Justice Anil K Narendran and Justice PG Ajithkumar 
ಸುದ್ದಿಗಳು

ಯಾವುದೇ ಧರ್ಮ ಇರಲಿ, ಮದುವೆಯ ಖರ್ಚನ್ನು ತಂದೆಯಿಂದ ಪಡೆಯುವ ಹಕ್ಕು ಅವಿವಾಹಿತ ಮಗಳಿಗಿರಲಿದೆ: ಕೇರಳ ಹೈಕೋರ್ಟ್

“ಅವಿವಾಹಿತ ಮಗಳು ಮದುವೆಗೆ ತನ್ನ ತಂದೆಯಿಂದ ಸೂಕ್ತ ಹಣ ಪಡೆಯುವ ಹಕ್ಕಿಗೆ ಧಾರ್ಮಿಕ ಬಣ್ಣ ಲೇಪಿಸಲಾಗದು” ಎಂದ ನ್ಯಾಯಾಲಯ.

Bar & Bench

ಯಾವುದೇ ಧರ್ಮಕ್ಕೆ ಸೇರಿದ ಪ್ರತಿಯೊಬ್ಬ ಅವಿವಾಹಿತ ಮಗಳಿಗೆ ತನ್ನ ತಂದೆಯಿಂದ ಮದುವೆಯ ಸೂಕ್ತ ಖರ್ಚನ್ನು ಪಡೆಯುವ ಹಕ್ಕಿದೆ ಎಂದು ಕೇರಳ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ.

ಈ ಹಕ್ಕಿಗೆ ಯಾವುದೇ ಧಾರ್ಮಿಕ ಬಣ್ಣ ನೀಡಲಾಗದು ಎಂದು ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ ಜಿ ಅಜಿತ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

ಅವಿವಾಹಿತ ಮಗಳು ತನ್ನ ತಂದೆಯಿಂದ ತನ್ನ ಮದುವೆಗೆ ಸಮಂಜಸ ವೆಚ್ಚ ಪಡೆಯುವ ಹಕ್ಕಿಗೆ ಧರ್ಮದ ಬಣ್ಣ ಹಚ್ಚಲು ಸಾಧ್ಯವಿಲ್ಲ.  ಇದು ಧರ್ಮದ ಹೊರತಾಗಿ ಎಲ್ಲಾ ಅವಿವಾಹಿತ ಹೆಣ್ಣುಮಗಳಿಗೂ ಇರುವ ಹಕ್ಕಾಗಿದೆ. ಧರ್ಮವನ್ನಾಧರಿಸಿ ಅಂತಹ ಹಕ್ಕು ಪಡೆಯದಂತೆ ತಾರತಮ್ಯ ಎಸಗಲು ಸಾಧ್ಯವಿಲ್ಲ” ಎಂದು ಪೀಠ ತೀರ್ಪಿನಲ್ಲಿ ನುಡಿದಿದೆ.

ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ತಂದೆಯೊಬ್ಬರ ಇಬ್ಬರು ಪುತ್ರಿಯರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.

ತಮ್ಮ ಮದುವೆಯ ವೆಚ್ಚಕ್ಕೆ ₹45.92 ಲಕ್ಷ ನೀಡಬೇಕು ಹಾಗೂ ತಮ್ಮನ್ನು ತೊರೆದಿರುವ ತಂದೆಯ ಅನಸೂಚಿತ ಆಸ್ತಿಗೆ ಸಂಬಂಧಿಸಿದ ಮೊತ್ತಕ್ಕೆ ಈ ಶುಲ್ಕವನ್ನು ಹೊಂದಿಸುವಂತೆ ತೀರ್ಪು ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದ ಪುತ್ರಿಯರು ಕೋರಿದ್ದರು.

ತಮ್ಮ ತಾಯಿ ಮತ್ತವರ ಕುಟುಂಬದ ಹಣದಿಂದ ಖರೀದಿಸಿದ ಆಸ್ತಿಯನ್ನು ತಮ್ಮ ತಂದೆ ಬೇರ್ಪಡಿಸಿದಂತೆ ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡುವಂತೆಯೂ ಅವರು ಕೋರಿದ್ದರು.

ತಮ್ಮ ಮದುವೆಗೆ ಅರ್ಜಿದಾರರು ಕನಿಷ್ಠ ವೆಚ್ಚ ಮಾತ್ರ ಪಡೆಯಲು ಅರ್ಹರು ಎಂದಿದ್ದ ಕೌಟುಂಬಿಕ ನ್ಯಾಯಾಲಯ ₹ 7.5 ಲಕ್ಷ ಮೊತ್ತಕ್ಕೆ ವೆಚ್ಚದ ಮೊತ್ತವನ್ನು ನಿಗದಿಪಡಿಸಿತ್ತು. ಆದರೆ ಈ ಆದೇಶ ಪ್ರಶ್ನಿಸಿದ ಪುತ್ರಿಯರು ಕೌಟುಂಬಿಕ ನ್ಯಾಯಾಲಯ ಕಕ್ಷಿದಾರರ ಸ್ಥಿತಿಯನ್ನು ಪರಿಗಣಿಸಿಲ್ಲ” ಎಂದು ಅಳಲು ತೋಡಿಕೊಂಡಿದ್ದರು. ತಾವಿಬ್ಬರೂ ಉನ್ನತ ವ್ಯಾಸಂಗ ಮಾಡುತ್ತಿದ್ದು ತಂದೆ ತಮ್ಮ ಖರ್ಚಿಗೆ ಯಾವುದೇ ಸಹಾಯ ಮಾಡಿಲ್ಲ ಎಂದು ದೂರಿದ್ದರು.

ಆದರೆ ಅವರ ತಂದೆ ʼಆಸ್ತಿ ಮತ್ತು ಕಟ್ಟಡ ಸಂಪೂರ್ಣ ತನಗೆ ಸೇರಿದ್ದು ಹೆಣ್ಣುಮಕ್ಕಳಿಗೆ ಯಾವುದೇ ಮೊತ್ತ ಪಾವತಿಸುವ ಹೊಣೆ ತನ್ನದಲ್ಲʼ ಎಂದಿದ್ದರು. ಜೊತೆಗೆ ʼಹೆಣ್ಣುಮಕ್ಕಳು ಮತ್ತವರ ತಾಯಿ ಪೆಂಟಾಕೋಸ್ಟ್ ಕ್ರೈಸ್ತ ಸಮುದಾಯಕ್ಕೆ ಸೇರಿದ್ದು ಅದರಲ್ಲಿ ಆಭರಣ ಬಳಕೆ ಇಲ್ಲ. ಹೀಗಾಗಿ ಸಾಮಾನ್ಯವಾಗಿ ಮದುವೆಗೆ ತಗುಲುವ ಚಿನ್ನಾಭರಣಗಳ ವೆಚ್ಚ ಈ ಹೆಣ್ಣುಮಕ್ಕಳ ವಿಚಾರದಲ್ಲಿ ಇರುವುದಿಲ್ಲʼ ಎಂದು ವಾದಿಸಿದ್ದರು.

ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಿಂದೂ ದತ್ತಕ ಮತ್ತು ಜೀವನಾಂಶ ಕಾಯಿದೆಯ ಸೆಕ್ಷನ್ 3 (ಬಿ)ಯಲ್ಲಿ ತಂದೆ ವೆಚ್ಚ ಪಾವತಿಸುವುದಕ್ಕೆ ಸಾಂದರ್ಭಿಕವಾಗಿ ಶಾಸನಬದ್ಧವಾದ ಅವಕಾಶವಿದೆ. ಅಲ್ಲದೆ  ಇಸ್ಮಾಯಿಲ್‌ ಮತ್ತು ಫಾತಿಮಾ ಮತ್ತಿತರರ ಪ್ರಕರಣದಲ್ಲಿ ಕೇರಳ ಹೈಕೋರ್ಟ್‌ ತೀರ್ಪು ನೀಡುವಾಗ  ʼಮುಸ್ಲಿಂ ತಂದೆ ಮಾತ್ರವಲ್ಲ, ಧರ್ಮವನ್ನು ಲೆಕ್ಕಿಸದೆ ಪ್ರತಿಯೊಬ್ಬ ತಂದೆಗೂ ಆ ಜವಾಬ್ದಾರಿ ಇದೆʼ ಎಂದು ಹೇಳಿದ್ದನ್ನು ನ್ಯಾಯಾಲಯ ಪ್ರಸ್ತಾಪಿಸಿತು.

ಹೀಗಾಗಿ ಆ ದೃಷ್ಟಿಕೋನವನ್ನು ಹಿಂಜರಿಕೆಯಿಲ್ಲದೆ ಒಪ್ಪುವುದಾಗಿ ಹೇಳಿದ ಅದು ಆಸ್ತಿ ವರ್ಗಾವಣೆ ಕಾಯಿದೆಯ ಸೆಕ್ಷನ್ 39 ರ ಪ್ರಕಾರ, ಸ್ಥಿರಾಸ್ತಿಯ ಲಾಭದಿಂದ ಯಾವುದೇ ವ್ಯಕ್ತಿಯು ನಿರ್ವಹಣೆಗಾಗಿ ಅಥವಾ ಮುಂದುವರೆಯುವುದಕ್ಕಾಗಿ ಅಥವಾ ವಿವಾಹಕ್ಕಾ ನಿಬಂಧನೆಯನ್ನು ಪಡೆಯುವ ಹಕ್ಕು ಹೊಂದಿರುವಾಗ, ಈ ಹಕ್ಕನ್ನು ಬಾಧ್ಯತೆ ಹೊಂದಿರುವ ವ್ಯಕ್ತಿಯ ಸ್ಥಿರಾಸ್ತಿಗೆ ಸಂಬಂಧಿಸಿದಂತೆಯೂ ಜಾರಿಗೊಳಿಸಬಹುದು ಎಂದು ಹೇಳಿದೆ.

ಹೀಗಾಗಿ ಅರ್ಜಿದಾರ ಪುತ್ರಿಯರು ತಮ್ಮ ತಂದೆಯ ಸ್ಥಿರಾಸ್ತಿ ಆಧರಿಸಿ ವೆಚ್ಚ ಪಡೆಯಲು ಅರ್ಹರು ಎಂದು ನ್ಯಾಯಾಲಯ ನುಡಿಯಿತು.

ಆದರೂ, ಒಮ್ಮೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡ ನಂತರ, ನ್ಯಾಯಯುತ ಪರಿಹಾರದ ಪ್ರತಿಬಂಧಕಾಜ್ಞೆಯ ಕೋರಿಕೆಗೆ ಸಮರ್ಥನೆ ಇರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಸಾಕ್ಷ್ಯ ಮತ್ತು ದಾಖಲೆಗಳನ್ನು ಪರಿಗಣಿಸಿದ ನ್ಯಾಯಾಲಯವು ಅರ್ಜಿದಾರರ ಹಿತಾಸಕ್ತಿ ರಕ್ಷಿಸಲು ₹ 15 ಲಕ್ಷ ಮೊತ್ತದ ಆಸ್ತಿಯ ಮುಟ್ಟುಗೋಲು ಹಾಕಿಕೊಂಡರೆ ಸಾಕು ಎಂದು ನಿರ್ಧರಿಸಿತು.