Delhi High Court 
ಸುದ್ದಿಗಳು

ಉನ್ನಾವೋ ಸಂತ್ರಸ್ತೆ ತಂದೆಯ ಕಸ್ಟಡಿ ಸಾವು: ಬಿಜೆಪಿ ಮಾಜಿ ಶಾಸಕ ಸೆಂಗರ್ ಶಿಕ್ಷೆ ಅಮಾನತಿಗೆ ದೆಹಲಿ ಹೈಕೋರ್ಟ್‌ ನಕಾರ

ಪ್ರಕರಣದಲ್ಲಿ ತನಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈಗಾಗಲೇ ಆರು ವರ್ಷ ಶಿಕ್ಷೆ ಅನುಭವಿಸಿರುವುದಾಗಿ ಸೆಂಗರ್‌ ಪರ ವಾದಿಸಲಾಗಿತ್ತು.

Bar & Bench

ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಂದೆ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಪ್ರಕರಣದ ಆರೋಪಿ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ [ಕುಲದೀಪ್ ಸಿಂಗ್ ಸೆಂಗರ್ ಮತ್ತು ಸಿಬಿಐ ನಡುವಣ ಪ್ರಕರಣ].

ಒಟ್ಟು ಹತ್ತು ವರ್ಷಗಳ ಶಿಕ್ಷೆಯಲ್ಲಿ ಸೆಂಗರ್ ಆರು ವರ್ಷ ಜೈಲು ಶಿಕ್ಷೆ ಅನುಭವಿಸಿದ ಮಾತ್ರಕ್ಕೆ, ಆತನ ಶಿಕ್ಷೆಯನ್ನು ಅಮಾನತುಗೊಳಿಸಲಾಗದು ಎಂದು ನ್ಯಾಯಮೂರ್ತಿ  ಸ್ವರಣಾ ಕಾಂತ ಶರ್ಮಾ ಹೇಳಿದರು.

ಅಪರಾಧದ ಗಂಭೀರತೆ, ಸ್ವರೂಪ, ಅಪರಾಧಿಯ ಕ್ರಿಮಿನಲ್ ಹಿನ್ನೆಲೆ ಹಾಗೂ ನ್ಯಾಯಾಂಗ ಕುರಿತಾದ ಸಾರ್ವಜನಿಕ ವಿಶ್ವಾಸದ ಮೇಲೆ ಬೀಳುವ ಪರಿಣಾಮ ಮುಂತಾದ ಅಂಶಗಳನ್ನು ಪರಿಗಣಿಸಿ ಸೆಂಗರ್ ಶಿಕ್ಷೆಯ ಅಮಾನತಿಗೆ ಅರ್ಹರಲ್ಲ ಎಂದು ಪೀಠ ತೀರ್ಪು ನೀಡಿದೆ.

ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಇದ್ದು ಅವರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ರಕ್ಷಣೆ ನೀಡಿದೆ ಎಂಬ ವಿಚಾರ ಗಮನಿಸಿದ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ ತತ್ವಗಳನ್ವಯ ಈ ಹಂತದಲ್ಲಿ ಶಿಕ್ಷೆ ಅಮಾನತುಗೊಳಿಸುವಂತೆ ಕೋರಿರುವ ಪ್ರಸ್ತುತ ಅರ್ಜಿಯನ್ನು ಪುರಸ್ಕರಿಸಲು ಒಲವಿಲ್ಲ ಎಂದು ತಿಳಿಸಿದರು.

ಉನ್ನಾವೊ ಅತ್ಯಾಚಾರ ಸಂತ್ರಸ್ತೆಯನ್ನು ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ 20 ಜೂನ್ 2017ರಲ್ಲಿ ಅಪಹರಿಸಿ ಅತ್ಯಾಚಾರ ಮಾಡಿದ್ದ. ಅಲ್ಲದೆ ಆಕೆಯನ್ನು ₹ 60,000ಕ್ಕೆ ಮಾರಾಟ ಮಾಡಲಾಗಿತ್ತು. ಈ ಮಧ್ಯೆ ಆಕೆಗೆ ಮಾಖಿ ಪೊಲೀಸ್‌ ಠಾಣೆಯಲ್ಲಿ ರಕ್ಷಣೆ ದೊರೆತಿತ್ತು.

ಸಂತ್ರಸ್ತೆ ಚಲಿಸುತ್ತಿದ್ದ ಕಾರಿಗೆ, ನಂಬರ್‌ ಪ್ಲೇಟ್‌ ಇಲ್ಲದ ಲಾರಿಯೊಂದು 2018ರಲ್ಲಿ ಡಿಕ್ಕಿ ಹೊಡೆದು ಇಡೀ ಪ್ರಕರಣ ವಿವಾದದ ಸ್ವರೂಪ ಪಡೆದುಕೊಂಡಿತು. ಘಟನೆಯಲ್ಲಿ ಸಂತ್ರಸ್ತೆ ಮತ್ತು ಆಕೆಯ ಪರ ವಕೀಲರು ತೀವ್ರವಾಗಿ ಗಾಯಗೊಂಡರೆ ಆಕೆಯ ಇಬ್ಬರು ಚಿಕ್ಕಮ್ಮಂದಿರು ಇಹಲೋಕ ತ್ಯಜಿಸಿದರು. ಕೆಲ ದಿನಗಳ ಬಳಿಕ ವಕೀಲ ಕೂಡ ಮೃತಪಟ್ಟರು. ಘಟನೆಯ ಹಿಂದೆ ಸೆಂಗರ್‌ ಕೈವಾಡ ಇದೆ ಎಂದು ವಕೀಲರ ಪತ್ನಿ ದೂರಿದ್ದರು.

ಉನ್ನಾವೋ ಅತ್ಯಾಚಾರ ಘಟನೆಗೆ ಸಂಬಂಧಿಸಿದ ನಾಲ್ಕು ಪ್ರಕರಣಗಳ ವಿಚಾರಣೆಯನ್ನು ಆಗಸ್ಟ್ 2019 ರಲ್ಲಿ,  ಸುಪ್ರೀಂ ಕೋರ್ಟ್  ದೆಹಲಿಗೆ ವರ್ಗಾಯಿಸಿತು. ದಿನವಹಿ ವಿಚಾರಣೆ ನಡೆಸಿ  45 ದಿನಗಳಲ್ಲಿ ಪ್ರಕರಣ ಇತ್ಯರ್ಥಗೊಳಿಸಲು ಆದೇಶಿಸಿತು.

ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿಗೆ ಸಂಬಂಧಿಸಿದಂತೆ ಸೆಂಗರ್‌ಗೆ 2019ರ ಡಿಸೆಂಬರ್‌ನಲ್ಲಿ ಶಿಕ್ಷೆ ವಿಧಿಸಲಾಯಿತು. ಅತ್ಯಾಚಾರ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಸಜೆ ಮತ್ತು ಕಸ್ಟಡಿ ಸಾವಿನ ಪ್ರಕರಣದಲ್ಲಿ 10 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು.

ಕುಲದೀಪ್ ಸಿಂಗ್ ಸೆಂಗರ್ ಪರ ವಕೀಲರಾದ ಕನ್ಹಯ್ಯಾ ಸಿಂಘಾಲ್, ಉಜ್ವಲ್ ಘಾಯ್, ಐಶ್ವರ್ಯ ಸೆಂಗರ್, ಉದಿತ್ ಬಕ್ಷಿ, ವಾಣಿ ಸಿಂಘಾಲ್, ಪ್ರಸನ್ನ, ತೀವ್ರ್ ಸಿಂಘಾಲ್, ದೀಪಾಲಿ ಪವಾರ್, ಅಜಯ್ ಕುಮಾರ್ ಮತ್ತು ಅನ್ಮೋಲ್ ಚೋಪ್ರಾ ವಾದ ಮಂಡಿಸಿದ್ದರು.

ಸಿಬಿಐ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರವಿ ಶರ್ಮಾ ಹಾಗೂ ವಕೀಲರಾದ ಅಂಜನಿ ಕುಮಾರ್ ರೈ, ಪ್ರಫುಲ್ ಕುಮಾರ್ ಅವರು ವಾದಿಸಿದ್ದರು.