Elephant and Karnataka HC 
ಸುದ್ದಿಗಳು

ಆನೆಗಳ ಅಕಾಲಿಕ ಸಾವು: ಮಾನವ-ಪ್ರಾಣಿ ಸಂಘರ್ಷ ತಡೆಗೆ ನಿರ್ದೇಶನ ನೀಡಿದ ಹೈಕೋರ್ಟ್‌

ಅಕ್ರಮ ವಿದ್ಯುತ್‌ ಬೇಲಿಗಳ ಬಗ್ಗೆ ಹಾಗೂ ಆನೆಗಳ ರಕ್ಷಣೆಯ ಮಹತ್ವದ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದ ಹೈಕೋರ್ಟ್.

Bar & Bench

ಪ್ರಾಣಿ ಸಂಪತ್ತನ್ನು ಸಂರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಬದ್ಧತೆ ತೋರಬೇಕು ಎಂದು ಈಚೆಗೆ ಹೇಳಿರುವ ಕರ್ನಾಟಕ ಹೈಕೋರ್ಟ್‌, ಕಾಡಿನ ಅಂಚಿನಲ್ಲಿ ವಿದ್ಯುತ್‌ ಅವಘಡಗಳಿಗೆ ತುತ್ತಾಗಿ ಆನೆಗಳು ಸಾವಿಗೆ ಈಡಾಗುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ. 

ರಾಜ್ಯದಲ್ಲಿ ಆನೆಗಳ ಸರಣಿ ಸಾವಿನ ಕುರಿತಂತೆ ಮಾಧ್ಯಮಗಳ ವರದಿ ಆಧರಿಸಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ನೇತೃತ್ವದ ವಿಭಾಗೀಯ ಪೀಠವು ಮಾನವ ಪ್ರಾಣಿ ಸಂಘರ್ಷ ತಡೆಗೆ ಹಲವು ನಿರ್ದೇಶನಗಳನ್ನು ನೀಡಿದೆ.

  • ಆನೆಗಳ ಆವಾಸ ಸ್ಥಾನಗಳು, ಗಡಿಯಂಚಿನ ಪ್ರದೇಶಗಳಲ್ಲಿ ಅನಧಿಕೃತ ವಿದ್ಯುತ್‌ ತಂತಿಗಳು ಮತ್ತು ಅಕ್ರಮ ವಿದ್ಯುತ್‌ ಬೇಲಿಗಳಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುವ ಪ್ರದೇಶಗಳನ್ನು ಗುರುತಿಸಬೇಕು.

  • ವಿವಿಧ ಅರಣ್ಯ ವೃತ್ತಗಳಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರದೇಶವಾರು ತನಿಖಾ ಸಮಿತಿಗಳನ್ನು ರಚಿಸಬೇಕು.

  • ಆನೆ ಕಾರ್ಯಪಡೆಯ ಶಿಫಾರಸ್ಸುಗಳನ್ನು ಜಾರಿಗೆ ತರಬೇಕು.

  • ಅರಣ್ಯ ಪ್ರದೇಶಗಳ ಮೂಲಕ ವಿದ್ಯುತ್‌ ಪ್ರಸರಣ ಮಾರ್ಗಗಳನ್ನು ಅಳವಡಿಸುವ ಕುರಿತು 2016ರ ಅಕ್ಟೋಬರ್ 24ರಂದು ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು ಮತ್ತು ಅವುಗಳ ಮೇಲ್ವಿಚಾರಣೆ ಮಾಡಬೇಕು.

  • ಆನೆಗಳು ಮತ್ತು ಆನೆ ಕಾರಿಡಾರ್‌ಗಳ ಆವಾಸ ಸ್ಥಾನಗಳನ್ನು ನಿಯಂತ್ರಿಸಬೇಕು.

  • ವಿದ್ಯುತ್‌ ಮಾರ್ಗಗಳ ನಿರ್ವಹಣೆಯಿಂದಾಗಿ ಅಥವಾ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ನಿಗದಿಪಡಿಸಿದ ಭೂಪ್ರದೇಶ ಮತ್ತು ಕಡಿದಾದ ಪ್ರದೇಶಗಳಿಗೆ ಕನಿಷ್ಠ ಎತ್ತರಕ್ಕೆ ಇರಬಹುದಾದ ಮಾನದಂಡಗಳನ್ನು ಪಾಲಿಸದೇ ಇರುವ ಕಾರಣ ಅನಾಹುತ ಸಂಭವಿಸುತ್ತವೆ. ಹೀಗಾಗಿ, ಜೋತು ಬಿದ್ದಿರುವ ವಿದ್ಯುತ್‌ ಮಾರ್ಗಗಳನ್ನು ಪರಿಶೀಲಿಸಲು ಅರಣ್ಯ ಅಧಿಕಾರಿಗಳು ಇಂಧನ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸಬೇಕು.

  • ಆನೆಗಳು ತಮ್ಮ ಹೊಲಗಳಿಗೆ ಪ್ರವೇಶಿಸುವುದನ್ನು ತಡೆಯಲು ಅರಣ್ಯದ ಆಜುಬಾಜಿನ ರೈತರು ತಮ್ಮ ಕೃಷಿ ಹೊಲಗಳಿಗೆ ಹಾಕುವ ಅಕ್ರಮ ವಿದ್ಯುತ್‌ ಬೇಲಿ ಪರಿಶೀಲಿಸಲು, ತಡೆಯಲು ಮತ್ತು ನಾಶಮಾಡಲು ಪರಿಣಾಮಕಾರಿ ಕಾರ್ಯವಿಧಾನ ಹೊಂದಬೇಕು.

  • ಅನಧಿಕೃತ ವಿದ್ಯುತ್‌ ಬೇಲಿ ಹಾಕಲು ರೈತರಿಗೆ ಅನುಮತಿ ನೀಡಬಾರದು ಮತ್ತು ರೈತರು ತಮ್ಮ ಬೆಳೆಗಳನ್ನು ವೈಜ್ಞಾನಿಕ ಮತ್ತು ರಕ್ಷಣಾತ್ಮಕ ಬ್ಯಾರಿಕೇಡ್‌ಗಳಿಂದ ಸಂರಕ್ಷಿಸಿಕೊಳ್ಳಬೇಕು.

  • ವಿದ್ಯುತ್‌ ಕೇಬಲ್‌ಗಳು ಮತ್ತು ದೂರಸಂಪರ್ಕ ಟವರ್‌ಗಳನ್ನು ನಿರ್ಮಿಸುವಾಗ ಅವುಗಳಿಗಿರುವ ನಿಯಮಗಳನ್ನು ಎಚ್ಚರಿಕೆಯಿಂದ ಪಾಲಿಸಬೇಕು. ಪರಿಸರ ಸೂಕ್ಷ ವಲಯಗಳಲ್ಲಿ ನೆಲದಾಳದಲ್ಲಿ ಕೇಬಲ್‌ ಅಳವಡಿಕೆಯನ್ನು ಉತ್ತೇಜಿಸಬೇಕು.

  • ಅಕ್ರಮ ವಿದ್ಯುತ್‌ ಬೇಲಿಗಳ ಬಗ್ಗೆ ಹಾಗೂ ಆನೆಗಳ ರಕ್ಷಣೆಯ ಮಹತ್ವದ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

  • ಆನೆಗಳ ಆಕಸ್ಮಿಕ ಸಾವಿನಂತಹ ಘಟನೆಗಳಿಗೆ ಗುರಿಯಾಗುವ ಪ್ರದೇಶಗಳಲ್ಲಿ ನಿಯಮಿತವಾಗಿ ಗಸ್ತು ತಿರುಗಬೇಕು.

  • ಆನೆಗಳ ಸುರಕ್ಷಿತ ಚಲನೆಯನ್ನು ಖಾತ್ರಿಪಡಿಸಿಕೊಳ್ಳಲು, ಆನೆಗಳಿಗೆ ಎದುರಾಗುವ ಅಪಘಾತಗಳನ್ನು ತಗ್ಗಿಸಲು ಅಪೇಕ್ಷಿತ ಸ್ಥಳಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಬೇಕು.

  • ಅಧಿಕಾರಿಗಳು ಇ-ಕಣ್ಗಾವಲು ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ತಾಂತ್ರಿಕ ಆವಿಷ್ಕಾರಗಳನ್ನು ಬಳಸಬೇಕು. ನಾಗರಹೊಳೆ ಹುಲಿ ಮೀಸಲು ಪ್ರದೇಶದಲ್ಲಿ ಬಳಸಿರುವ ಕೃತಕ ಬುದ್ಧಿಮತ್ತೆ ಸಾಫ್ಟ್‌ವೇರ್‌ ಅನ್ನು ಅಗತ್ಯವಿರುವ ಎಲ್ಲೆಡೆ ವಿಸ್ತರಿಸಬೇಕು.

  • ಆನೆಗಳೂ ಸೇರಿದಂತೆ ಪ್ರಾಣಿಗಳ ಚಲನವಲನಗಳನ್ನು ಟ್ರ್ಯಾಕ್‌ ಮಾಡಲು ರೇಡಿಯೊ ಕಾಲರ್‌ ವಿಧಾನ ಅನುಸರಿಸಬೇಕು.

  • ವನ್ಯಜೀವಿ ಸಂರಕ್ಷಣಾ ಕಾಯಿದೆ-1972 ಮತ್ತು ವಿದ್ಯುತ್‌ ಕಾಯಿದೆ-2003ಕ್ಕೆ ಅನ್ವಯವಾಗುವ ಕಾನೂನುಗಳ ಉಲ್ಲಂಘನೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಕಾನೂನು ತನಿಖಾ ಪ್ರಕ್ರಿಯೆ ತ್ವರಿತವಾಗಿರಬೇಕು.

  • ಅರಣ್ಯ ಇಲಾಖೆಯ ಅಧಿಕಾರಿಗಳು, ನೌಕರರ ನಿರ್ಲಕ್ಷ್ಯ ಮತ್ತು ಅವರ ಕರ್ತವ್ಯ ಲೋಪಕ್ಕೆ ಅವರ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು.

  • ಆನೆಗಳೂ ಸೇರಿದಂತೆ ವನ್ಯಜೀವಿಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಹೊರಡಿಸಿರುವ ಎಲ್ಲಾ ನಿರ್ದೇಶನಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಎಲ್ಲಾ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.