Justice VG Arun and Kerala HC 
ಸುದ್ದಿಗಳು

ಪ್ರಾಣಿಬಲಿಯಂತಹ ಅವೈಜ್ಞಾನಿಕ ಆಚರಣೆಗಳನ್ನು ತಡೆಯಬೇಕಿದೆ: ಕೇರಳ ಹೈಕೋರ್ಟ್

ಡಾ. ಬಿ ಆರ್‌ ಅಂಬೇಡ್ಕರ್ ಅವರ ಅಭಿಪ್ರಾಯದಂತೆ, ಸಂಪ್ರದಾಯಗಳನ್ನು ಕುರುಡಾಗಿ ಪಾಲಿಸುವುದಕ್ಕಿಂತಲೂ, ಧಾರ್ಮಿಕ ಆಚರಣೆಗಳನ್ನು ಸಮಾನತೆ ಮತ್ತು ಮಾನವೀಯ ಮೌಲ್ಯಗಳು ಮುನ್ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ.

Bar & Bench

ಧಾರ್ಮಿಕ ಉದ್ದೇಶಗಳಿಗಾಗಿ ರೂಪುಗೊಂಡಿದ್ದರೂ ಅನಾರೋಗ್ಯಕರ, ಅವೈಜ್ಞಾನಿಕ ಹಾಗೂ ಮಾರಕ ಆಚರಣೆಗಳನ್ನು ತಡೆಯಬೇಕು ಎಂದು ಕೇರಳ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ [ರವೀಂದ್ರನ್‌ ಪಿ ಟಿ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಈ ನಿಟ್ಟಿನಲ್ಲಿ ನಿಜವಾದ ಧಾರ್ಮಿಕ ಆಚರಣೆ ಬಗ್ಗೆ ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್‌ ಅವರು ಹೇಳಿದ್ದ ಮಾತುಗಳನ್ನು ನ್ಯಾ. ವಿ ಜಿ ಅರುಣ್‌ ಅವರಿದ್ದ ಏಕಸದಸ್ಯ ಪೀಠ ಪ್ರಸ್ತಾಪಿಸಿತು.

"ಡಾ ಬಿ .ಆರ್ ಅಂಬೇಡ್ಕರ್ ಅವರ ಅಭಿಪ್ರಾಯದಂತೆ, ಸಂಪ್ರದಾಯಗಳನ್ನು ಕುರುಡಾಗಿ ಪಾಲಿಸುವುದಕ್ಕಿಂತಲೂ ನಿಜವಾದ ಧಾರ್ಮಿಕ ಆಚರಣೆಗಳು ವಿವೇಚನಾಶೀಲತೆ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳಿಂದ ಮಾರ್ಗದರ್ಶಿತವಾಗಬೇಕು. ಧರ್ಮದ ಹೆಸರಿನಲ್ಲಿ ನಡೆಯುವ ಅನಾರೋಗ್ಯಕರ, ಅವೈಜ್ಞಾನಿಕ ಹಾಗೂ ಮಾರಕ ಆಚರಣೆಗಳನ್ನು ತಡೆಯಬೇಕು” ಎಂದು ನ್ಯಾಯಾಲಯ ನುಡಿಯಿತು.

ಇದಲ್ಲದೆ, ಧಾರ್ಮಿಕ ಆಚರಣೆಯ ನೆಪದಲ್ಲಿ ಪ್ರಾಣಿಗಳನ್ನು ಬಲಿಕೊಡುವುದು ಅಂತಹ ಒಂದು ಆಚರಣೆಯಾಗಿದ್ದು ಅದನ್ನು ನಿಗ್ರಹಿಸಬೇಕಾಗಿದೆ ಎಂದು ಅದು ತಿಳಿಸಿದೆ.

ಸತಿ, ನರಬಲಿ ಮತ್ತು ಬಾಲ್ಯವಿವಾಹದಂತಹ ಆಕ್ಷೇಪಾರ್ಹ ಧಾರ್ಮಿಕ ಆಚರಣೆಗಳನ್ನು ತಡೆಗಟ್ಟಲು ಮತ್ತು ನಿಷೇಧಿಸಲು ಭಾರತವು ಐತಿಹಾಸಿಕವಾಗಿ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ನ್ಯಾ. ಅರುಣ್‌ ಈ ಸಂದರ್ಭದಲ್ಲಿ ವಿವರಿಸಿದರು.

ಶಾಸ್ತ್ರೋಕ್ತವಾಗಿ ಬಲಿ ಕೊಡುವ ನೆಪದಲ್ಲಿ ಪ್ರತಿವಾದಿಯು ಪ್ರಾಣಿ ಪಕ್ಷಿಗಳ ಕಗ್ಗೊಲೆ ನಡೆಸುವುದನ್ನು ತಡೆಯುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ಪ್ರತಿವಾದಿ ವಾಸವಿರುವ ಕಟ್ಟಡದ ಎರಡನೇ ಮಹಡಿಯಲ್ಲಿ ದೇವಾಲಯ ಹೋಲುವ ನಿರ್ಮಿತಿಯೊಂದು ಇದ್ದು ಅಲ್ಲಿ ಆಕ್ಷೇಪಾರ್ಹ ಚಟುವಟಿಕೆಗಳನ್ನು ನಡೆಸಲಾಗಿದೆ ಎಂಬುದು ಅರ್ಜಿದಾರರ ಆರೋಪವಾಗಿತ್ತು.

ಮತ್ತೊಂದೆಡೆ, ಪ್ರತಿವಾದಿ ತನ್ನ ಧಾರ್ಮಿಕ ಆಚರಣೆಯನ್ನು ಸಮರ್ಥಿಸಿಕೊಂಡರು. ಪಂಚ ಮಕರಂ ಬಳಸಿ ಶಾಕ್ತೇಯ ಧಾರ್ಮಿಕ ವಿಧಾನವನ್ನು ತಾನು ಅನುಸರಿಸುತ್ತಿದ್ದೇನೆ. ಈ ವಿಧಾನದಲ್ಲಿ ಮದ್ಯ, ಮೀನು, ಮಾಂಸ, ಮುದ್ರಾ ಹಾಗೂ ಮಿಥುನವು ಧಾರ್ಮಿಕ ನಂಬಿಕೆಯ ಅತ್ಯಗತ್ಯ ಭಾಗವಾಗಿದೆ. ಸಂವಿಧಾನದ 25 ಮತ್ತು 26ನೇ ವಿಧಿ ಅಡಿಯಲ್ಲಿ ಒದಗಿಸಲಾದ ಹಕ್ಕುಗಳ ಪ್ರಕಾರ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತಿಲ್ಲ. ಪೂಜಾ ಕೊಠಡಿಯೊಳಗೆ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಿರುವುದರಿಂದ ಅರ್ಜಿದಾರರ ಮನವಿಗಳು ತನಗೆ ಅನ್ವಯಿಸುವುದಿಲ್ಲ. ತನ್ನ ಆಚರಣೆ ಬಗ್ಗೆ ಭಕ್ತರಲ್ಲಿ ಪ್ರಚಾರ ಮಾಡುತ್ತಿಲ್ಲ ಎಂದು ಅವರು ವಾದಿಸಿದ್ದರು.

ಸಮಸ್ಯೆ ಇರುವುದು ನಿಜ ಎಂದು ದೃಢಪಡಿಸಿದ ರಾಜ್ಯ ಸರ್ಕಾರ ಹಾಗೂ ಪಂಚಾಯತ್‌, ಸಾಮೂಹಿಕ ದೂರುಗಳ ಹೊರತಾಗಿಯೂ ಸಹಕರಿಸಲು ಸಿದ್ಧರಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದವು.

ಪ್ರತಿವಾದಿಯ ಕ್ರಮಗಳನ್ನು ಎತ್ತಿ ಹಿಡಿಯುವಂತಹ ಯಾವ ತೀರ್ಪುಗಳೂ ಪೂರ್ವ ನಿದರ್ಶನವಾಗಿ ದೊರೆಯುತ್ತಿಲ್ಲ ಎಂದು ತಿಳಿಸಿದ ನ್ಯಾಯಾಲಯ ಪೂರ್ವಾನುಮತಿ ಇಲ್ಲದೆ ಧಾರ್ಮಿಕ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರೂ ಜಿಲ್ಲಾಧಿಕಾರಿಗಳು ಮತ್ತು ಪೊಲೀಸರು ಕ್ರಮ ಕೈಗೊಳ್ಳಲು ನಿರಾಕರಿಸುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಹೀಗಾಗಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರು ಹಾಗೂ ಪಂಚಾಯತ್‌ ಅಧಿಕಾರಿಗಳಿಗೆ ಪೀಠ ನಿರ್ದೇಶನ ನೀಡಿತು.