ಅವಧಿ ಮುಗಿದು ಚುನಾವಣೆ ನಡೆಸಬೇಕಾಗಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗದಿ ಸೇರಿದಂತೆ ಚುನಾವಣೆ ನಡೆಸಲು ಸರ್ಕಾರ ಕೈಗೊಳ್ಳುವ ಕ್ರಮಗಳನ್ನು ಪ್ರತಿ ವಾರದ ಆಧಾರದಲ್ಲಿ ಮೇಲ್ವಿಚಾರಣೆ ನಡೆಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಹೇಳಿದೆ.
ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲು ವಿಳಂಬವಾದ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ ಅವಧಿಯನ್ನು ತಮ್ಮ ಐದು ವರ್ಷದ ಅಧಿಕಾರವಧಿಗೆ ಪರಿಗಣಿಸಬಾರದು ಹಾಗೂ ಈಗ ಅವಧಿ ಮುಗಿದ ಕಾರಣ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ರಾಜ್ಯದ 70ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ಈ ವೇಳೆ ಚುನಾವಣೆ ನಡೆಸುವ ಪ್ರಕ್ರಿಯೆ ಎಲ್ಲಿಗೆ ಬಂತು” ಎಂದು ಸರ್ಕಾರದ ಪರ ವಕೀಲರನ್ನು ಪೀಠ ಕೇಳಿತು. ಅದಕ್ಕೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು “ಕೆಲವು ನಗರ ಸ್ಥಳೀಯ ಸಂಸ್ಥೆಗಳಿಗೆ ವಾರ್ಡ್ ಮರುವಿಂಗಡಣೆ ಮಾಡಬೇಕಿತ್ತು. ಆ ಪ್ರಕ್ರಿಯೆ ಮುಗಿಸಲಾಗಿದೆ. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿಯ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಆಕ್ಷೇಪಣೆಗೆ ಕಾಲಾವಕಾಶ ನೀಡಿದ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಿ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು. ಮುಂದೆ ಆಗಲಿರುವ ಪ್ರಗತಿ ಬಗ್ಗೆ ವಿವರಣೆ ನೀಡಲು 10 ದಿನ ಕಾಲಾವಕಾಶ ನೀಡಬೇಕು” ಎಂದು ಕೋರಿದರು.
ಇದನ್ನು ದಾಖಲಿಸಿಕೊಂಡ ಪೀಠವು “ಚುನಾವಣೆ ನಡೆಸುವ ವಿಚಾರದಲ್ಲಿ ಸರ್ಕಾರ ಕೈಗೊಳ್ಳುವ ಕ್ರಮಗಳನ್ನು ಪ್ರತಿವಾರದ ಆಧಾರದಲ್ಲಿ ಮೇಲ್ವಿಚಾರಣೆ ನಡೆಸಲಾಗುವುದು. ಐದು ವರ್ಷದ ಅವಧಿ ಮುಗಿಸಿರುವ ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿದಿದೆ. ಹೀಗಾಗಿ, ಯಾವುದೇ ಹಕ್ಕು ಪ್ರತಿಪಾದಿಸಲು ಅವರಿಗೆ ಹೆಚ್ಚು ಅವಕಾಶ ಇಲ್ಲವಾಗಿದೆ. ಆದರೆ, ಐದು ವರ್ಷದ ಅವಧಿ ನಿಗದಿ, ಮೀಸಲಾತಿ ವಿಳಂಬ, ಆಡಳಿತಾಧಿಕಾರಿಗಳ ನೇಮಕ ಸೇರಿದಂತೆ ಅರ್ಜಿದಾರರು ಎತ್ತಿರುವ ಕಾನೂನು ಪ್ರಶ್ನೆಗಳ ಬಗ್ಗೆ ಅವುಗಳ ಅರ್ಹತೆ ಆಧಾರದಲ್ಲಿ ವಿಚಾರಣೆ ಮುಂದುವರಿಸಲಾಗುವುದು. ಸರ್ಕಾರ 10 ದಿನಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸಬೇಕು. ಅರ್ಜಿದಾರರು ತಮ್ಮ ಆಕ್ಷೇಪಣೆಗಳನ್ನು ಲಿಖಿತವಾಗಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಿತು.