Supreme Court and Urdu Text  
ಸುದ್ದಿಗಳು

ಉರ್ದು ಭಾರತದಲ್ಲಿ ಹುಟ್ಟಿದ್ದು ಯಾವುದೇ ಧರ್ಮದೊಂದಿಗೆ ಅದನ್ನು ತಳಕು ಹಾಕುವ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್

ಉರ್ದು ಜನರ ಭಾಷೆಯಾಗಿದ್ದು, ಯಾವುದೇ ಧರ್ಮಕ್ಕೆ ಸಂಬಂಧಿಸಿಲ್ಲ ಮತ್ತು ಮರಾಠಿ ಜೊತೆಗೆ ಅದನ್ನು ಬಳಸುವುದಕ್ಕೆ ಯಾವುದೇ ಕಾನೂನು ನಿರ್ಬಂಧವಿಲ್ಲ ಎಂದು ನ್ಯಾಯಾಲಯ ಹೇಳಿದೆ.

Bar & Bench

ಮಹಾರಾಷ್ಟ್ರದ ಪುರಸಭೆಯ ನಾಮಫಲಕದಲ್ಲಿ ಉರ್ದು ಬಳಸಿರುವುದನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ [ಶ್ರೀಮತಿ ವರ್ಷತಾಯಿ ಶ್ರೀ ಸಂಜಯ್ ಬಗಾಡೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಸಂವಿಧಾನದ ಅಡಿಯಲ್ಲಿ ಉರ್ದು ಮತ್ತು ಮರಾಠಿ ಭಾಷೆಗಳಿಗೆ ಸಮಾನ ಸ್ಥಾನಮಾನವಿದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ , ಮರಾಠಿ ಮಾತ್ರ ಬಳಸಬೇಕು ಎಂಬ ವಾದವನ್ನು ತಿರಸ್ಕರಿಸಿತು.

ಆ ಮೂಲಕ ಪಾತೂರು ಪುರಸಭೆಯ ನಾಮಫಲಕದಲ್ಲಿ ಉರ್ದು ಭಾಷೆ ಬಳಸುವುದನ್ನು ಪ್ರಶ್ನಿಸಿ ಪಾತೂರು ಪಟ್ಟಣದ ಮಾಜಿ ಕೌನ್ಸಿಲರ್ ವರ್ಷತಾಯಿ ಸಂಜಯ್ ಬಗಾಡೆ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು.

ಬಗಾಡೆ ಅವರ ಮನವಿಯನ್ನು 2020ರಲ್ಲಿ ಸ್ಥಳೀಯಾಡಳಿತ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಅಲ್ಲಿಯೂ ಮನವಿ ತಿರಸ್ಕೃತವಾಗಿದ್ದರಿಂದ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

ನ್ಯಾಯಾಲಯ ಅವಲೋಕನದ ಪ್ರಮುಖಾಂಶಗಳು

  • ಉರ್ದು ಭಾರತೀಯ ಮೂಲದ್ದಾಗಿದ್ದರೂ ಮುಸ್ಲಿಮರೊಂದಿಗೆ ತಳಕು ಹಾಕಿರುವುದು ವಾಸ್ತವಕ್ಕೆ ದೂರವಾದ ಸಂಗತಿ.

  • ಹಿಂದಿ ಮತ್ತು ಉರ್ದುವಿನ ಮೇಳೈಸುವಿಕೆಯು ಈ ಎರಡೂ ಭಾಷೆಗಳಲ್ಲಿರುವ ಸಂಪ್ರದಾಯವಾದಿ ಮನಸ್ಥಿತಿಯವರಿಂದಾಗಿ ಮುಂದುವರೆಯಲಿಲ್ಲ. ಇದರಿಂದಾಗಿ ಹಿಂದಿಯು ಹೆಚ್ಚು ಸಂಸ್ಕೃತೀಕರಣಗೊಂಡರೆ, ಉರ್ದು ಹೆಚ್ಚು ಪರ್ಶಿಯನೀಕರಣಗೊಂಡಿತು.

  • ಹಿಂದಿಯನ್ನು ಹಿಂದೂಗಳೊಂದಿಗೆ; ಉರ್ದುವನ್ನು ಮುಸ್ಲಿಮರೊಂದಿಗೆ ನಂಟು ಕಲ್ಪಿಸಿರುವುದು ವಸಾಹತುಶಾಹಿ ಶಕ್ತಿಗಳು.

  • ಈ ರೀತಿಯ ವಿಷಾದನೀಯ ಭೇದ ವಾಸ್ತವಿಕತೆಯಿಂದ, ವಿವಿಧತೆಯಲ್ಲಿ ಏಕತೆಯಿಂದ ಹಾಗೂ ವಿಶ್ವ ಭ್ರಾತೃತ್ವದಿಂದ ವಿಮುಖಗೊಳಿಸಿದೆ.

  •  ಉರ್ದು ವಿದೇಶದ ಭಾಷೆಯಲ್ಲ. ಬದಲಿಗೆ ಅದರ ಬೇರುಗಳು ಭಾರತದಲ್ಲಿದ್ದು ಯಾವುದೇ ನಿರ್ದಿಷ್ಟ ಧರ್ಮಕ್ಕೆ ಅದು ಸಂಬಂಧಿಸಿಲ್ಲ.

  • ಉರ್ದು ಭಾಷೆ ಭಾರತಕ್ಕೆ ಅನ್ಯವಾಗಿದೆ ಎಂಬ ತಪ್ಪು ಕಲ್ಪನೆಯಿಂದ ಉರ್ದು ವಿರುದ್ಧದ ಪೂರ್ವಾಗ್ರಹ ಹುಟ್ಟಿಕೊಂಡಿದೆ. ಮರಾಠಿ ಮತ್ತು ಹಿಂದಿಯಂತೆ ಉರ್ದು ಕೂಡ ಇಂಡೋ-ಆರ್ಯನ್ ಭಾಷೆಯಾಗಿರುವುದರಿಂದ ನಾವು ಭಯಪಡುತ್ತಿರುವ ಈ ಅಭಿಪ್ರಾಯ ತಪ್ಪು.

  • ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ತಮ್ಮೊಳಗೆ ಸಂವಹನ ನಡೆಸಲು ಬಯಸುವ ವಿಭಿನ್ನ ಸಾಂಸ್ಕೃತಿಕ ಪರಿಸರಕ್ಕೆ ಸೇರಿದ ಜನರ ಅಗತ್ಯದಿಂದಾಗಿ ಉರ್ದು ಭಾರತದಲ್ಲಿ ಅಭಿವೃದ್ಧಿ ಹೊಂದಿತು ಮತ್ತು ಪ್ರವರ್ಧಮಾನಕ್ಕೆ ಬಂದಿತು.

  • ಶತಮಾನಗಳ ಕಾಲ ಬೆಳೆಯುತ್ತ ಬಂದ ಇದು ಅನೇಕ ಕವಿಗಳ ನೆಚ್ಚಿನ ಭಾಷೆಯಾಯಿತು.

  • ಸಂವಿಧಾನದ VIIIನೇ ಪರಿಚ್ಛೇದದಡಿ ಮರಾಠಿ ಮತ್ತು ಉರ್ದು ಸಮಾನ ಸ್ಥಾನಮಾನ ಹೊಂದಿವೆ.

  • ಅರ್ಜಿಯನ್ನು ಕೌನ್ಸಿಲರ್ ಸಲ್ಲಿಸಿದ್ದಾರೆಯೇ ಹೊರತು ಮಹಾರಾಷ್ಟ್ರ ಮುನ್ಸಿಪಲ್ ಕೌನ್ಸಿಲ್ ಕಾಯ್ದೆಯಡಿಯಲ್ಲಿ ಆಕ್ಷೇಪಿಸಲು ಕಾನೂನುಬದ್ಧ ಅಧಿಕಾರ ಇರುವ ಮುಖ್ಯ ಅಧಿಕಾರಿಯಲ್ಲ.

  • ಉರ್ದು ಭಾಷೆಯಲ್ಲಿ ಫಲಕಗಳನ್ನು ಹಾಕುವುದು ರಾಜಕೀಯ ಅಥವಾ ಧರ್ಮದ ವಿಷಯವಲ್ಲ, ಬದಲಾಗಿ ಸಾರ್ವಜನಿಕ ಸಂವಹನ ಮತ್ತು ಪ್ರವೇಶಾತಿ ವಿಚಾರವಾಗಿದೆ.

  • ಭಾಷೆ ಧರ್ಮವನ್ನು ಪ್ರತಿನಿಧಿಸುವುದಿಲ್ಲ; ಬದಲಾಗಿ ಅದು ಒಂದು ಸಮುದಾಯ, ಪ್ರದೇಶ ಅಥವಾ ಜನರಿಗೆ ಸೇರಿದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.

  • ಭಾರತೀಯ ಕಾನೂನು ಕ್ಷೇತ್ರ ಮತ್ತು ನ್ಯಾಯಾಲಯದ ಭಾಷೆಯಲ್ಲಿಯೂ ಉರ್ದು ಪ್ರಭಾವ ದೊಡ್ಡದು.

  • ಫಲಕಗಳಲ್ಲಿ ಉರ್ದುವಿನ ಅಸ್ತಿತ್ವ ಶಾಸನಬದ್ಧ ಇಲ್ಲವೇ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸುವುದಿಲ್ಲ.

  • ಭಾರತದ ಭಾಷಾ ವೈವಿಧ್ಯದ ಜೊತೆಗೆ ಪ್ರಾಮಾಣಿಕವಾಗಿ ತೊಡಗಿಕೊಳ್ಳುವುದರೊಂದಿಗೆ ಭಾಷೆಗಳ ವಿರುದ್ಧದ ವೈಯಕ್ತಿಕ ತಪ್ಪು ಕಲ್ಪನೆಗಳು ಅಥವಾ ಪೂರ್ವಾಗ್ರಹಗಳನ್ನು ಎದುರಿಸುವ ಮತ್ತು ಮರುಮೌಲ್ಯಮಾಪನ ಮಾಡುವ ಅಗತ್ಯವಿದೆ.