Gujarat High Court  
ಸುದ್ದಿಗಳು

ಗಿರಿದೇಗುಲ ಯಾತ್ರಿಕರು ಕೈಗಳಿಂದಲೇ ನೀರು ಕುಡಿಯುವಂತೆ ಪ್ರೇರೇಪಿಸಿ, ಪ್ಲಾಸ್ಟಿಕ್ ಬಾಟಲಿ ತಪ್ಪಿಸಿ: ಗುಜರಾತ್ ಹೈಕೋರ್ಟ್

ಗಿರ್ನಾರ್ ಗಿರಿ ಪ್ರದೇಶದ ದೇವಾಲಯಗಳ ಸುತ್ತ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮಾಡದ ಬಗ್ಗೆ ವಕೀಲ ಅಮಿತ್ ಪಾಂಚಾಲ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Bar & Bench

ಗಿರ್ನಾರ್ ಗಿರಿಧಾಮದ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರು ತಮ್ಮ ಕೈಗಳಿಂದ ನೀರು ಕುಡಿಯಲು ಮತ್ತು ಪ್ಲಾಸ್ಟಿಕ್ ಬಾಟಲಿ ಇನ್ನಿತರ ಬಿಸಾಡುವ ವಸ್ತುಗಳನ್ನು ಬಳಸದಂತೆ ಪ್ರೇರೇಪಿಸಬೇಕು ಎಂದು ಗುಜರಾತ್ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ [ಅಮಿತ್ ಪಂಚಾಲ್ ಮತ್ತು ಗುಜರಾತ್ ಸರ್ಕಾರ ನಡುವಣ ಪ್ರಕರಣ].

ಗಿರ್ನಾರ್ ಗಿರಿ ಪ್ರದೇಶದ ದೇವಾಲಯಗಳ ಸುತ್ತ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮಾಡದ ಬಗ್ಗೆ ವಕೀಲ ಅಮಿತ್ ಪಾಂಚಾಲ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ ವಾಲ್ ಮತ್ತು ನ್ಯಾಯಮೂರ್ತಿ ಅನಿರುದ್ಧ ಮಯೀ ಅವರಿದ್ದ ಪೀಠ ವಿಚಾರಣೆ ನಡೆಸಿತು.

ದೇವಸ್ಥಾನದ ಸುತ್ತ ಕಸ ಬಿದ್ದಿರುವುದಕ್ಕೆ ಬಳಸಿ ಬಿಸಾಡುವ ವಸ್ತುಗಳು ಮತ್ತು ಪ್ಲಾಸ್ಟಿಕ್ ಬಾಟಲಿ ಕೂಡ ಕಾರಣ ಎಂದು ಪೀಠ ಅಭಿಪ್ರಾಯಪಟ್ಟಿದೆ.  "ಪ್ಲಾಸ್ಟಿಕ್ ಬಾಟಲಿಗೆ ಪರ್ಯಾಯವೇನು? ಜನ ನೀರು ಕುಡಿಯಲೇಬಾರದು ಅಥವಾ ಅವರು ನೀರು ಕೊಂಡೊಯ್ಯಬಾರದು ಇಲ್ಲವೇ ನೀರನ್ನು ಮಾರಾಟ ಮಾಡಬಾರದು ಎಂದು ನಾವು ಹೇಳುತ್ತಿಲ್ಲ. ಆದರೆ ಇದಕ್ಕೊಂದು ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ. ಅಲ್ಲಿ ಜನ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆಯಲು ನಾವು ಬಿಡಲಾಗದು” ಎಂದು ಅದು ನುಡಿಯಿತು.

“ದೇವಸ್ಥಾನದ ಸಮೀಪ ರಸ್ತೆಯಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದರೆ ಪ್ಲಾಸ್ಟಿಕ್ ಬಾಟಲಿಗಳ ಬಳಕೆ ತಪ್ಪುತ್ತದೆ. ಮೊದಲೆಲ್ಲಾ ದೇವಸ್ಥಾನಗಳಲ್ಲಿ ಕೂಡ ನೀರನ್ನು ಕೈಯಿಂದಲೇ ಕುಡಿಯುತ್ತಿದ್ದೆವು, ಪ್ಲಾಸ್ಟಿಕ್ ಮತ್ತಿತರ ಲೋಟಗಳನ್ನು ಬಳಸುವುದಕ್ಕಿಂತಲೂ ಕೈಗಳನ್ನು ಬಳಸುವುದು ಉತ್ತಮ ಎಂದು ಈಗ ವೈದ್ಯರು ಹೇಳುತ್ತಿದ್ದಾರೆ” ಎಂದು ಪೀಠ ಸಲಹೆ ನೀಡಿತು.

ಅಲ್ಲದೆ ಈ ಪ್ರದೇಶಗಳಲ್ಲಿ ಬಿಸಾಡಬಹುದಾದ ಮತ್ತು ತಿನ್ನಬಹುದಾದ ವಸ್ತುಗಳಿಗೆ ಸರ್ಕಾರ ಸಂಪೂರ್ಣ ನಿಷೇಧ ವಿಧಿಸಬೇಕು ಎಂದು ಪೀಠ ಹೇಳಿದೆ. ಗಿರಿಧಾಮಗಳಲ್ಲಿ ಪ್ಲಾಸ್ಟಿಕ್ ಪರ್ಯಾಯ ವಸ್ತುಗಳನ್ನು ರೂಪಿಸಬೇಕು. ಯಾತ್ರಿಕರು ಕಸ ಎಸೆಯದಂತೆ ತಡೆಯಲು ಸ್ವಯಂ ಸೇವಕರನ್ನು ನೇಮಿಸುವುದನ್ನು ಸರ್ಕಾರ ಪರಿಗಣಿಸಬಹುದು ಎಂದು ಅದು ಸರ್ಕಾರಕ್ಕೆ ಆದೇಶಿಸಿದೆ. ದೀಪಾವಳಿ ರಜೆ ಬಳಿಕ ನ್ಯಾಯಾಲಯ ಪ್ರಕರಣದ ವಿಚಾರಣೆ ಮುಂದುವರೆಸಲಿದೆ.