Justice B S Patil appointed has Lokayukta of Karnataka 
ಸುದ್ದಿಗಳು

ಕರ್ನಾಟಕ ಲೋಕಾಯುಕ್ತರಾಗಿ ಹಾಲಿ ಉಪಲೋಕಾಯುಕ್ತ ಬಿ ಎಸ್‌ ಪಾಟೀಲ್‌ ನೇಮಕ

ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಸೆಕ್ಷನ್‌ 3(1)ರ ಅಡಿ ಇರುವ ಅಧಿಕಾರ ಬಳಸಿ ರಾಜ್ಯಪಾಲರು ನಿವೃತ್ತ ನ್ಯಾಯಮೂರ್ತಿ ಬಿ ಎಸ್‌ ಪಾಟೀಲ್‌ ಅವರನ್ನು ನೇಮಕ ಮಾಡಿ ಆದೇಶ ಮಾಡಿದ್ದಾರೆ.

Bar & Bench

ಕರ್ನಾಟಕ ರಾಜ್ಯದ ನೂತನ ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ, ಹಾಲಿ ಉಪ ಲೋಕಾಯುಕ್ತ ಬಿ ಎಸ್‌ ಪಾಟೀಲ್‌ ಅವರನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಮಂಗಳವಾರ ನೇಮಕ ಮಾಡಿ ಆದೇಶಿಸಿದ್ದಾರೆ.

ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಸೆಕ್ಷನ್‌ 3(1)ರ ಅಡಿ ಇರುವ ಅಧಿಕಾರ ಬಳಸಿ ರಾಜ್ಯಪಾಲರು ನೇಮಕ ಮಾಡಿ ಆದೇಶ ಹೊರಡಿಸಿದ್ದು, ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ವಿಧಾನ ಪರಿಷತ್‌ ಸಭಾಪತಿ ಮತ್ತು ವಿಧಾನ ಸಭೆ ಸ್ಪೀಕರ್‌ ಹಾಗೂ ಉಭಯ ಸದನಗಳ ವಿರೋಧ ಪಕ್ಷದ ನಾಯಕರ ಜೊತೆ ಸಮಾಲೋಚನೆ ನಡೆಸಿ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಾದ ಭೀಮನಗೌಡ ಸಂಗನಗೌಡ ಪಾಟೀಲ್‌ ಅವರ ಹೆಸರನ್ನು ಲೋಕಾಯುಕ್ತ ಹುದ್ದೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಫಾರಸ್ಸು ಮಾಡಿದ್ದರು.

ಕಳೆದ ವಾರ ವಕೀಲ ಎಸ್‌ ಉಮಾಪತಿ ಅವರು ಲೋಕಾಯುಕ್ತ ಹುದ್ದೆ ಭರ್ತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠವು ಲೋಕಾಯುಕ್ತರನ್ನು ನೇಮಕ ಮಾಡುವುದಕ್ಕೆ ಸಂಬಂಧಿಸಿದ ವಿಚಾರವು ಪರಿಗಣನೆಯಲ್ಲಿದೆ. ನೀವು ಇದನ್ನು (ಅರ್ಜಿ) ಮುಂದುವರಿಸುವ ಅಗತ್ಯವಿಲ್ಲ. ಈಚೆಗೆ ಉಪಲೋಕಾಯುಕ್ತ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿಯನ್ನು ನೇಮಕ ಮಾಡಲಾಗಿದೆ. ಈಗ ಲೋಕಾಯುಕ್ತ ಹುದ್ದೆ ಮಾತ್ರ ಖಾಲಿ ಇದ್ದು, ಅದನ್ನು ತುಂಬುವ ಕೆಲಸ ಸಕ್ರಿಯವಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಅವರು ಮುಖ್ಯ ನ್ಯಾಯಮೂರ್ತಿಗಳ ಜೊತೆ ಸಮಾಲೋಚನೆ ನಡೆಸುವ ಪ್ರಕ್ರಿಯೆ ನಡೆಯುತ್ತಿದೆ. ಒಂದು ವಾರದಲ್ಲಿ ಈ ಬಗ್ಗೆ ನಿಮಗೆ ಮಾಹಿತಿ ತಿಳಿಯಲಿದೆ. ನಿಮ್ಮ ಸಂತೋಷಕ್ಕಾಗಿ ಹತ್ತು ದಿನಗಳ ಬಳಿಕ ಮನವಿಯನ್ನು ವಿಚಾರಣೆಗೆ ನಿಗದಿಪಡಿಸಲಾಗುವುದು ಎಂದಿತ್ತು.

ಹಿಂದಿನ ಲೋಕಾಯುಕ್ತ ಎಸ್‌ ವಿಶ್ವನಾಥ್‌ ಶೆಟ್ಟಿ ಅವರು ಜನವರಿ ಕೊನೆಯ ವಾರದಲ್ಲಿ ನಿವೃತ್ತಿ ಹೊಂದಿದ್ದರು.

ನ್ಯಾ. ಬಿ ಎಸ್‌ ಪಾಟೀಲ್‌ ಪರಿಚಯ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಪದೇಕನೂರ ಗ್ರಾಮದಲ್ಲಿ 1956ರ ಜೂನ್‌ 1ರಂದು ಜನನ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಜನ್ಮಸ್ಥಳದಲ್ಲಿ ಪೂರೈಸಿದ ನ್ಯಾ. ಪಾಟೀಲ್‌ ಅವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ ಎ ಪದವಿ ಪಡೆದರು. ಅಲ್ಲದೇ, ಧಾರವಾಡ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪೂರೈಸಿದರು. ಅಂತಿಮ ಕಾನೂನು ಪದವಿಯಲ್ಲಿ ಪ್ರಥಮ ರ್ಯಾಂಕ್‌ ಪಡೆದಿದ್ದ ನ್ಯಾ. ಪಾಟೀಲ್‌ ಅವರು ಮೂರು ಚಿನ್ನದ ಪದಕಕ್ಕೆ ಭಾಜನರಾಗಿದ್ದರು. ಅಂತಿಮ ಎಲ್‌ಎಲ್‌ಬಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದರು.

1980ರ ಸೆಪ್ಟೆಂಬರ್‌ 5ರಂದು ವಕೀಲರಾಗಿ ನೋಂದಣಿ ಮಾಡಿದ್ದ ನ್ಯಾ. ಪಾಟೀಲ್‌ ಅವರು ಹಲವು ಸಂಘ, ಸಂಸ್ಥೆಗಳನ್ನು ಪ್ರತಿನಿಧಿಸಿದ್ದು, ಸಿವಿಲ್‌, ಕ್ರಿಮಿನಲ್‌ ಕಾರ್ಮಿಕ ಸೇವೆಗಳು, ಭೂಸುಧಾರಣೆ ಸೇರಿದಂತೆ ಹಲವು ರೀತಿಯ ವ್ಯಾಜ್ಯಗಳನ್ನು ನಡೆಸಿದ್ದರು. 2004ರ ಅಕ್ಟೋಬರ್‌ 21ರಂದು ಕರ್ನಾಟಕ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡು 13 ವರ್ಷ 7 ತಿಂಗಳು ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾಗಿ, ಭೋಪಾಲ್‌ನ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಹೈಕೋರ್ಟ್‌ನ ಹಲವು ಸಮಿತಿಗಳ ನೇತೃತ್ವ ವಹಿಸಿದ್ದ ನ್ಯಾ. ಪಾಟೀಲ್‌ ಅವರು ಸಿವಿಲ್‌ ಮತ್ತು ಜಿಲ್ಲಾ ನ್ಯಾಯಾಧೀಶರ ನೇಮಕಾತಿ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದು, 2018ರ ಮೇ 31ರಂದು ನಿವೃತ್ತಿ ಹೊಂದಿದ್ದರು. 2019ರ ನವೆಂಬರ್‌ 20ರಂದು ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಉಪಲೋಕಾಯುಕ್ತರಾಗಿ ನೇಮಕಗೊಂಡಿದ್ದು, ಸೇವೆ ಸಲ್ಲಿಸುತ್ತಿದ್ದಾರೆ. ಈಗ ಲೋಕಾಯುಕ್ತರಾಗಿ ನಿಯುಕ್ತಿಗೊಂಡಿದ್ದಾರೆ.

ನ್ಯಾ. ಬಿ ಎಸ್‌ ಪಾಟೀಲ್‌ ಅವರು ಲೋಕಾಯುಕ್ತರಾಗುವುದರೊಂದಿಗೆ ಒಂದು ಉಪಲೋಕಾಯುಕ್ತ ಹುದ್ದೆ ಖಾಲಿ ಉಳಿಯಲಿದೆ. ಇನ್ನೊಂದು ಉಪಲೋಕಾಯುಕ್ತ ಹುದ್ದೆಗೆ ಈಚೆಗೆ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ ಎನ್‌ ಫಣೀಂದ್ರ ಅವರನ್ನು ನೇಮಕ ಮಾಡಲಾಗಿದೆ.

Karnataka Lokayukta Appointment.pdf
Preview