Media Vans
Media Vans 
ಸುದ್ದಿಗಳು

ಯುಪಿಎಸ್‌ಸಿ ಜಿಹಾದ್ ವಿವಾದ: ಟಿವಿ ಚಾನೆಲ್‌ಗಳಿ‌ಗೂ ಮುನ್ನ ಡಿಜಿಟಲ್ ಮಾಧ್ಯಮ ನಿಯಂತ್ರಣ ಅನಿವಾರ್ಯ ಎಂದ ಕೇಂದ್ರ ಸರ್ಕಾರ

Bar & Bench

ಯಾವುದೇ ತೆರನಾದ ನಿಯಂತ್ರಣ ಪ್ರಕ್ರಿಯೆಯು ಟಿವಿ ಚಾನೆಲ್ ಅಥವಾ ಕಾರ್ಯಕ್ರಮದ ಕಂತುಗಳಿಗಿಂತ ಮುಂಚಿತವಾಗಿ "ಅನಿಯಂತ್ರಿತ"ವಾದ ಡಿಜಿಟಲ್ ಮಾಧ್ಯಮದಿಂದ ಆರಂಭವಾಗಬೇಕಾದ ಅನಿವಾರ್ಯತೆ ಇದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.

ವಿವಾದಿತ ಸುದರ್ಶನ್ ಟಿವಿಯ “ಯುಪಿಎಸ್‌ಸಿ ಜಿಹಾದ್” ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರವು ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳ ನಿಯಂತ್ರಣ ಆರಂಭಿಸಿದರೆ ಅವುಗಳು ತಮ್ಮ ಬರಹಗಳನ್ನು ಡಿಜಿಟಲ್ ಮಾಧ್ಯಮದಲ್ಲಿ ಪ್ರಸಾರ ಮಾಡುವ ಸಾಧ್ಯತೆ ಇರುತ್ತದೆ ಎಂದು ಹೇಳಿದೆ.

“ಗೌರವಾನ್ವಿತ ನ್ಯಾಯಾಲಯವು ನಿರ್ದಿಷ್ಟ ಮಾನದಂಡಗಳು ಅಥವಾ ಪರಿಹಾರ ವಿಧಾನಗಳ ಮೂಲಕ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ನಿಯಂತ್ರಣಕ್ಕೆ ಮುಂದಾದರೆ ಸದರಿ ಪ್ರಸಾರಕರು ವಿದ್ಯುನ್ಮಾನ ಮಾಧ್ಯಮಗಳ ಬಳಕೆ ಕಡಿಮೆ ಮಾಡಿ ಯಾವುದೇ ನಿಯಂತ್ರಣಗಳ ಬಾಧ್ಯತೆ ಹೊಂದಿಲ್ಲದ ವ್ಯಾಪಕವಾದ ಪ್ರಸಾರ ವ್ಯಾಪ್ತಿ ಹೊಂದಿರುವ ಡಿಜಿಟಲ್ ಮಾಧ್ಯಮಗಳ ಮೂಲಕ ವಿಚಾರಗಳನ್ನು ಪ್ರಸಾರ/ಪ್ರಕಟ ಮಾಡಬಹುದು.”
ಕೇಂದ್ರ ಸರ್ಕಾರದ ಅಫಿಡವಿಟ್

ಅನಿಯಂತ್ರಿತವಾದ ವೆಬ್ ಮ್ಯಾಗಜೀನ್, ವೆಬ್ ಆಧಾರಿತ ಸುದ್ದಿ ಚಾನೆಲ್‌ಗಳು, ಪತ್ರಿಕೆಗಳನ್ನು ಒಳಗೊಂಡ ವೆಬ್ ಆಧಾರಿತ ಡಿಜಿಟಲ್ ಮಾಧ್ಯಮದ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ಸಾರ್ವಜನಿಕ ಸಂಪತ್ತಾದ ತರಂಗಾಂತರ (ಸ್ಪೆಕ್ಟ್ರಂ) ಮತ್ತು ಇಂಟರ್‌ನೆಟ್ ಅನ್ನು ಡಿಜಿಟಲ್ ಮಾಧ್ಯಮ ಬಳಸುತ್ತಿವೆ ಎಂದಿರುವ ಕೇಂದ್ರ ಸರ್ಕಾರವು ಹೀಗೆ ಹೇಳಿದೆ.

“ವ್ಯಾಪಕವಾದ ವ್ಯಾಪ್ತಿ ಮತ್ತು ಅಗಾಧ ಪ್ರಭಾವ ಹೊಂದಿರುವ ಪರ್ಯಾಯ ಮಾಧ್ಯಮ ಇಂದು ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕ ಸಂಪತ್ತಾದ ಏರ್ ವೇವ್ಸ್ ಅನ್ನು‌ ವಿದ್ಯುನ್ಮಾನ ಮಾಧ್ಯಮಗಳು ಹೇಗೆ ಬಳಕೆ ಮಾಡಿಕೊಳ್ಳುತ್ತಿವೆಯೋ ಹಾಗೆ ತರಂಗಾಂತರ (ಸ್ಪೆಕ್ಟ್ರಂ) ಮತ್ತು ಇಂಟರ್‌ನೆಟ್ ಅನ್ನು ಡಿಜಿಟಲ್ ಮಾಧ್ಯಮಗಳು ಬಳಕೆ ಮಾಡಿಕೊಳ್ಳುತ್ತಿವೆ. ಅಸಂಖ್ಯಾತ ಡಿಜಿಟಲ್ ವೆಬ್ ಪೋರ್ಟಲ್ ಗಳು, ವೆಬ್ ಮ್ಯಾಗಜೀನ್ ಮತ್ತು ಯೂಟ್ಯೂಬ್ ಚಾನೆಲ್‌ಗಳು ವೆಬ್ ಆಧಾರಿತ ಡಿಜಿಟಲ್ ಮಾಧ್ಯಮದಲ್ಲಿ ಸೇರಿವೆ.”
ಕೇಂದ್ರ ಸರ್ಕಾರದ ಅಫಿಡವಿಟ್

ವೆಬ್ ಮ್ಯಾಗಜೀನ್, ವೆಬ್ ಆಧಾರಿತ ಪೋರ್ಟಲ್‌ಗಳು, ವೆಬ್ ಆಧಾರಿತ ಪತ್ರಿಕೆ ಅಥವಾ ವೆಬ್ ಆಧಾರಿತ ಚಾನೆಲ್ ತೆರೆಯಲು ಯಾವುದೇ ತೆರನಾದ ನಿಗದಿ ಮಾನದಂಡ ಅಥವಾ ಅರ್ಹತೆಯ ಅಗತ್ಯವಿಲ್ಲ. “ಮಾಹಿತಿ ಮತ್ತು ತಂತ್ರಜ್ಞಾನ ಕಾಯಿದೆ ಅಡಿ ಕೆಲವು ನಿಬಂಧನೆಗಳನ್ನು ಹೊರತುಪಡಿಸಿ ಡಿಜಿಟಲ್ ಮಾಧ್ಯಮಗಳ ನೋಂದಣಿ ಅಥವಾ ಅವುಗಳ ಕಾರ್ಯವೈಖರಿಯ ಮೇಲೆ ನಿಗಾ ಇಡಲು ಯಾವುದೇ ತೆರನಾದ ಶಾಸನಬದ್ಧ ನಿಬಂಧನೆಗಳಿಲ್ಲ” ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ವಿಚಾರದಲ್ಲಿ ಅವುಗಳ ನೋಂದಣಿ ಅಥವಾ ಅವುಗಳಿಗೆ ಪರವಾನಗಿ ನೀಡುವ ಸಂದರ್ಭದಲ್ಲಿ ದೇಶದ ಭದ್ರತೆಯ ಬಗ್ಗೆ ಗಮನಕೇಂದ್ರೀಕರಿಸಲಾಗಿರುತ್ತದೆ ಎಂದೂ ಕೇಂದ್ರ ಸರ್ಕಾರ ಹೇಳಿದೆ.

“ವೆಬ್ ಆಧಾರಿತ ಡಿಜಿಟಲ್ ಮಾಧ್ಯಮಗಳ ಮೇಲೆ ಯಾವುದೇ ತೆರನಾದ ಕಣ್ಗಾವಲು ಇಲ್ಲ. ಇವುಗಳು ವಿಷಪೂರಿತವಾದ ದ್ವೇಷ ಹರಡುವುದು, ಗಲಭೆ, ಭಯೋತ್ಪಾದನೆಗೆ ಉದ್ದೇಶಪೂರ್ವಕವಾದ ಪ್ರಚೋದನೆ ಹಾಗೂ ವ್ಯಕ್ತಿ ಮತ್ತು ಸಂಸ್ಥೆಗಳ ವರ್ಚಸ್ಸು ಹಾಳುವ ಶಕ್ತಿಯನ್ನು ಹೊಂದಿವೆ. ಇದೆಲ್ಲವೂ ವ್ಯಾಪಕವಾಗಿ ನಡೆಯುತ್ತಿದೆ.”
ಕೇಂದ್ರ ಸರ್ಕಾರದ ಅಫಿಡವಿಟ್

ಕಳೆದ ಬಾರಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಇಂದೂ ಮಲ್ಹೋತ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಸುದ್ದಿಗಳ ಮೇಲೆ ನಿಯಂತ್ರಣ ಹೇರುವ ಸಂಬಂಧ ಸುದ್ದಿ ಪ್ರಸರಣ ಸಂಸ್ಥೆಗೆ ಶಕ್ತಿ ತುಂಬುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿತ್ತು.