Madhya Pradesh High Court, Jabalpur Bench  
ಸುದ್ದಿಗಳು

ಪತ್ನಿಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ; ಆಕೆಯ ಒಪ್ಪಿಗೆ ಅಪ್ರಸ್ತುತ: ಮಧ್ಯಪ್ರದೇಶ ಹೈಕೋರ್ಟ್

ಹೆಂಡತಿಯ ವಯಸ್ಸು 15 ವರ್ಷಕ್ಕಿಂತ ಕಡಿಮೆ ಇಲ್ಲದಿದ್ದರೆ ಆಕೆಯ ಸಮ್ಮತಿ ಇಲ್ಲದಿದ್ದರೂ ಪತಿ ಆಕೆಯೊಂದಿಗೆ ಅನೈಸರ್ಗಿಕ ಸಂಭೋಗದಲ್ಲಿ ತೊಡಗುವುದು ಅತ್ಯಾಚಾರವಲ್ಲ ಎಂದು ಏಕಸದಸ್ಯ ಪೀಠ ಹೇಳಿದೆ.

Bar & Bench

ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಗುರುತಿಸದೇ ಇರುವುದರಿಂದ ವ್ಯಕ್ತಿ ತನ್ನ ಹೆಂಡತಿಯೊಂದಿಗೆ ಅಸ್ವಾಭಾವಿಕ ಲೈಂಗಿಕತೆಯಲ್ಲಿ ತೊಡಗುವುದು ಅತ್ಯಾಚಾರವಲ್ಲ, ಅಂತಹ ಸಂದರ್ಭಗಳಲ್ಲಿ ಆಕೆಯ ಸಮ್ಮತಿ ಅಪ್ರಸ್ತುತ ಎಂದು  ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.

ಹೆಂಡತಿಯ ವಯಸ್ಸು ವಯಸ್ಸು 15 ವರ್ಷಕ್ಕಿಂತ ಕಡಿಮೆ ಅಲ್ಲಿದಿದ್ದರೆ ಆಕೆಯ ಒಪ್ಪಿಗೆ ಇಲ್ಲದಿದ್ದರೂ ಪತಿ ಆಕೆಯೊಂದಿಗೆ ಗುದ ಸಂಭೋಗದಲ್ಲಿ ತೊಡಗುವುದು ಅತ್ಯಾಚಾರವಲ್ಲ ಎಂದು ನ್ಯಾಯಮೂರ್ತಿ ಗುರುಪಾಲ್‌ ಸಿಂಗ್ ಅಹ್ಲುವಾಲಿಯಾ ಅವರಿದ್ದ ಏಕಸದಸ್ಯ ಪೀಠ ಹೇಳಿತು.

“ಐಪಿಸಿಯ ಸೆಕ್ಷನ್ 375 ರ ಅಡಿಯಲ್ಲಿ ʼಅತ್ಯಾಚಾರʼ ದ ತಿದ್ದುಪಡಿ ವ್ಯಾಖ್ಯಾನದ ದೃಷ್ಟಿಯಿಂದ, ಮಹಿಳೆಯ ಗುದದ್ವಾರದಲ್ಲಿ ಶಿಶ್ನ ಪ್ರವೇಶಿಸುವುದು "ಅತ್ಯಾಚಾರ"ವಾಗಲಿದೆ. ಆದರೆ, ಹೆಂಡತಿಯ ವಯಸ್ಸು 15 ವರ್ಷಕ್ಕಿಂತ ಕಡಿಮೆ ಇಲ್ಲದಿದ್ದರೆ ಆಕೆಯ ಸಮ್ಮತಿ ಇಲ್ಲದಿದ್ದರೂ ಪತಿ ನಡೆಸುವ ಯಾವುದೇ ಸ್ವರೂಪದ ಲೈಂಗಿಕ ಕ್ರಿಯೆ ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ. ಆಕೆಯ  ಅಸಮ್ಮತಿ ಮಹತ್ವವನ್ನು ಕಳೆದುಕೊಳ್ಳಲಿದೆ. ವೈವಾಹಿಕ ಅತ್ಯಾಚಾರಕ್ಕೆ ಇದುವರೆಗೂ ಮನ್ನಣೆ ದೊರೆತಿಲ್ಲ” ಎಂದು ನ್ಯಾಯಾಲಯ ಕಾನೂನಿನ ಮಿತಿಯನ್ನು ತಿಳಿಸಿತು.

ಕಾನೂನುಬದ್ಧವಾಗಿ ವಿವಾಹವಾದ ಪತ್ನಿಯೊಂದಿಗೆ ಪತಿಯು ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುವುದು ಐಪಿಸಿ ಸೆಕ್ಷನ್ 377 ರ ಅಡಿಯಲ್ಲಿ ಅಪರಾಧವಲ್ಲವಾದ್ದರಿಂದ ಪತಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಅದು ರದ್ದುಗೊಳಿಸಿತು.

ಪರಿಣಾಮ, ಕ್ಷುಲ್ಲಕ ಆರೋಪಗಳ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆಯೇ ಎಂಬುದರ ಕುರಿತು ಹೆಚ್ಚಿನ ಚರ್ಚೆ ನಡೆಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪತಿ- ಪತ್ನಿ ಪ್ರತ್ಯೇಕವಾಗಿದ್ದಾಗ ಪತ್ನಿಯೊಂದಿಗೆ ಪತಿ ನಡೆಸುವ ಲೈಂಗಿಕ ಕ್ರಿಯೆ ಐಪಿಸಿಯ ಸೆಕ್ಷನ್ 376 ಬಿ ಅಡಿ ಅತ್ಯಾಚಾರ ಎನಿಸಿಕೊಳ್ಳುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.  

ತಾನು ಎರಡನೇ ಬಾರಿ ತನ್ನ ವೈವಾಹಿಕ ಮನೆಯನ್ನು ಪ್ರವೇಶಿಸಿದಾಗ ಗಂಡ ತನ್ನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರು ಎಂದು ಪತ್ನಿ ತನ್ನ ಪತಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಗಂಡ ಹೈಕೋರ್ಟ್‌ ಮೆಟ್ಟಿಲೇರಿದ್ದರು. ತನ್ನ ಮತ್ತು ಪತ್ನಿ ನಡುವಿನ ಯಾವುದೇ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಐಪಿಸಿಯ ಸೆಕ್ಷನ್ 377 ರ ಅಡಿಯಲ್ಲಿ ಅಪರಾಧವಲ್ಲ ಎಂದು ಅವರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಪತಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಎಫ್ಐಆರ್  ರದ್ದುಗೊಳಿಸಿತು.