A1
ಸುದ್ದಿಗಳು

ಮೇಲಧಿಕಾರಿ ವಿರುದ್ಧ ಬೈಗುಳ ಬಳಸಿದರೆ ಸೇವೆಯಿಂದ ವಜಾಗೊಳಿಸುವ ಗರಿಷ್ಠ ಶಿಕ್ಷೆ ವಿಧಿಸುವಂತಿಲ್ಲ: ಮದ್ರಾಸ್ ಹೈಕೋರ್ಟ್

ತನ್ನ ಒಂದು ಕಪಾಳಕ್ಕೆ ಹೊಡೆದರೆ ಇನ್ನೊಂದು ಕೆನ್ನೆಯನ್ನೂ ಒಡ್ಡುವ ಯೇಸು ಕ್ರಿಸ್ತನಂತೆ ಕೆಳ ಹಂತದ ನೌಕರ ನಡೆದುಕೊಳ್ಳಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದಾಗಿ ನ್ಯಾಯಾಲಯ ಹೇಳಿತು.

Bar & Bench

ಮೇಲಧಿಕಾರಿ ವಿರುದ್ಧ ನಿಂದನೀಯ ಭಾಷೆ ಬಳಸಿದರೆ ಅದಕ್ಕಾಗಿ ಸೇವೆಯಿಂದ ವಜಾಗೊಳಿಸುವ ಗರಿಷ್ಠ ಶಿಕ್ಷೆ ವಿಧಿಸುವ ಅಗತ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.

ಹಿಂದೂಸ್ತಾನ್ ಯೂನಿಲಿವರ್ (ಎಚ್‌ಯುಎಲ್) ಒಡೆತನದ ಟೀ ಕಂಪನಿಯೊಂದರಿಂದ ವಜಾಗೊಂಡ ಕಾರ್ಮಿಕ ಒಕ್ಕೂಟದ ಸದಸ್ಯ ಎಸ್‌ ರಾಜಾ ಎಂಬುವವರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸುವ ವೇಳೆ ನ್ಯಾಯಮೂರ್ತಿಗಳಾದ ಎಸ್ ವೈದ್ಯನಾಥನ್ ಮತ್ತು ಆರ್ ಕಲೈಮತಿ ಅವರಿದ್ದ ಪೀಠ ಮೇಲಿನಂತೆ ಅಭಿಪ್ರಾಯಪಟ್ಟಿತು.

ರಾಜಾ ಅವರು 2009ರಲ್ಲಿ ಮೇಲಾಧಿಕಾರಿಗಳ ವಿರುದ್ಧ ನಿಂದನೀಯ ಪದ ಬಳಸಿದ್ದಲ್ಲದೆ ಆಡಳಿತ ಮಂಡಳಿಯ ಸದಸ್ಯರೊಬ್ಬರ ಅಂಗಿಯ ಕಾಲರ್‌ ಎಳೆದಿದ್ದರು. ವಿಚಾರಣೆ ಬಳಿಕ ಸೇವೆಯಿಂದ ರಾಜಾ ಅವರನ್ನು ವಜಾಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ರಾಜಾ ಕಾರ್ಮಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ರಾಜಾ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು ಮತ್ತು ಅವರು ಕೆಲಸದಲ್ಲಿಲ್ಲದ ಅವಧಿಗೆ ಸಂಬಂಧಿಸಿದಂತೆ ಶೇ 50ರಷ್ಟು ಹಿಂಬಾಕಿ ವೇತನ ಪಾವತಿಸಬೇಕು ಎಂದು ನ್ಯಾಯಾಲಯ ಸೂಚಿಸಿತ್ತು.

ಇದನ್ನು ಪ್ರಶ್ನಿಸಿ ಕಂಪೆನಿ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕಸದಸ್ಯ ಪೀಠ ಕಾರ್ಮಿಕ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತು. ಯಾಂತ್ರಿಕವಾಗಿ ಆದೇಶ ಜಾರಿಗೊಳಿಸಲಾಗಿದೆ ಎಂದು ಅದು ಹೇಳಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜಾ ವಿಭಾಗೀಯ ಪೀಠದ ಮೊರೆ ಹೋಗಿದ್ದರು.

ರಾಜಾ ಅವರ ಮೇಲ್ಮನವಿಯನ್ನು ಪುರಸ್ಕರಿಸಿರುವ ವಿಭಾಗೀಯ ಪೀಠ ಪರಿಸ್ಥಿತಿ ಗಂಭೀರವಾಗಿರಲಿಲ್ಲವೇ ಅಥವಾ ಕೆರಳಿಸುವಂತಿತ್ತೇ ಎಂಬ ವಿಚಾರದ ಜೊತೆಗೆ ಉದ್ಯೋಗಿಯ ಹಿಂದಿನ ದಾಖಲೆಗಳನ್ನು ಪರಿಗಣಿಸಬೇಕು ಎಂದಿತು.

ರಾಜಾ ತನ್ನ ಮೇಲಾಧಿಕಾರಿ ವಿರುದ್ಧ ಈ ರೀತಿ ವರ್ತಿಸಲು ಪ್ರೇರಣೆ ಏನು, ಹಠಾತ್‌ ಪ್ರಚೋದನೆಗೆ ಕಾರಣವಾದ ಅಂಶವೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದ ನ್ಯಾಯಾಲಯ ತನ್ನ ಒಂದು ಕಪಾಳಕ್ಕೆ ಹೊಡೆದರೆ ಇನ್ನೊಂದು ಕೆನ್ನೆಯನ್ನೂ ನೀಡುತ್ತಿದ್ದ ಯೇಸು ಕ್ರಿಸ್ತನಂತೆ ಕೆಳ ಹಂತದ ನೌಕರ ನಡೆದುಕೊಳ್ಳಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದಾಗಿ ತಿಳಿಸಿತು.

ಅದರಂತೆ ರಾಜಾ ಅವರ ಮನವಿ ಪುರಸ್ಕರಿಸಿದ ವಿಭಾಗೀಯ ಪೀಠ, ಕಾರ್ಮಿಕ ನ್ಯಾಯಾಲಯದ ಆದೇಶವನ್ನು ಭಾಗಶಃ ಮಾರ್ಪಡಿಸಿ ಕಂಪೆನಿಗೆ ಮರುಸೇರ್ಪಡೆ ಮಾಡುವಂತೆ ನಿರ್ದೇಶಿಸಿತು. ಆದರೆ ಅವರಿಗೆ ಕಂಪೆನಿ ಹಿಂಬಾಕಿ ಪಾವತಿಸುವ ಅಗತ್ಯವಿಲ್ಲ ಎಂದು ಪೀಠ ನುಡಿಯಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

S_Raja_v_HUL.pdf
Preview