ಉನ್ನಾವೋ ವಕೀಲರ ಸಂಘದ ಸದಸ್ಯರು ನ್ಯಾಯಾಲಯಕ್ಕೆ ನುಗ್ಗಿ ತನ್ನ ಮೇಲೆ ದಾಳಿ ನಡೆಸಿದ್ದಾರೆ ಎಂದು ಉತ್ತರಪ್ರದೇಶದ ನ್ಯಾಯಾಧೀಶರೊಬ್ಬರು ಪೊಲೀಸರಿಗೆ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ಸದಸ್ಯರು ತನ್ನನ್ನು ನಿಂದಿಸಿ, ಒದೆದು, ಕಪಾಳಕ್ಕೆ ಹೊಡೆದಿದ್ದಾರೆ ಎಂದು ಮಾರ್ಚ್ 25 ರಂದು ಉನ್ನಾವೋ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ (ವಿಶೇಷ ನ್ಯಾಯಾಲಯ, ಪೊಕ್ಸೊ ಕಾಯಿದೆ) ಪ್ರಹ್ಲಾದ್ ಟಂಡನ್ ಅವರು ಕೊತ್ವಾಲಿ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದಾರೆ.
"ನಾನು ನನ್ನ ಕೋಣೆಗೆ ತೆರಳುತ್ತಿದ್ದೆ, ಈ ಜನ ನನ್ನನ್ನು ಸುತ್ತುವರೆದು ಒದೆದು, ಕಪಾಳಕ್ಕೆ ಹೊಡೆದರು ತಳ್ಳುವ ಜೊತೆಗೆ ನನ್ನ ಮೊಬೈಲ್ ಕಿತ್ತುಕೊಂಡರು" ಎಂದು ಪತ್ರದಲ್ಲಿ ಬರೆಯಲಾಗಿದೆ. ಪತ್ರದಲ್ಲಿ ಉಲ್ಲೇಖಿಸಿರುವ ವಕೀಲರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ.
“ ಮಾರ್ಚ್ 25 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ, 150-200 ವಕೀಲರ ಗುಂಪೊಂದು, ಬಾರ್ ಅಸೋಸಿಯೇಷನ್‌ನ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ನ್ಯಾಯಾಲಯದ ಕೊಠಡಿ ಸಂಖ್ಯೆ 11 ಕ್ಕೆ ನುಗ್ಗಿ ಅಲ್ಲಿ ಕುಳಿತಿದ್ದ ನ್ಯಾಯಾಧೀಶರ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಅಲ್ಲಿ ಇದ್ದ ಕುರ್ಚಿ ಮತ್ತು ಟೇಬಲ್ ಎಸೆದರು. ಅಂತಿಮವಾಗಿ ನ್ಯಾಯಾಲಯದ ಸಿಬ್ಬಂದಿ ರಕ್ಷಿಸುವ ಮುನ್ನ ತಾನು ವಕೀಲರಿಂದ ಹಲ್ಲೆ ಮತ್ತು ದಾಳಿಗೆ ಒಳಗಾದೆ. ನ್ಯಾಯಾಲಯದಿಂದ ಪಕ್ಕದ ಮೊಗಸಾಲೆಗೆ ಓಡಿದೆ. ನನ್ನ ಸ್ಟೆನೋ ಚೇಂಬರಿಗೆ ನುಗ್ಗಿ ಕಿಟಕಿಯ ಗಾಜುಗಳನ್ನು ಪುಡಿ ಮಾಡಿದರು” ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ಬಗ್ಗೆ ತಕ್ಷಣ ತನಿಖೆ ಆರಂಭಿಸುವಂತೆ ನ್ಯಾಯಾಧೀಶರು ಕೋರಿದ್ದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.