ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ಕೇರಳ ಹೈಕೋರ್ಟ್ Facebook
ಸುದ್ದಿಗಳು

ದ್ವೇಷ ಭಾಷಣ ಪ್ರಕರಣ ರದ್ದುಗೊಳಿಸುವಂತೆ ಕೋರಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ ಎಸ್ ಡಯಾಸ್, ಡಿಸೆಂಬರ್ 14ರವರೆಗೆ ಚಂದ್ರಶೇಖರ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳಿಗೆ ಆದೇಶಿಸಿದರು.

Bar & Bench

ಕೊಚ್ಚಿಯ ಕಲಮಶೇರಿಯಲ್ಲಿ ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ನೀಡಿದ್ದ ಹೇಳಿಕೆ ಸಂಬಂಧ ತನ್ನ ವಿರುದ್ಧ ದಾಖಲಾಗಿರುವ ದ್ವೇಷ ಭಾಷಣ ಪ್ರಕರಣ ರದ್ದುಗೊಳಿಸುವಂತೆ ಕೋರಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಬುಧವಾರ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ ಎಸ್ ಡಯಾಸ್, ಡಿಸೆಂಬರ್ 14ರವರೆಗೆ ಚಂದ್ರಶೇಖರ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಚಂದ್ರಶೇಖರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ , ಆರೋಪಗಳು ಆಧಾರರಹಿತ ಮತ್ತು ರಾಜಕೀಯ ಉದ್ದೇಶಗಳಿಂದ ಪ್ರೇರಿತವಾಗಿವೆ ಎಂದರು. ರಾಜಕೀಯ ವಿರೋಧಿಗಳ ಒಳಸಂಚಿನ ಪರಿಣಾಮ ರಾಜೀವ್‌ ಅವರ ವಿರುದ್ಧ ಎಫ್‌ಐಆರ್‌ ಹೂಡಲಾಗಿದ್ದು ನೋಟಿಸ್‌ನಲ್ಲಿರುವ ಲೋಪಗಳು ಮತ್ತು ಅವರಿಗೆ ನೀಡಲಾದ ಕಿರುಕುಳದ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಅಕ್ಟೋಬರ್ 29 ರಂದು ಕೊಚ್ಚಿಗೆ ಹೊಂದಿಕೊಂಡಂತಿರುವ ಎರ್ನಾಕುಲಂನ ಉಪನಗರವಾದ ಕಲಮಶ್ಶೇರಿಯ ಸಭಾ ಭವನವೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 3 ಮಂದಿ ಸಾವನ್ನಪ್ಪಿ ಮತ್ತು 51 ಜನ ಗಾಯಗೊಂಡಿದ್ದರು. ʼಯೆಹೋವನ ಸಾಕ್ಷಿಗಳುʼ ಪಂಥದ ಸಭೆ ನಡೆಯುತ್ತಿದ್ದ ವೇಳೆ ಸ್ಫೋಟ ಸಂಭವಿಸಿತ್ತು. ಘಟನೆ ನಡೆದ ಕೆಲ ಗಂಟೆಗಳ ನಂತರ, ಡಾಮಿನಿಕ್ ಮಾರ್ಟಿನ್ ಎಂಬಾತ ದಾಳಿಯ ಹೊಣೆ ಹೊತ್ತು ಪೊಲೀಸರಿಗೆ ಶರಣಾಗಿದ್ದ.

ಇತ್ತ ಘಟನೆಯ ಪೂರ್ವಾಪರ ಗಮನಿಸದೆ ನೆಟ್ಟಿಗರ ಒಂದು ವರ್ಗ ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷಪೂರಿತ ಹೇಳಿಕೆಗಳನ್ನು ನೀಡತೊಡಗಿತು. ಸಾಮಾಜಿಕ ಮಾಧ್ಯಮಗಳ ಮೂಲಕ ಕೋಮು ದ್ವೇಷ ಪ್ರಚೋದಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳ ಪೊಲೀಸರು ಎಚ್ಚರಿಕೆ ನೀಡಿದ್ದರು.

ಕೋಮುದ್ವೇಷ ಹುಟ್ಟುಹಾಕುವ ಉದ್ದೇಶದಿಂದ ರಾಜೀವ್‌ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲ ಹೇಳಿಕೆಗಳನ್ನು ಪ್ರಕಟಿಸಿದ್ದರು ಎಂದು ಆರೋಪಿಸಲಾಗಿತ್ತು. ರಾಜೀವ್‌ ಕೀಳು ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕೂಡ ತರಾಟೆಗೆ ತೆಗೆದುಕೊಂಡಿದ್ದರು.

ಎರ್ನಾಕುಲಂ ಸೈಬರ್ ಕೋಶದ ಸಬ್ ಇನ್‌ಸ್ಪೆಕ್ಟರ್‌ ನೀಡಿದ ದೂರಿನ ಆಧಾರದ ಮೇಲೆ ಅಕ್ಟೋಬರ್ 31ರಂದು ಎರ್ನಾಕುಲಂ ಕೇಂದ್ರ ಪೊಲೀಸ್ ಠಾಣೆ ರಾಜೀವ್‌ ಚಂದ್ರಶೇಖರ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಐಪಿಸಿ ಸೆಕ್ಷನ್ 153, 153 ಎ ಮತ್ತು ಕೇರಳ ಪೊಲೀಸ್ ಕಾಯಿದೆಯ ಸೆಕ್ಷನ್ 120 (ಒ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳನ್ನು ಎಸಗಲಾಗಿದೆ ಎಂದು ಅವರ ವಿರುದ್ಧ ಆರೋಪ ಮಾಡಲಾಗಿತ್ತು.