ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ಹರಡಿರುವ ಬಗ್ಗೆ ಈಚೆಗೆ ವಿಷಾದ ವ್ಯಕ್ತಪಡಿಸಿರುವ ಮದ್ರಾಸ್ ಹೈಕೋರ್ಟ್ ಅಕ್ರಮ ಆಸ್ತಿ ಗಳಿಕೆ ಪ್ರಕರಣವೊಂದರಲ್ಲಿ ಕಸ್ಟಮ್ಸ್ ಅಧಿಕಾರಿ ಹಾಗೂ ಆತನ ಪತ್ನಿ ತಪ್ಪಿತಸ್ಥರು ಎಂದು ಘೋಷಿಸಿ ತಲಾ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ [ಸರ್ಕಾರ ಮತ್ತು ವಿ ಗೋವಿಂದ ಸ್ವಾಮಿ ನಡುವಣ ಪ್ರಕರಣ].
ಕಸ್ಟಮ್ಸ್ ಅಧಿಕಾರಿ ಗೋವಿಂದ ಸ್ವಾಮಿ ಅವರ ಪತ್ನಿ ವಿ ಗೀತಾ ಅಕ್ರಮವಾಗಿ ಆಸ್ತಿ ಗಳಿಸಲು ಸಹಾಯ ಮಾಡಿದ್ದಾರೆ ಎಂಬ ಆರೋಪಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಕೆ.ಕೆ. ರಾಮಕೃಷ್ಣನ್ , ಭ್ರಷ್ಟಾಚಾರದ ವಿರುದ್ಧ ಹೋರಾಡುವ ಪ್ರಯತ್ನಗಳು ಮನೆಯಿಂದಲೇ ಪ್ರಾರಂಭವಾಗಬೇಕು ಎಂದರು.
"ದೇಶದಲ್ಲಿ ಭ್ರಷ್ಟಾಚಾರ ಊಹಿಸಲಾಗದಷ್ಟು ಪ್ರಮಾಣದಲ್ಲಿ ವ್ಯಾಪಿಸಿದೆ. ಭ್ರಷ್ಟಾಚಾರ ಎಂಬುದು ಮನೆಯಿಂದಲೇ ಪ್ರಾರಂಭವಾಗುತ್ತದೆ. ಗೃಹಿಣಿ ಭ್ರಷ್ಟಾಚಾರದಲ್ಲಿ ಭಾಗಿಯಾದರೆ, ಭ್ರಷ್ಟಾಚಾರಕ್ಕೆ ಅಂತ್ಯವೆಂಬುದೇ ಇರುವುದಿಲ್ಲ. ಆದ್ದರಿಂದ, ಗೌರವಾನ್ವಿತ ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರು ತಮ್ಮ ಭಾಷಣದಲ್ಲಿ ಯುವಕರು ಮನೆಯಿಂದಲೇ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಪ್ರಾರಂಭಿಸಬೇಕೆಂದು ಕೇಳಿಕೊಂಡರು: ಪ್ರಶ್ನೆ ಏನೆಂದರೆ 'ಮಗಳು ಅಥವಾ ಮಗ ತಮ್ಮ ಭ್ರಷ್ಟ ತಂದೆಗೆ ದಯವಿಟ್ಟು ಭ್ರಷ್ಟಾಚಾರ ಮಾಡಬೇಡಿ ಎಂದು ಹೇಳುವಷ್ಟು ಧೈರ್ಯ ಮಾಡುತ್ತಾರೆಯೇ?' ನಾವು ಮನೆಯಿಂದಲೇ (ಭ್ರಷ್ಟಾಚಾರ ನಿಗ್ರಹ) ಪ್ರಾರಂಭಿಸೋಣ," ಎಂದು ನ್ಯಾಯಾಲಯ ಹೇಳಿದೆ.
ದೇಶದಲ್ಲಿ ಭ್ರಷ್ಟಾಚಾರ ಊಹಿಸಲೂ ಅಸಾಧ್ಯವಾದಷ್ಟು ಪ್ರಮಾಣದಲ್ಲಿ ವ್ಯಾಪಿಸಿದೆ.ಮದ್ರಾಸ್ ಹೈಕೋರ್ಟ್
ತನ್ನ ಪತಿ ಲಂಚ ತೆಗೆದುಕೊಳ್ಳದಂತೆ ಕಸ್ಟಮ್ಸ್ ಅಧಿಕಾರಿಯ ಪತ್ನಿ ನಿರುತ್ಸಾಹಗೊಳಿಸಬೇಕಿತ್ತು ಎಂದು ಕೂಡ ನ್ಯಾಯಾಲಯ ಹೇಳಿದೆ. ಅಕ್ರಮ ಹಣದಿಂದಾಗಿ ಪತ್ನಿಯ ಜೀವನ 'ಗುಲಾಬಿ ಹಾಸಿಗೆ'ಯಾಗಿದ್ದು ಅದರ ಪರಿಣಾಮಗಳನ್ನು ಆಕೆ ಜೈಲು ಶಿಕ್ಷೆಯ ಮೂಲಕ ಎದುರಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಪತ್ನಿಗೆ ನಾಲ್ಕು ವರ್ಷಗಳ ಅವಧಿಯ ಕಠಿಣ ಸೆರೆವಾಸ ₹25 ಲಕ್ಷ ದಂಡ ಮತ್ತು ಪತಿಗೆ ಅಷ್ಟೇ ಅವಧಿಯ ಸಜೆ ಮತ್ತು ₹75 ಲಕ್ಷ ದಂಡ ವಿಧಿಸಿದ ನ್ಯಾಯಾಲಯ ಅಪರಾಧಿಗಳ ವಯಸ್ಸು ಮತ್ತು ಅನಾರೋಗ್ಯ ಪರಿಗಣಿಸಿ ಅವರಿಗೆ ಗರಿಷ್ಠ ಶಿಕ್ಷೆ ವಿಧಿಸದಿರಲು ನಿರ್ಧರಿಸಿತು.
ಇದೇ ವೇಳೆ ಲಂಚಕ್ಕೆ ಬೇಡಿಕೆ ಇಡುವ ಎಲ್ಲಾ ಅಧಿಕಾರಿಗಳನ್ನು ಉದ್ದೇಶಿಸಿ ನ್ಯಾಯಾಲಯ 'ಯಾರಾದರೂ ಲಂಚ ಸ್ವೀಕರಿಸಿದರೆ, ಅವರ ಕುಟುಂಬ ನಾಶವಾಗುತ್ತದೆʼ ಎಂದಿತು.
ವಿಚಾರಣಾ ನ್ಯಾಯಾಲಯದ ತೀರ್ಪು ಆರೋಪಿಗಳನ್ನು ಖುಲಾಸೆಗೊಳಿಸಿರುವುದರಲ್ಲಿ ಹುರುಳಿಲ್ಲ. ಕಾನೂನು ಆಡಳಿತಕ್ಕೆ ಅಪಹಾಸ್ಯವಾಗದಂತೆ ತಡೆಯಲು ತಾನು ಆ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುತ್ತಿರುವುದಾಗಿ ಹೈಕೋರ್ಟ್ ತಿಳಿಸಿತು. ಅಂತೆಯೇ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಮಾರ್ಚ್ 4ರಂದು ರದ್ದುಗೊಳಿಸಿದ ಅದು ಮಾರ್ಚ್ 21ರಂದು ಶಿಕ್ಷೆಯ ಶಿಕ್ಷೆಯ ಪ್ರಮಾಣ ಪ್ರಕಟಿಸಿತು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]