ಸುದ್ದಿಗಳು

ಬಿಜೆಪಿ ಪ್ರತಿಭಟನೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿರುವುದು ಅಸಂಭವ: ಪ್ರಕರಣ ರದ್ದುಪಡಿಸಿದ ಹೈಕೋರ್ಟ್

‘ಪಾಕಿಸ್ತಾನ್ ಮುರ್ದಾಬಾದ್’ ಎನ್ನುವ ಬದಲು ತಪ್ಪಾಗಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಲಾಗಿದೆ ಎಂಬ ಅರ್ಜಿದಾರರ ವಾದವನ್ನು ಪರಿಗಣಿಸಿದ ನ್ಯಾಯಾಲಯ.

Bar & Bench

ಮಂಡ್ಯದಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಉದ್ದೇಶಪೂರ್ವಕವಾಗಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿರುವುದು ಅಸಂಭವ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಈ ಆರೋಪ ಎದುರಿಸುತ್ತಿದ್ದ ಪ್ರತಿಭಟನಾಕಾರನ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಈಚೆಗೆ ರದ್ದುಗೊಳಿಸಿದೆ.

ಮಂಡ್ಯದ ಡಿಎಸ್ ರವಿಕುಮಾರ್ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿ ಅಕ್ಟೋಬರ್ 28ರಂದು ಆದೇಶಿಸಿರುವ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು, ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು ಇಂತಹ ಘೋಷಣೆ ಕೂಗಿರುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ.

Justice V Srishananda

“ಭಾರತೀಯ ಜನತಾ ಪಕ್ಷ ಎಂಬ ರಾಜಕೀಯ ಪಕ್ಷ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿರುವುದು ಅತ್ಯಂತ ಊಹಿಸಲಸಾಧ್ಯವಾದ ಸಂಗತಿಯಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರತಿಭಟನೆಯ ವೇಳೆ ಘೋಷಣೆ ಕೂಗುವ ಭರದಲ್ಲಿ ‘ಪಾಕಿಸ್ತಾನ್ ಮುರ್ದಾಬಾದ್’ (ಪಾಕಿಸ್ತಾನಕ್ಕೆ ಮರಣ) ಎನ್ನುವ ಬದಲು ತಪ್ಪಾಗಿ ‘ಪಾಕಿಸ್ತಾನ್ ಜಿಂದಾಬಾದ್’ (ಪಾಕಿಸ್ತಾನಕ್ಕೆ ಜಯವಾಗಲಿ) ಎಂಬ ಪದ ಬಳಕೆಯಾಗಿದೆ ಎಂಬ ಅರ್ಜಿದಾರರ ವಾದವನ್ನೂ ನ್ಯಾಯಾಲಯ ಪರಿಗಣಿಸಿದೆ.

“ಘೋಷಣೆಗಳನ್ನು ಕೂಗುವ ಭರದಲ್ಲಿ ‘ಮುರ್ದಾಬಾದ್’ ಎಂಬ ಪದದ ಬದಲಿಗೆ ತಪ್ಪಾಗಿ ‘ಜಿಂದಾಬಾದ್’ ಎಂಬ ಪದ ಬಳಕೆಯಾಗಿದೆ ಎಂಬ ಅರ್ಜಿದಾರರ ವಾದವನ್ನು ಪರಿಗಣಿಸಬೇಕಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ದೂರುದಾರನು ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾದ ವಿಡಿಯೋ ತುಣುಕಿನ ಆಧಾರದ ಮೇಲೆ ದೂರು ದಾಖಲಿಸಿದ್ದು, ಅದೂ ಘಟನೆ ನಡೆದ ಎರಡು ವರ್ಷಗಳ ಬಳಿಕ ದೂರು ನೀಡಲಾಗಿದೆ” ಎಂದು ನ್ಯಾಯಾಲಯ ಉಲ್ಲೇಖಿಸಿದೆ.

ಅಲ್ಲದೆ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ಗುರುತನ್ನು ಪತ್ತೆಹಚ್ಚಲು ತನಿಖಾ ಸಂಸ್ಥೆಗೆ ಸಾಧ್ಯವಾಗಿಲ್ಲ. ಆರೋಪಿತ ಘೋಷಣೆಯಿಂದ ಸಮಾಜದಲ್ಲಿ ಅಥವಾ ನಿರ್ದಿಷ್ಟ ಸಮುದಾಯದಲ್ಲಿ ಯಾವುದೇ ಅಶಾಂತಿ ಉಂಟಾಗಿದೆಯೇ ಎಂಬುದರ ಬಗ್ಗೆಯೂ ತನಿಖೆಯಿಂದ ಹೆಚ್ಚಿನ ಮಾಹಿತಿ ದೊರೆತಿಲ್ಲ ಎಂದು ನ್ಯಾಯಾಲಯ ಹೇಳಿದೆ.

“ಪ್ರತಿಭಟನೆಯಲ್ಲಿ ಭಾಗವಹಿಸಿದವರು ಯಾರು ಎಂಬುದರ ಕುರಿತು ತನಿಖಾ ಸಂಸ್ಥೆಗೆ ಯಾವುದೇ ಹೆಚ್ಚಿನ ಮಾಹಿತಿ ದೊರೆತಿಲ್ಲ. ಹಾಗೆಯೇ ಇಂತಹ ಘೋಷಣೆಗಳನ್ನು ಕೂಗುವುದರಿಂದ ಸಮಾಜದಲ್ಲಿ, ನಿರ್ದಿಷ್ಟ ಸಮುದಾಯದಲ್ಲಿ ಅಥವಾ ಸಾರ್ವಜನಿಕರಲ್ಲಿ ಅಶಾಂತಿ ಉಂಟಾಗುವಂತಹ ಪರಿಣಾಮಗಳು ಏನಾದರೂ ಸಂಭವಿಸಿವೆಯೇ ಎಂಬುದರ ಬಗ್ಗೆಯೂ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಿಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505(1)(b) ಅಡಿಯಲ್ಲಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲು ಅಗತ್ಯವಿರುವ ಪೂರ್ವಾನುಮತಿ ಪಡೆಯಲಾಗಿದೆಯೇ ಎಂಬುದನ್ನೂ ಹೈಕೋರ್ಟ್ ಪರಿಶೀಲಿಸಿದೆ.

ಈ ಪ್ರಕರಣದಲ್ಲಿ ಅಗತ್ಯವಾದ ಅನುಮತಿ ಇಲ್ಲದಿದ್ದರೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅಪರಾಧದ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡಿರುವುದನ್ನು ಹೈಕೋರ್ಟ್ ಗಮನಿಸಿದೆ.

ಅಲ್ಲದೆ, ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153B ಅಡಿಯಲ್ಲಿ ಅಪರಾಧದ ಅಗತ್ಯ ಅಂಶಗಳು ಸಾಬೀತಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿದ ಹೈಕೋರ್ಟ್, ಡಿಎಸ್ ರವಿಕುಮಾರ್ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿ ಅರ್ಜಿಯನ್ನು ಪುರಸ್ಕರಿಸಿದೆ.

“ಹೀಗಾಗಿ, ಈ ನ್ಯಾಯಾಲಯದ ಪರಿಗಣಿತ ಅಭಿಪ್ರಾಯದಲ್ಲಿ ಕ್ರಿಮಿನಲ್ ಪ್ರಕರಣವನ್ನು ಮುಂದುವರಿಸುವುದು ಅನಗತ್ಯವಾಗಿದ್ದು, ಅದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ” ಎಂದು ನ್ಯಾಯಾಲಯ ತೀರ್ಮಾನಿಸಿದೆ.

ಅರ್ಜಿದಾರರ ಪರ ವಕೀಲರು, ಆರೋಪಿತ ಘೋಷಣೆಯನ್ನು ಉದ್ದೇಶಪೂರ್ವಕವಾಗಿ ಕೂಗಲಾಗಿಲ್ಲ. ಪ್ರತಿಭಟನೆಯ ಉತ್ಸಾಹದಲ್ಲಿ ತಪ್ಪಾಗಿ ಪದ ಬಳಕೆಯಾಗಿದೆ. ‘ಪಾಕಿಸ್ತಾನ್ ಮುರ್ದಾಬಾದ್’ ಎನ್ನುವ ಬದಲು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ತಪ್ಪಾಗಿ ಕೂಗಲಾಗಿದೆ ಎಂದು ವಾದಿಸಿದ್ದರು.

ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಅಥವಾ ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವ ಉದ್ದೇಶ ಅರ್ಜಿದಾರರಿಗೆ ಇರಲಿಲ್ಲ. ಹೀಗಾಗಿ ಕ್ರಿಮಿನಲ್ ಪ್ರಕರಣವನ್ನು ಮುಂದುವರಿಸುವುದು ಸಮರ್ಥನೀಯವಲ್ಲ ಎಂದು ವಾದಿಸಿದ್ದರು.

ರಾಜ್ಯ ಸರ್ಕಾರದ ಪರ ವಕೀಲರು ಅರ್ಜಿಯನ್ನು ವಿರೋಧಿಸಿ, ದೂರುದಾರರು ಪೊಲೀಸರಿಗೆ ನೀಡಿದ್ದ ವಿಡಿಯೋ ತುಣುಕಿನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿರುವುದು ಸ್ಪಷ್ಟವಾಗಿ ದಾಖಲಾಗಿದೆ ಎಂದು ವಾದಿಸಿದ್ದರು.

2022ರ ಡಿಸೆಂಬರ್ 18ರಂದು ಪಾಕಿಸ್ತಾನದ ವಿದೇಶಾಂಗ ಸಚಿವರು ನೀಡಿದ್ದ ಆಕ್ಷೇಪಾರ್ಹ ಹೇಳಿಕೆಗೆ ಪ್ರತಿಯಾಗಿ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ವೇಳೆ ರವಿಕುಮಾರ್ ಉದ್ದೇಶಪೂರ್ವಕವಾಗಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು. ಆರೋಪಿಯ ವಿರುದ್ಧ ವಿಚಾರಣೆ ಮುಂದುವರಿಸಬೇಕು ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿತ್ತು.

ಪ್ರಕರಣದ ಹಿನ್ನೆಲೆ: ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ 2024ರಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153B (ರಾಷ್ಟ್ರೀಯ ಏಕತೆಗೆ ಧಕ್ಕೆ ತರುವ ಆರೋಪಗಳು ಅಥವಾ ಹೇಳಿಕೆಗಳು) ಮತ್ತು ಸೆಕ್ಷನ್ 505(1)(b) (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

2022ರ ಡಿಸೆಂಬರ್ 18ರಂದು ಬಿಜೆಪಿ ಬೆಂಬಲಿಗರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಲಾಗಿದೆ ಎಂದು ಕನ್ನಂಬಾಡಿ ಕುಮಾರ್ ಎಂಬುವವರು ದೂರು ನೀಡಿದ್ದರು.

ಪ್ರತಿಭಟನೆಯ ವಿಡಿಯೋವನ್ನು ವೀಕ್ಷಿಸಿದ ಬಳಿಕ ತಮಗೆ ಮಾನಸಿಕವಾಗಿ ಆಘಾತವಾಗಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದ ಅವರು, ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದರು.

ಅರ್ಜಿದಾರರ ಪರ ವಕೀಲ ವಿನೋದ್ ಕುಮಾರ್ ಎಂ ವಾದ ಮಂಡಿಸಿದ್ದರು.

ರಾಜ್ಯದ ಪರ ಹೈಕೋರ್ಟ್ ಸರ್ಕಾರಿ ವಕೀಲರಾದ ವಾಹಿದಾ ಎಂಎಂ ಹಾಜರಿದ್ದರು.