ಸುದ್ದಿಗಳು

ಬ್ರೆಜಿಲ್‌ನಿಂದ ತಾಯ್ನಾಡಿಗೆ ಮರಳುತ್ತಿದಾಗ ತೀರ್ಪು ಸಿದ್ಧಪಡಿಸಲು ವಿಮಾನದ ಅಂತರ್ಜಾಲ ಬಳಸಿದ ಸಿಜೆಐ ಚಂದ್ರಚೂಡ್

ಬ್ರೆಜಿಲ್‌ನಲ್ಲಿ ಜೆ 20 ಶೃಂಗಸಭೆಯಲ್ಲಿ ಪಾಲ್ಗೊಂಡು ಭಾರತಕ್ಕೆ ಪ್ರಯಾಣಿಸುತ್ತಿದ್ದಾಗ, ತಾವು ಸಹೋದ್ಯೋಗಿ ನ್ಯಾಯಮೂರ್ತಿಗಳಿಗೆ ನೆರವು ನೀಡುವುದಕ್ಕಾಗಿ ವಿಮಾನದ ಅಂತರ್ಜಾಲ ಬಳಸಿದ್ದದಾಗಿ ಸಿಜೆಐ ತಿಳಿಸಿದರು.

Bar & Bench

ಗುಜರಾತ್‌ ಜಿಲ್ಲಾ ನ್ಯಾಯಾಧೀಶರ ಬಡ್ತಿ ನೀತಿ ಎತ್ತಿ ಹಿಡಿದ ತೀರ್ಪು ಸಿದ್ಧಪಡಿಸುವುದಕ್ಕಾಗಿ ಸಹೋದ್ಯೋಗಿ ನ್ಯಾಯಮೂರ್ತಿಗಳಿಗೆ ಸಹಾಯ ಮಾಡಲೆಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ಈಚೆಗೆ ವಿಮಾನದ ಅಂತರ್ಜಾಲ ಬಳಸಿದ್ದಾರೆ.

ಮೇ 17ರಂದು ತೀರ್ಪು ಪ್ರಕಟಿಸುವ ವೇಳೆ ಸಿಜೆಐ ಅವರು ಈ ವಿಚಾರ ತಿಳಿಸಿದರು. ಬ್ರೆಜಿಲ್‌ನಲ್ಲಿ ಜೆ  20ರ ಶೃಂಗಸಭೆಯಲ್ಲಿ ಪಾಲ್ಗೊಂಡು ಭಾರತಕ್ಕೆ ಮರಳುತ್ತಿದ್ದಾಗ ತೀರ್ಪಿನ ಕರಡು ತಯಾರಿಸಲು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರಿಗೆ ನೆರವು ನೀಡೆಂದು ವಿಮಾನದ ಅಂತರ್ಜಾಲ ಬಳಸಿದ್ದಾಗಿ ಅವರು ತಿಳಿಸಿದರು.

ʼತೀರ್ಪು ಪ್ರಕಟಿಸಬೇಕಿತ್ತು. ನಾನು ಜೆ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಕ್ಕೆಂದು ಬ್ರೆಜಿಲ್‌ನಲ್ಲಿದ್ದೆ. ಹೀಗಾಗಿ ವಿಮಾನದ ಅಂತರ್ಜಾಲ ಬಳಸಿದೆ.  ನ್ಯಾಯಮೂರ್ತಿಗಳಾದ ಪರ್ದಿವಾಲಾ ಮತ್ತು ಮಿಶ್ರಾ ಅವರು ನನ್ನೊಂದಿಗೆ ಕರಡು ದಾಖಲೆ ಹಂಚಿಕೊಂಡರುʼ ಎಂದು ಅವರು ಹೇಳಿದರು. ವಿಚಾರಣೆ ವೇಳೆ ಈ ಬೆಳವಣಿಗೆ ಕುರಿತು ನ್ಯಾ. ಪರ್ದಿವಾಲಾ ಅವರು ಮೆಚ್ಚುಗೆ ಸೂಚಿಸಿದರು.

ಆಗ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಲಘು ಧಾಟಿಯಲ್ಲಿ”ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳ ಅಂತರ್ಜಾಲ ಪರಿಣಾಮಕಾರಿತ್ವವನ್ನು ಕೊಂಡಾಡಲು ಈ ಬೆಳವಣಿಗೆಯನ್ನು ಬಳಸಿಕೊಳ್ಳುತ್ತವೆ” ಎಂದರು.

ಅರ್ಹತೆ ಮತ್ತು ಜೇಷ್ಠತೆ ಆಧಾರದ ಮೇಲೆ ಜಿಲ್ಲಾ ನ್ಯಾಯಾಧೀಶರ ನೇಮಕಾತಿ ಮಾಡಲು ಗುಜರಾತ್ ಸರ್ಕಾರ  ನಿರ್ಧರಿಸಿತ್ತು. ನಿರ್ಧಾರ ಎತ್ತಿ ಹಿಡಿದಿದ್ದ ಗುಜರಾತ್ ಹೈಕೋರ್ಟ್‌ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.

ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿಯಿತಾದರೂ ಹಿರಿತನಕ್ಕಿಂತ ಅರ್ಹತೆಗೆ ಆದ್ಯತೆ ನೀಡಿಯೂ ಅಭ್ಯರ್ಥಿಗಳಿಗೆ ಬಡ್ತಿ ನೀಡಲಾಗುವುದರಿಂದ ಕೇವಲ ಅರ್ಹತೆಯ ಆಧಾರದ ಮೇಲೆ ಬಡ್ತಿ ಪಡೆಯುವ ಪಟ್ಟಿಯಲ್ಲಿರುವವರಿಗೆ ತಡೆಯಾಜ್ಞೆ ಅನ್ವಯಿಸುವುದಿಲ್ಲ ಎಂದು ನುಡಿಯಿತು.

ಬಡ್ತಿ ಪಡೆದ 68 ಮಂದಿಯಲ್ಲಿ ಸೂರತ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಹರೀಶ್ ಹಸ್ಮುಖ್‌ಭಾಯ್ ವರ್ಮಾ ಕೂಡ ಒಬ್ಬರು.  ಅವರು ಕಳೆದ ಮಾರ್ಚ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಪರಿಗಣಿಸಿ ಎರಡು ವರ್ಷಗಳ ಸಾದಾ ಜೈಲು ಶಿಕ್ಷೆ ವಿಧಿಸಿದ್ದರು.