುದು.

  •  ಸಂಸತ್ತು ಕಾನೂನು ಜಾರಿಗೆ ಸಾರ್ವಭೌಮ ಅಧಿಕಾರ ಬಳಸುತ್ತದೆ. ಯಾವುದೇ ಬಾಹ್ಯ ಶಕ್ತಿ ಅಥವಾ ಅಧಿಕಾರ ಇಂಥದ್ದೊಂದು ಶಾಸನ ಜಾರಿಗೊಳಿಸಲು ನಿರ್ದೇಶಿಸುವಂತಿಲ್ಲ

  •  ಇದು ಚುನಾಯಿತ ಪ್ರತಿನಿಧಿಗಳು ನಿರ್ಧರಿಸುವಂತಹ ನೀತಿ ನಿರೂಪಣಾ ವಿಚಾರವಾಗಿದ್ದು ಈ ನಿಟ್ಟಿನಲ್ಲಿ ನ್ಯಾಯಾಲಯ ಯಾವುದೇ ನಿರ್ದೇಶನ ನೀಡುವಂತಿಲ್ಲ.

  • ತೊಂದರೆಗೊಳಗಾದ ವ್ಯಕ್ತಿಗಳು ನೇರವಾಗಿ ಅರ್ಜಿ ಸಲ್ಲಿಸಿಲ್ಲ.

  • ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಪಾರ್ಸಿಗಳಿಗೆ ದತ್ತು ಪಡೆಯಲು ಸಾಮಾನ್ಯ ಕಾನೂನು ಇಲ್ಲ ಎಂಬುದನ್ನು ಒಪ್ಪಲಾಗದು. ಅಂತಹವರು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ ಅಡಿಯಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಬಹುದು.

ಏಕರೂಪ ನಾಗರಿಕ ಸಂಹಿತೆ ಅಗತ್ಯವಾಗಿದ್ದು ಅದನ್ನು 'ಸ್ವಯಂಪ್ರೇರಿತ' ಎಂದು ಪರಿಗಣಿಸಲಾಗದು ಎಂಬುದಾಗಿ ಕಳೆದ ವರ್ಷ ನವೆಂಬರ್‌ನಲ್ಲಿ, ಅಲಾಹಾಬಾದ್ ಹೈಕೋರ್ಟ್ ಹೇಳುವ ಮೂಲಕ ಸಂವಿಧಾನದ  44ನೇ ವಿಧಿಯನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಕರೆ ನೀಡಿತ್ತು.

ಇದಕ್ಕೆ ವ್ಯತಿರಿಕ್ತವಾಗಿ, "ಈ ಹಂತದಲ್ಲಿ ಯುಸಿಸಿ ಅಗತ್ಯವೂ ಅಲ್ಲ ಅಥವಾ ಅಪೇಕ್ಷಣೀಯವೂ ಅಲ್ಲ ಎಂದು ಕಾನೂನು ಆಯೋಗ ತನ್ನ 2018ರ ಸಮಾಲೋಚನಾ ಪತ್ರದಲ್ಲಿ ಹೇಳಿತ್ತು. ಬದಲಿಗೆ ವೈಯಕ್ತಿಕ ಕಾನೂನುಗಳಲ್ಲಿನ ತಾರತಮ್ಯ ಮತ್ತು ಅಸಮಾನತೆ ಹೋಗಲಾಡಿಸಲು ಹಾಗೂ ಅವುಗಳ ನಡುವಿನ ವ್ಯತ್ಯಾಸ ಸಂಪೂರ್ಣವಾಗಿ ತೊಡೆದುಹಾಕಲು ಅಸ್ತಿತ್ವದಲ್ಲಿರುವ ಕೌಟುಂಬಿಕ ಕಾನೂನುಗಳಿಗೆ ತಿದ್ದುಪಡಿ ಮಾಡುವಂತೆ ಅದು ಸೂಚಿಸಿತ್ತು.  ವೈಯಕ್ತಿಕ ಕಾನೂನುಗಳ ವ್ಯಾಖ್ಯಾನ ಮತ್ತು ಅವುಗಳ ಅನ್ವಯದಲ್ಲಿನ ಅಸ್ಪಷ್ಟತೆ ಕಡಿಮೆ ಮಾಡಲು ಅಂತಹ ಕಾನೂನುಗಳ ಕೆಲವು ಅಂಶಗಳ ಕ್ರೋಡೀಕರಣ ಮಾಡಬೇಕೆಂದು ಅದು ಸೂಚಿಸಿತ್ತು.