Ansal brothers
Ansal brothers 
ಸುದ್ದಿಗಳು

[ಉಪಹಾರ್ ಚಿತ್ರಮಂದಿರ ದುರಂತ] ಅನ್ಸಲ್ ಸಹೋದರರಿಗೆ 7 ವರ್ಷ ಜೈಲು, ₹2.25 ಕೋಟಿ ದಂಡ ವಿಧಿಸಿದ ದೆಹಲಿ ನ್ಯಾಯಾಲಯ

Bar & Bench

ಉಪಹಾರ್ ಸಿನಿಮಾ ಅಗ್ನಿ ದುರಂತ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ತಿರುಚಿದ್ದಕ್ಕಾಗಿ ಕಳೆದ ತಿಂಗಳು ನ್ಯಾಯಾಲಯದಿಂದ ದೋಷಿಗಳೆಂದು ತೀರ್ಮಾನಿಸಲ್ಪಟ್ಟ ಉದ್ಯಮಿ ಸುಶೀಲ್ ಅನ್ಸಲ್ ಮತ್ತು ಗೋಪಾಲ್ ಅನ್ಸಲ್ ಅವರಿಗೆ ದೆಹಲಿ ನ್ಯಾಯಾಲಯ ಸೋಮವಾರ 7 ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ ₹ 2.25 ಕೋಟಿ ದಂಡ ವಿಧಿಸಿದೆ.

ಶಿಕ್ಷೆಯನ್ನು ವಿಧಿಸುವ ವೇಳೆ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಪಂಕಜ್‌ ಶರ್ಮಾ ಅವರು ತಮ್ಮ ಅದೇಶದಲ್ಲಿ, "ಪ್ರಕರಣಕ್ಕೆ ಸಂಬಂಧಿಸಿದಂತೆ ತೀರಾ ಉದಾರವಾದ ಶಿಕ್ಷೆ ನೀಡುವುದು ಎಂದರೆ ಸಂತ್ರಸ್ತರ ಹಾಗೂ ಒಟ್ಟಂದದಲ್ಲಿ ನಾಗರಿಕರ ನೋವು ಮತ್ತು ಸಂಕಟಗಳಿಗೆ ಕುರುಡಾದಂತೆ ಆಗುತ್ತದೆ. ಇಂತಹ ಅಪರಾಧಗಳು ಮತ್ತೆ ಘಟಿಸಬಾರದು ಎಂದರೆ ಸಮಾಜದ ಕೂಗಿಗೆ ಪ್ರತಿಕ್ರಿಯಿಸಿ ಸೂಕ್ತ ಶಿಕ್ಷೆಯನ್ನು ನೀಡಬೇಕಾಗುತ್ತದೆ," ಎಂದಿದ್ದಾರೆ.

ಮುಂದುವರೆದು, "ಎಷ್ಟೇ ಮೊತ್ತದ ಪರಿಹಾರ ಕೂಡ ಸಂತ್ರಸ್ತರ ಕುಟುಂಬಸ್ಥರು ಅನುಭವಿಸಿದ ನೋವು, ಸಂಕಟ, ತಲ್ಲಣಗಳನ್ನು ಶಮನಗೊಳಿಸಲಾಗದು. ಆದಾಗ್ಯೂ, ಹಣದ ರೂಪದಲ್ಲಿ ನೀಡುವ ಪರಿಹಾರವು ಸ್ವಲ್ಪ ಮಟ್ಟಿಗೆ ಒತ್ತಾಸೆಯಾಗಬಹುದು" ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

“ಇದು ಸುದೀರ್ಘ ಪ್ರಕರಣ. ಅದು ಒಳಗೊಂಡಿರುವ ಸಂಕೀರ್ಣತೆಯಿಂದಾಗಿ ನಿರ್ಧಾರಕ್ಕೆ ಬರುವುದು ತುಂಬಾ ಕಷ್ಟ. ರಾತ್ರಿಯಿಡೀ ಯೋಚಿಸಿದ ನಂತರ. ಆರೋಪಿಗಳು ಶಿಕ್ಷೆಗೆ ಅರ್ಹರು ಎಂದು ನ್ಯಾಯಾಲಯ ಭಾವಿಸುತ್ತದೆ. ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 2.25 ಕೋಟಿ ರೂ ಜುಲ್ಮಾನೆ ವಿಧಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಜೂನ್ 13, 1997 ರಂದು ಉಪಹಾರ್ ಚಿತ್ರಮಂದಿರದಲ್ಲಿ ಬಾರ್ಡರ್‌ ಸಿನಿಮಾ ಪ್ರದರ್ಶನವಾಗುತ್ತಿದ್ದ ವೇಳೆ ಸಂಭವಿಸಿದ ವಿನಾಶಕಾರಿ ಬೆಂಕಿಯಿಂದ 59 ಮಂದಿ ಜೀವ ತೆತ್ತಿದ್ದರು. ಹಲವರು ಗಾಯಗೊಂಡಿದ್ದರು. ಅಗ್ನಿ ಸುರಕ್ಷತೆಗೆ ಸಂಬಂಧಿಸಿದಂತೆ ಸೂಕ್ತ ಕ್ರ,ಮ ಕೈಗೊಳ್ಳದೆ ದುರಂತ ಘಟಿಸಿತ್ತು. ಸಿಬಿಐ ತನಿಖೆ ಪೂರ್ಣಗೊಳಿಸಿದ ನಂತರ ಸುಶೀಲ್ ಅನ್ಸಲ್, ಗೋಪಾಲ್ ಅನ್ಸಲ್ ಮತ್ತಿತರ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.

ವಿಚಾರಣೆ ಪ್ರಗತಿ ಸಾಧಿಸಿದ ಹಂತದಲ್ಲಿದ್ದಾಗ ತನಿಖಾಧಿಕಾರಿ ವಶಪಡಿಸಿಕೊಂಡ ಮತ್ತು ಆರೋಪಪಟ್ಟಿಯೊಂದಿಗೆ ಸಲ್ಲಿಸಲಾದ ಹಲವು ಪ್ರಮುಖ ದಾಖಲೆಗಳು ಕಾಣೆಯಾಗಿವೆ ಇಲ್ಲವೇ ಅವುಗಳನ್ನು ತಿರುಚಲಾಗಿದೆ ಎಂಬುದನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಗಮನಿಸಿದ್ದರು.

ಅಪರಾಧದಲ್ಲಿ ತಾವು ಭಾಗಿಯಾಗಿರುವುದನ್ನು ಸಾಬೀತುಪಡಿಸುವ ನಿರ್ಣಾಯಕ ದಾಖಲೆಗಳನ್ನು ಅನ್ಸಲ್ ಸಹೋದರರು ಇತರ ಆರೋಪಿಗಳೊಂದಿಗೆ ಪಿತೂರಿ ನಡೆಸಿ ನಾಶಪಡಿಸಿದ್ದಾರೆ ಎಂದು ನ್ಯಾಯಾಲಯ ಅಂತಿಮವಾಗಿ ತೀರ್ಮಾನಿಸಿತು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120B ಬಿ (ಕ್ರಿಮಿನಲ್ ಪಿತೂರಿ), 409 (ಸಾರ್ವಜನಿಕ ಸೇವಕರಿಂದ ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಮತ್ತು 201ರ (ಸಾಕ್ಷ್ಯ ಕಣ್ಮರೆಯಾಗಲು ಕಾರಣ) ಅಡಿಯಲ್ಲಿ ಅಪರಾಧಿಗಳಿಗೆ ಅಂತಿಮವಾಗಿ ಶಿಕ್ಷೆ ವಿಧಿಸಲಾಯಿತು. ಅನ್ಸಾಲ್ ಸಹೋದರರ ಅಪರಾಧ ನರಹತ್ಯೆಯಾಗಿದ್ದು ಕೊಲೆಗೆ ಸಮನಲ್ಲದ ದುರಂತ ಎಂದು ಸುಪ್ರೀಂಕೋರ್ಟ್‌ 2015 ರಲ್ಲಿ ತಿಳಿಸಿತ್ತು. ಈಗಾಗಲೇ ಅವರು ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿದ್ದು ರೂ. 30 ಕೋಟಿ ದಂಡ ವಿಧಿಸಲಾಗಿತ್ತು.

ನಂತರ ಮರುಪರಿಶೀಲನಾ ಅರ್ಜಿಯಲ್ಲಿ, ಸುಪ್ರೀಂ ಕೋರ್ಟ್ ಗೋಪಾಲ್ ಅನ್ಸಾಲ್ ಅವರನ್ನು ಒಂದು ವರ್ಷದವರೆಗೆ ಜೈಲಿಗೆ ಕಳುಹಿಸಲು ನಿರ್ಧರಿಸಿತು. ಆದರೆ ವಯಸ್ಸನ್ನು ಪರಿಗಣಿಸಿ ಸುಶೀಲ್‌ಗೆ ವಿನಾಯಿತಿ ನೀಡಿತ್ತು.