ದೆಹಲಿಯ ರಾಜೇಂದ್ರ ನಗರದಲ್ಲಿರುವ ಕೋಚಿಂಗ್ ಕೇಂದ್ರವೊಂದಕ್ಕೆ ಮಳೆ ನೀರು ನುಗ್ಗಿ ಮೂವರು ಯುಪಿಎಸ್‌ಸಿ ಆಕಾಂಕ್ಷಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ರಾಷ್ಟ್ರ ರಾಜಧಾನಿಯ ಕಟ್ಟಡಗಳು ಮತ್ತು ಕೋಚಿಂಗ್ ಸಂಸ್ಥೆಗಳು ಪಾಲಿಸುತ್ತಿರುವ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸೋಮವಾರ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿದೆ.
ಈ ರೀತಿಯ ಕೋಚಿಂಗ್ ಸಂಸ್ಥೆಗಳು ನಿಯಮ ಉಲ್ಲಂಘಿಸಿ ಕಾರ್ಯ ನಿರ್ವಹಿಸುತ್ತಿದ್ದು ಮೃತ್ಯುಕೂಪಗಳಾಗಿ ಮಾರ್ಪಟ್ಟಿವೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಆಕ್ರೋಶ ವ್ಯಕ್ತಪಡಿಸಿತು.
ಇದೇ ವೇಳೆ ನ್ಯಾಯಾಲಯವು, ದೆಹಲಿಯ ಕೋಚಿಂಗ್ ಸೆಂಟರ್‌ಗಳ ಕಾರ್ಯನಿರ್ವಹಣೆ ಸಂಬಂಧ ತೆಗೆದುಕೊಂಡಿರುವ ಸುರಕ್ಷತಾ ಮಾನದಂಡಗಳ ಮಾರ್ಗಸೂಚಿಗಳನ್ನು ಬಹಿರಂಗಪಡಿಸುವಂತೆ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತು. ಈ ಕೋಚಿಂಗ್ ಕೇಂದ್ರಗಳು ಮೃತ್ಯು ಕೂಪಗಳಾಗಿದ್ದು ದೇಶದ ವಿವಿಧ ಭಾಗಗಳಿಂದ ಬರುವ ಯುವಕರ ಪ್ರಾಣ ಕಸಿದುಕೊಳ್ಳುತ್ತಿವೆ ಎಂದು ಮೌಖಿಕವಾಗಿ ಟೀಕಿಸಿತು.
ದೆಹಲಿಯ ಮಾಸ್ಟರ್ ಪ್ಲಾನ್, 2021 ಮತ್ತು ದೆಹಲಿ ಯೂನಿಫೈಡ್ ಬಿಲ್ಡಿಂಗ್ ಬೈ ಲಾ 2016ರ ಪ್ರಕಾರ ಸುರಕ್ಷತಾ ಮಾನದಂಡಗಳ ಸಂಪೂರ್ಣ ಪಾಲನೆಯಾಗುವವರೆಗೆ ಅಂತಹ ಸಂಸ್ಥೆಗಳು ಆನ್‌ಲೈನ್ ತರಗತಿ ನಡೆಸಬೇಕು ಎಂದು ನ್ಯಾಯಾಲಯ ತಾಕೀತು ಮಾಡಿದೆ.
ಸೂಕ್ತ ಗಾಳಿ ಬೆಳಕು ಸೇರಿದಂತೆ ಮೂಲಭೂತ ಮಾನದಂಡಗಳನ್ನು ಇಂತಹ ಸಂಸ್ಥೆಗಳು ಪಾಲಿಸಲೇಬೇಕಿದ್ದು ಇಲ್ಲಿಯವರೆಗೆ ಯಾವ ಸುರಕ್ಷತಾ ಮಾನದಂಡಗಳನ್ನು ನಿಗದಿಪಡಿಸಲಾಗಿದೆ ಮತ್ತು ಅವುಗಳ ಪಾಲನೆ ಹೇಗೆ ನಡೆಯುತ್ತಿದೆ ಎಂಬ ಕುರಿತು ಕೇಂದ್ರ ಹಾಗೂ ದೆಹಲಿ ಸರ್ಕಾರಗಳು ವಿವರಿಸುವಂತೆ ಅದು ನೋಟಿಸ್ ನೀಡಿದೆ.
ಆ ಮೂಲಕ, ಅಗ್ನಿಶಾಮಕ ಮತ್ತು ಸುರಕ್ಷತಾ ಮಾನದಂಡಗಳನ್ನುಪಾಲಿಸಲು ವಿಫಲವಾದ ದೆಹಲಿಯ ಮುಖರ್ಜಿ ನಗರ ಪ್ರದೇಶದಲ್ಲಿ ವ್ಯಾಪಕವಾಗಿ ಹೆಚ್ಚಿರುವ ಕೋಚಿಂಗ್ ಸಂಸ್ಥೆಗಳ ಕಾರ್ಯನಿರ್ವಹಣೆ ಕುರಿತು ದೆಹಲಿ ಹೈಕೋರ್ಟ್ ನೀಡಿದ್ದ ನಿರ್ದೇಶನ ಪ್ರಶ್ನಿಸಿ ಭಾರತೀಯ ಕೋಚಿಂಗ್ ಒಕ್ಕೂಟ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಾಲಯ ಒಕ್ಕೂಟಕ್ಕೆ ₹ 1 ಲಕ್ಷ ದಂಡ ವಿಧಿಸಿತು.ಹಣವನ್ನು ಸುಪ್ರೀಂ ಕೋರ್ಟ್ ವಕೀಲರ ಸಂಘ ಮತ್ತು ಸುಪ್ರೀಂ ಕೋರ್ಟ್ ಅಡ್ವೊಕೇಟ್ ಆನ್ ರೆಕಾರ್ಡ್ ಸಂಘದ ಹೆಸರಿನಲ್ಲಿ ಠೇವಣಿ ಇರಿಸುವಂತೆ ಅದು ಸೂಚಿಸಿದೆ.
ಈಚೆಗೆ ಸುರಿದ ಭಾರೀ ಮಳೆಗೆ ರಾಜೇಂದ್ರ ನಗರದ ʼರಾವ್ಸ್ ಐಎಎಸ್ ಸ್ಟಡಿ ಸರ್ಕಲ್ʼ ಕೋಚಿಂಗ್ ಕೇಂದ್ರದ ನೆಲಮಾಳಿಯ ಗ್ರಂಥಾಲಯಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿತ್ತು. ಘಟನೆಯಲ್ಲಿ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳಾದ ತೆಲಂಗಾಣದ ತಾನಿಯಾ ಸೋನಿ (25 ವರ್ಷ), ಉತ್ತರಪ್ರದೇಶದ ಶ್ರೇಯಾ ಯಾದವ್ (25) ಮತ್ತು ಕೇರಳದ ನವೀನ್ ಡೆಲ್ವಿನ್ (28) ಮೃತಪಟ್ಟಿದ್ದರು.
ಇದೇ ಘಟನೆ ಕುರಿತಂತೆ ದೆಹಲಿ ಹೈಕೋರ್ಟ್ ಈಗಾಗಲೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿದ್ದು ದೆಹಲಿಯ ಆಡಳಿತಾತ್ಮಕ, ಭೌತಿಕ, ಆರ್ಥಿಕ ಮೂಲಸೌಕರ್ಯ ಪರಿಶೀಲನೆ ಹಾಗೂ ಸುಧಾರಣೆ ಕುರಿತಂತೆ ಸಮಿತಿ ರಚಿಸುವುದರ ಜೊತೆಗೆ ಘಟನೆಯ ಸಿಬಿಐ ತನಿಖೆಗೆ ಈ ಹಿಂದೆ ಆದೇಶಿಸಿತ್ತು.