Jail 
ಸುದ್ದಿಗಳು

ಕೈದಿಗಳ ಅಸಹಜ ಸಾವು ಪ್ರಕರಣ: ಪರಿಹಾರದ ಮೊತ್ತ ಬಿಡುಗಡೆ ಪಟ್ಟಿ ಸಲ್ಲಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡಿದ ಹೈಕೋರ್ಟ್‌

ಜೈಲಿನಲ್ಲಿ ಕೈದಿಗಳ ಅಸಹಜ ಸಾವಿಗೆ ಸಂಬಂಧಿಸಿದಂತೆ 2017ರ ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಮನವಿಯ ವಿಚಾರಣೆಯನ್ನು ಹೈಕೋರ್ಟ್‌ ವಿಚಾರಣೆ ನಡೆಸಿತು.

Bar & Bench

ಜೈಲಿನಲ್ಲಿ ಕೈದಿಗಳು ಅಸಹಜವಾಗಿ ಸಾವನ್ನಪ್ಪಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರ ಕುಟುಂಬಸ್ಥರಿಗೆ ಇದುವರೆಗೆ ಎಷ್ಟು ಮತ್ತು ಯಾರಿಗೆಲ್ಲಾ ತಾತ್ಕಾಲಿಕವಾಗಿ ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ ಎಂಬುದರ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂಬ ರಾಜ್ಯ ಸರ್ಕಾರದ ಮನವಿಗೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ ಅಸ್ತು ಎಂದಿತು.

ಜೈಲಿನಲ್ಲಿ ಕೈದಿಗಳ ಅಸಹಜ ಸಾವಿಗೆ ಸಂಬಂಧಿಸಿದಂತೆ 2017ರ ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ಎಚ್‌ ವಾಣಿ ಅವರು “ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ಕಳೆದ ವಿಚಾರಣೆಯ ಸಂದರ್ಭದಲ್ಲಿ ಅಫಿಡವಿಟ್‌ ಸಲ್ಲಿಸಿ, ಪರಿಹಾರದ ಮೊತ್ತ ಬಿಡುಗಡೆ ಸಂಬಂಧದ ಪ್ರಕ್ರಿಯೆಯನ್ನು ಅದರಲ್ಲಿ ವಿವರಿಸಿದ್ದೇವೆ. ಬಹುಕಾಲದ ನಂತರ ಪ್ರಕರಣ ವಿಚಾರಣೆಗೆ ಬರುತ್ತಿರುವುದರಿಂದ ಯಾರುಯಾರಿಗೆ, ಎಷ್ಟೆಷ್ಟು ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಪೀಠದ ಮುಂದೆ ಇಡಲಾಗಿಲ್ಲ. ಎರಡು ವಾರ ಕಾಲಾವಕಾಶ ನೀಡಿದರೆ ಇಡೀ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು” ಎಂದರು.

ಇದಕ್ಕೆ ಪೀಠವು “ನ್ಯಾಯಾಲಯಕ್ಕೆ ಸಲಹೆ ಮಾಡಲು ಅಮಿಕಸ್‌ ಕ್ಯೂರಿ ಅವರನ್ನು ನೇಮಿಸಲಾಗಿದೆಯೇ” ಎಂದು ಪ್ರಶ್ನಿಸಿತಾದರೂ ಅದನ್ನು ಮುಂದುವರಿಸಲಿಲ್ಲ.

ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ಪ್ರತಿನಿಧಿಸುತ್ತಿರುವ ವಕೀಲ ಕ್ಲಿಫ್ಟನ್‌ ರೊಜಾರಿಯೊ ಅವರ ಪರವಾಗಿ ವಿಚಾರಣೆಯಲ್ಲಿ ಭಾಗಿಯಾಗಿದ್ದ ವಕೀಲೆ ಶಿಲ್ಪಾ ಪ್ರಸಾದ್‌ ಅವರು “ನ್ಯಾಯಾಲಯದ ಆದೇಶದ ಅನುಪಾಲನಾ ವರದಿಯನ್ನು ನಮಗೆ ನೀಡಿಲ್ಲ” ಎಂದು ಪೀಠದ ಗಮನಕ್ಕೆ ತಂದರು.

ಅಂತಿಮವಾಗಿ ನ್ಯಾಯಾಲಯವು “ಅನುಪಾಲನಾ ವರದಿಯ ಪ್ರತಿಯನ್ನು ವಕೀಲರು ಕೆಎಸ್‌ಎಲ್‌ಎಸ್‌ಎಗೆ ಕಳುಹಿಸಿಕೊಡಬೇಕು. ಇದುವರೆಗೆ ಯಾರಿಗೆ, ಎಷ್ಟು ಮೊತ್ತದ ಪರಿಹಾರ ವಿತರಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದ ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ದಾಖಲಿಸಿಕೊಂಡು, ವಿಚಾರಣೆಯನ್ನು ಫೆಬ್ರವರಿ 8ಕ್ಕೆ ಮುಂದೂಡಿತು.