ಅಲಹಾಬಾದ್ ಹೈಕೋರ್ಟ್
ಅಲಹಾಬಾದ್ ಹೈಕೋರ್ಟ್ 
ಸುದ್ದಿಗಳು

ವಯಸ್ಸು ಅಥವಾ ಧರ್ಮ ಮೀರಿ ಡಿವಿ ಕಾಯಿದೆಯಡಿ ಅವಿವಾಹಿತ ಮಗಳಿಗೆ ಜೀವನಾಂಶ ಪಡೆಯುವ ಹಕ್ಕಿದೆ: ಅಲಾಹಾಬಾದ್ ಹೈಕೋರ್ಟ್

Bar & Bench

ವಯಸ್ಸು ಅಥವಾ ಧರ್ಮವನ್ನು ಲೆಕ್ಕಿಸದೆ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯಿದೆ- 2005ರ(ಡಿವಿ ಕಾಯಿದೆ) ಅಡಿ ಜೀವನಾಂಶ ಪಡೆಯುವ ಹಕ್ಕು ಅವಿವಾಹಿತ ಮಗಳಿಗೆ ಇದೆ ಎಂದು ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ತೀರ್ಪು ನೀಡಿದೆ.

ಡಿ ವಿ ಕಾಯಿದೆಯ ಸೆಕ್ಷನ್‌ಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಜ್ಯೋತ್ಸ್ನಾ ಶರ್ಮಾ ಅವರು ಸರ್ವೋಚ್ಚ ನ್ಯಾಯಾಲಯ ತೀರ್ಪುಗಳನ್ನು ಉಲ್ಲೇಖಿಸುತ್ತಾ ಕೌಟುಂಬಿಕ ಸಂಬಂಧದಲ್ಲಿ ಹಿಂಸೆಗೆ ಒಳಗಾದ ಮಹಿಳೆ ಅಪ್ರಾಪ್ತಳಾಗಿರಲಿ ಅಥವಾ ಪ್ರೌಢ ವಯಸ್ಕಳಾಗಿರಲಿ ಕಾಯಿದೆ ಅಡಿ ಪರಿಹಾರಕ್ಕೆ ಅರ್ಹಳು ಎಂದರು.

"... ಅವಿವಾಹಿತ ಮಗಳು, ಹಿಂದೂ ಆಗಿರಲಿ ಅಥವಾ ಮುಸ್ಲಿಮ್ ಆಗಿರಲಿ, ಅವಳ ವಯಸ್ಸನ್ನು ಲೆಕ್ಕಿಸದೆ ಜೀವನಾಂಶ ಪಡೆಯುವ ಹಕ್ಕನ್ನು ಹೊಂದಿದ್ದಾಳೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ಕೂಡ ನ್ಯಾಯಾಲಯ ನುಡಿಯಿತು.

ನ್ಯಾಯಮೂರ್ತಿ ಜ್ಯೋತ್ಸ್ನಾ ಶರ್ಮಾ ಮತ್ತು ಅಲಾಹಾಬಾದ್ ಹೈಕೋರ್ಟ್

ತನ್ನ ಮೂವರು ಹೆಣ್ಣುಮಕ್ಕಳಿಗೆ ತಲಾ 3,000 ರೂ.ಗಳ ಮಧ್ಯಂತರ ಜೀವನಾಂಶ ಪಾವತಿಸುವಂತೆ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಆತ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ತನ್ನ ತಾಯಿ ಬದುಕಿದ್ದ ಅವಧಿಯಲ್ಲೇ ತಂದೆ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದರು. ತಮ್ಮ ತಂದೆ ಮತ್ತು ಮಲತಾಯಿ ತಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದು ಹಲ್ಲೆ ನಡೆಸುತ್ತಿದ್ದಾರೆ ಎಂದು ಪುತ್ರಿಯರು ಮ್ಯಾಜಿಸ್ಟ್ರೇಟ್‌ ಅವರಿಗೆ ತಿಳಿಸಿದ್ದರು.

ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ ತಂದೆ ತನಗೆ ವಯಸ್ಸಾಗಿದ್ದು ಆದಾಯ ಮೂಲವಿಲ್ಲದೆ ದುರ್ಬಲನಾಗಿದ್ದೇನೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲು ಮ್ಯಾಜಿಸ್ಟ್ರೇಟ್‌ ವಿಫಲರಾಗಿದ್ದಾರೆ. ಹೆಣ್ಣುಮಕ್ಕಳು ಪ್ರೌಢವಯಸ್ಕರಾಗಿರುವುದರಿಂದ ಅವರಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ತಂದೆ ಪ್ರತಿಪಾದಿಸಿದ್ದರು.

ಡಿ ವಿ ಕಾಯಿದೆಯನ್ನು ಪರಿಶೀಲಿಸಿದ ನ್ಯಾ. ಶರ್ಮಾ "ಮಹಿಳೆಯರಿಗೆ ಹೆಚ್ಚು ಪರಿಣಾಮಕಾರಿ ರಕ್ಷಣೆ' ಒದಗಿಸುವ ಉದ್ದೇಶದಿಂದ 2005 ರ ಕಾನೂನನ್ನು ಜಾರಿಗೆ ತರಲಾಗಿದೆ. ಈ ಪದಗುಚ್ಛದಲ್ಲಿರುವ ʼಹೆಚ್ಚುʼ ಎಂಬ ಪದದ ಬಳಕೆ ಸಣ್ಣ ಸೇರ್ಪಡೆಯಲ್ಲ (ಮಹತ್ವದ್ದು) ಎಂದು ಅಭಿಪ್ರಾಯಪಟ್ಟರು.

ಜೀವನಾಂಶ ಪಡೆಯುವ ಮೂಲಭೂತ ಹಕ್ಕು ಇತರ ಕಾಯಿದೆಗಳ ಮೂಲಕವೂ ದೊರೆಯುತ್ತದೆಯಾದರೂ ಅದನ್ನು ಪಡೆಯಲು ತ್ವರಿತ ಮತ್ತು ಕಡಿಮೆ ಕಾರ್ಯವಿಧಾನವನ್ನು ಡಿವಿ ಕಾಯ್ದೆಯಡಿ ಒದಗಿಸಲಾಗಿದೆ ಎಂದು ನ್ಯಾಯಾಲಯ ತರ್ಕಿಸಿತು. 

ತೊಂದರೆಗೊಳಗಾದ ವ್ಯಕ್ತಿಯ ಹಕ್ಕುಗಳು ಡಿವಿ ಕಾಯಿದೆಯಡಿ ದೈಹಿಕ, ಮಾನಸಿಕ, ಲೈಂಗಿಕ, ಮೌಖಿಕ ಹಾಗೂ ಭಾವನಾತ್ಮಕ ಸ್ವರೂಪದ ಹಿಂಸೆಗೆ ಒಳಗಾಗಿವೆ ಎಂಬ ಅಂಶದಿಂದ ಬರುತ್ತವೆ ಎಂದು ನ್ಯಾಯಾಲಯ ತಿಳಿಸಿತು. ಹಿಂಸಾಚಾರವು ಆರ್ಥಿಕ ದುರುಪಯೋಗದ ಸ್ವರೂಪದಲ್ಲಿಯೂ ಇರಬಹುದು ಎಂದು ಅದು ಹೇಳಿತು.  

ಅವಿವಾಹಿತ ಮಗಳು ಡಿವಿ ಕಾಯ್ದೆಯಡಿ ಜೀವನಾಂಶವನ್ನು ಪಡೆಯುವ ಹಕ್ಕನ್ನು ಹೊಂದಿದ್ದಾಳೆ ಎಂದು ತೀರ್ಮಾನಿಸಿದ ನ್ಯಾಯಪೀಠ, ಜೀವನಾಂಶದ ಪ್ರಶ್ನೆ ಬಂದಾಗ ನ್ಯಾಯಾಲಯಗಳು ಅನ್ವಯವಾಗುವ ಉಳಿದ ಕಾನೂನುಗಳನ್ನು ಸಹ ಗಮನಿಸಬೇಕು ಎಂದು ಪೀಠ ಸ್ಪಷ್ಟಪಡಿಸಿತು.

"ಆದರೂ, ಸಮಸ್ಯೆಯು ಕೇವಲ ನಿರ್ವಹಣೆಗೆ ಸಂಬಂಧಿಸಿಲ್ಲದಿದ್ದರೆ, ಡಿವಿ ಕಾಯ್ದೆಯ ಸೆಕ್ಷನ್ 20 ರ ಅಡಿಯಲ್ಲಿ ನೊಂದವರಿಗೆ ಸ್ವತಂತ್ರ ಹಕ್ಕುಗಳು ಲಭ್ಯವಿದೆ" ಎಂದು ಅದು ಹೇಳಿತು.

ಮ್ಯಾಜಿಸ್ಟ್ರೇಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಸಕಾರಣವಿಲ್ಲ ಎಂದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Naimullah Sheikh And Another Vs. State Of U.P. And 3 Others.pdf
Preview