Picchalli Srinivas, Singer and the Constitution of India 
ಸುದ್ದಿಗಳು

ಸಂವಿಧಾನ ಸಂಸ್ಕೃತಿ ಪಸರಿಸುವ ವಿಶಿಷ್ಟ ಯತ್ನ: ಜನಮನ ತಲುಪುತ್ತಿರುವ ಪೀಠಿಕೆ ಗೀತೆ

“ಸ್ಟುಡಿಯೋ, ರೆಕಾರ್ಡಿಂಗ್ ಅನ್ನೋ ಪರಿಕಲ್ಪನೆಯಲ್ಲಿ ಮೂಡಿದ್ದಲ್ಲ ಈ ಹಾಡು... ಏಕತಾರಿ, ತಮಟೆ ಹಾಗೂ ತಬಲ ಇದಕ್ಕೆ ಬಳಕೆಯಾದ ವಾದ್ಯಗಳು” ಎನ್ನುತ್ತಾರೆ ಪಿಚ್ಚಳ್ಳಿ.

Ramesh DK

ʼದೇಶದ ಆತ್ಮʼ ಎಂದು ಬಣ್ಣಿತವಾದ ಸಂವಿಧಾನದ ಪೀಠಿಕೆಯನ್ನು (ಪ್ರಿಯಾಂಬಲ್‌) ಹಾಡಾಗಿ ಕಟ್ಟಿದ್ದ ಪ್ರಸಿದ್ಧ ಜನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್‌ ಇದೀಗ ಆ ಹಾಡನ್ನು, ʼನೋಡಲೂʼ ಅನುವಾಗುವಂತೆ ಮಾಡಿದ್ದಾರೆ. ಹಾಡಿಗೆ ಪೂರಕವಾದ ದೃಶ್ಯಗಳನ್ನು ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ಸಂವಿಧಾನದ ಪೀಠಿಕೆಯನ್ನು ಹಾಡಿನ ರೂಪದಲ್ಲಿ ಜನರಿಗೆ ತಲುಪಿಸಬೇಕು ಎಂಬ ಅವರ ಕನಸು ಸಾಕಾರಗೊಂಡದ್ದು 2020ರಲ್ಲಿ.ಅವರ ಪ್ರಕಾರ ಹಾಡಿಗೆ ಸ್ಫೂರ್ತಿ ಒದಗಿಸಿದ್ದು ಸಾಹಿತಿ ದೇವನೂರ ಮಹಾದೇವ. “ಒಮ್ಮೊಮ್ಮೆ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಕೆಲಸವಾಗುತ್ತದೆ. ಹೀಗಾಗಿ ಅದರ ಆಶಯಗಳನ್ನು ಜನರಿಗೆ ತಲುಪಿಸುವ ಕೆಲಸ ನಡೆಯಬೇಕು” ಎಂದು ದೇವನೂರರು ವೀಡಿಯೊವೊಂದರಲ್ಲಿ ಹೇಳಿದ್ದರು. ಆಗ ಸಂವಿಧಾನದ ಪೀಠಿಕೆಯನ್ನೇ ಇಟ್ಟುಕೊಂಡು ಹಾಡು ಕಟ್ಟುವ ಕಾಯಕ ಆರಂಭವಾಯಿತು ಎನ್ನುತ್ತಾರೆ ಶ್ರೀನಿವಾಸ್‌.

ʼಭಾರತದ ಜನತೆಯಾದ ನಾವು…ʼ ಎಂದು ಆರಂಭವಾಗುವ ಹಾಡು ಸಂವಿಧಾನ ಪೀಠಿಕೆಯಲ್ಲಿರುವ ಎಲ್ಲಾ ಮಹತ್ವದ ಅಂಶಗಳನ್ನು ಗೇಯತೆ ಹಾಗೂ ಕಥನ ಶೈಲಿ ಎರಡೂ ತಂತ್ರಗಳನ್ನು ಬಳಸಿ ಜನರ ಮನ ಮುಟ್ಟಲು ಯತ್ನಿಸುತ್ತದೆ. ಪೀಠಿಕೆ ಗೀತೆಯ ಈ ವಿನೂನತ ಪ್ರಯತ್ನವನ್ನು ಕಾಣಬಯಸುವವರು ಈ ಕೆಳಗಿನ ಯೂಟ್ಯೂಬ್‌ ಲಿಂಕ್‌ ಕ್ಲಿಕ್ಕಿಸಬಹುದು:

ಗದ್ಯ ರೂಪದಲ್ಲಿರುವ ಪೀಠಿಕೆಯನ್ನು ಹಾಡಲು ಸಾಧ್ಯವೇ ಎಂಬ ಅನುಮಾನ ಅನೇಕರಿಗೆ ಇತ್ತು. ಆದರೆ ಅದನ್ನು ಹಾಡಾಗಿ ಪರಿವರ್ತಿಸಲು ನೆರವಾದದ್ದು ನ್ಯಾ. ಎಚ್‌ ಎನ್ ನಾಗಮೋಹನ್‌ ದಾಸ್‌ ಅವರು ಮಾಡಿರುವ ಸಂವಿಧಾನ ಪೀಠಿಕೆಯ ಕನ್ನಡ ಅನುವಾದ. ನ್ಯಾ. ದಾಸ್‌ ಅವರ ʼಸಂವಿಧಾನ ಓದುʼ ಕೃತಿಯಲ್ಲಿರುವ ಅನುವಾದವನ್ನು ಹಾಡಿಗೆ ಬಳಸಿಕೊಳ್ಳಲಾಗಿದೆ ಎಂದು ಈ ಪ್ರಯತ್ನ ಸಾಕಾರವಾಗಲು ಕಾರಣವಾದ ಅಂಶದ ಬಗ್ಗೆ ವಿವರಿಸುತ್ತಾರೆ ಶ್ರೀನಿವಾಸ್‌.

ಈ ಬಗ್ಗೆ ಮತ್ತಷ್ಟು ಮಾಹಿತಿ ನೀಡುತ್ತಾ, “ಸಾಕಷ್ಟು ಅನುವಾದಗಳನ್ನು ಅಧ್ಯಯನ ಮಾಡಿದೆ. ಆದರೆ ಅವೆಲ್ಲವುಗಳಿಗಿಂತ ಇದು ಚೆನ್ನಾಗಿದೆ ಅನ್ನಿಸಿತು. ಹಾಡಲು ಸಾಧ್ಯವಾಗಬಲ್ಲ ಗೇಯತೆ ಈ ಗದ್ಯದಲ್ಲಿದೆ ಮತ್ತು ಸಾಹಿತ್ಯಕವಾಗಿ ಸರಳವಾಗಿರುವುದರಿಂದ ಹೆಚ್ಚು ಜನರನ್ನು ತಲುಪುತ್ತದೆ ಅನ್ನಿಸಿ ಇದನ್ನು ಆಯ್ದುಕೊಂಡೆ” ಎನ್ನುತ್ತಾರೆ.

ರಾಷ್ಟ್ರಗೀತೆ, ನಾಡಗೀತೆಗಳಿಗೆ ಪರ್ಯಾಯವಾಗಿಯಲ್ಲದೆ, ಪೂರಕವಾಗಿ ಸಂವಿಧಾನ ಗೀತೆಯೂ ಮೊಳಗಬೇಕು ಎಂಬುದು ಅವರ ಬಯಕೆ. ಅಂದಹಾಗೆ ಗೀತೆಯನ್ನು ಪ್ರಚುರಪಡಿಸಲು ಅವರು ಪ್ರಧಾನವಾಗಿ ಆಯ್ದುಕೊಂಡಿರುವುದು ಜನರಿಗೆ ತೀರಾ ಹತ್ತಿರವಿರುವ ಸಾಮಾಜಿಕ ಮಾಧ್ಯಮವನ್ನು. ಯೂಟ್ಯೂಬ್‌, ಫೇಸ್‌ಬುಕ್‌ ಇತ್ಯಾದಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿ ಹಾಡನ್ನು ಸಾಧ್ಯವಾದಷ್ಟು ಜನರಿಗೆ ತಲುಪಿಸುವ ಯತ್ನ ನಡೆಯುತ್ತಿದೆ.

ಹಾಡಿಗೆ ಸಿದ್ಧತೆ ನಡೆದದ್ದು ಬಹಳ ಸರಳವಾಗಿ. “ ಸ್ಟುಡಿಯೋ, ರೆಕಾರ್ಡಿಂಗ್‌ ಅನ್ನೋ ಪರಿಕಲ್ಪನೆಯಲ್ಲಿ ಮೂಡಿದ್ದಲ್ಲ ಈ ಹಾಡು. ನನ್ನ ಮಗ ಎಸ್‌ ಪಿ ಚಕ್ರವರ್ತಿ, ಮತ್ತೊಬ್ಬ ಯುವಕ ಹರೀಶ್‌ ಆದಿಮ ಜೊತೆ ಸೇರಿ ಅದರ ತಾಳ ಸಿದ್ಧಪಡಿಸಿದೆ. ಏಕತಾರಿ, ತಮಟೆ ಹಾಗೂ ತಬಲ ಹಾಡಿಗೆ ಬಳಕೆಯಾದ ವಾದ್ಯಗಳು. ಕಂಪ್ಯೂಟರ್‌ ಬಳಸಿ ಅಂತಿಮ ಸ್ಪರ್ಶ ನೀಡಿ ಹಾಡನ್ನು ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್‌ ಮಾಡಿದೆವು” ಎನ್ನುತ್ತಾರೆ ಅವರು.

“ಮಂಟೇಸ್ವಾಮಿ, ಮೈಲಾರ ಲಿಂಗ ರೀತಿಯ ಕಥನ ಕಾವ್ಯ ಪರಂಪರೆ ಸಂವಿಧಾನ ಪೀಠಿಕೆಯಂತಹ ಗದ್ಯವನ್ನು ಹಾಡಾಗಿ ಹಾಡಲು ಪ್ರೇರಣೆಯಾಯಿತು. ನಾನು ಅಂತಹ ಕಾವ್ಯಗಳ ಪ್ರಭಾವದಲ್ಲೇ ಬಹಳಷ್ಟು ವರ್ಷಗಳ ಕಾಲ ಇದ್ದುದರಿಂದ ಇಂತಹ ಹಾಡುಗಳನ್ನು ಹಾಡುವ ಹುಮ್ಮಸ್ಸು ಮೂಡಿತು” ಎಂಬುದು ಶ್ರೀನಿವಾಸ್‌ ಅವರ ಮಾತು.

ಇತ್ತೀಚೆಗಷ್ಟೇ ರಾಯಪುರದ ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಸಂವಿಧಾನ ಸಂಸ್ಕೃತಿಯನ್ನು ರೂಪಿಸಬೇಕು ಎಂದು ಕರೆ ನೀಡಿದರು. ಆ ಮಾತುಗಳಿಗೆ ಪೂರಕವೋ ಎಂಬಂತೆ ʼಪ್ರಿಯಾಂಬಲ್‌ ಹಾಡುʼ ಇದೆ.