CJI DY Chandrachud 
ಸುದ್ದಿಗಳು

ಕಾನೂನು ಸುವ್ಯವಸ್ಥೆ ಪಾಲನೆಗೆ ಎಐ ಬಳಕೆ ಮಾಡಿದರೆ ಸಮಾಜದಂಚಿನಲ್ಲಿರುವವರು ಅದಕ್ಕೆ ಗುರಿಯಾಗಬಹುದು: ಸಿಜೆಐ

ಪಾರದರ್ಶಕತೆ ಮತ್ತು ನ್ಯಾಯಸಮ್ಮತೆಗಾಗಿ ನಾವು ಬಳಸುವ ಎಐ ರೀತಿಯ ಸಾಧನಗಳನ್ನು ಪರಿಶೀಲನೆಗೊಳಪಡಿಸಬೇಕು ಎಂದು ಅವರು ಹೇಳಿದರು.

Bar & Bench

ಅಪರಾಧಿಕ ನ್ಯಾಯ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯನ್ನು (ಎಐ) ಬಳಸಲು ನಾವು ಸಜ್ಜಾಗಿದ್ದೇವಾದರೂ, ಆ ವ್ಯವಸ್ಥೆಯಲ್ಲಿ ದತ್ತಾಂಶದ ಸ್ವರೂಪದಿಂದಾಗಿ ವ್ಯವಸ್ಥಿತ ಪಕ್ಷಪಾತಗಳು ಸಂಭವಿಸುವ ಬಗ್ಗೆ ಜಾಗರೂಕರಾಗಿರಬೇಕು ಎಂದು ಭಾರತದ  ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಕಿವಿಮಾತು ಹೇಳಿದರು.

ಬೆಂಗಳೂರಿನ ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಮತ್ತು ಆಕ್ಸಫರ್ಡ್‌ ಹ್ಯೂಮನ್‌ ರೈಟ್ಸ್‌ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಬರ್ಕ್ಲಿ ಸೆಂಟರ್‌ ಫಾರ್‌ ಕಂಪೇರಿಟೀವ್‌ ಈಕ್ವಾಲಿಟಿ ಅಂಡ್‌ ಆಂಟಿ ಡಿಸ್ಕ್ರಿಮಿನೇಷನ್‌ನ 11ನೇ ವಾರ್ಷಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ನಿಟ್ಟಿನಲ್ಲಿ ಅಂಕಿ ಅಂಶಗಳನ್ನು ಆಧರಿಸಿರುವ ದತ್ತಾಂಶ ಅಪರಾಧಿಕ ನ್ಯಾಯ ವ್ಯವಸ್ಥೆಯು ಪಕ್ಷಪಾತ ಅಥವಾ ವ್ಯವಸ್ಥಿತ ಅಸಮಾನತೆ ಹುಟ್ಟುಹಾಕಿ ಸಮಾಜದಂಚಿನಲಿರುವ ನೆರೆಹೊರೆಯ ಸಮುದಾಯಗಳೇ ಅದಕ್ಕೆ ಗುರಿಯಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ಹಿಂದಿನ ಅಪರಾಧ ದತ್ತಾಂಶವನ್ನು ಈ ಅಂಕಿ ಅಂಶಗಳನ್ನು ಹುರಿಗೊಳಿಸಲು ಬಳಸಿದರೆ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಪಕ್ಷಪಾತ ಅಥವಾ ವ್ಯವಸ್ಥಿತ ಅಸಮಾನತೆ ಹುಟ್ಟುಹಾಕಿ ಸಮಾಜದಂಚಿನಲ್ಲಿರುವ ಸಮುದಾಯಗಳನ್ನು ಗುರಿಯಾಗಿಸಿಕೊಳ್ಳುವ ಭಾರೀ ಅಪಾಯದ ಕ್ಷೇತ್ರವಾಗಿ ಇದು ಮಾರ್ಪಡಬಹುದು.

  • ಇದು ಈಗಾಗಲೇ ಸಮಾಜದಂಚಿಲ್ಲಿರುವ ಸಮುದಾಯಗಳ ಮೇಲಿನ ನಿಗಾ ಮತ್ತು ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸುವುದಲ್ಲದೆ ತಾರತಮ್ಯವನ್ನು ಶಾಶ್ವತಗೊಳಿಸುತ್ತದೆ.

  • ಮುನ್ಸೂಚಕ ಕಾನೂನು ವ್ಯವಸ್ಥೆ ದತ್ತಾಂಶಗಳು ಕೇವಲ ಕಪ್ಪು ಪೆಟ್ಟಿಗೆಗಳು ಅಂದರೆ ಅವುಗಳ ಆಂತರಿಕ ಕಾರ್ಯಗಳು ಪಾರದರ್ಶಕವಾಗಿರುವುದಿಲ್ಲ.

  • ಭಾರತದಂತಹ ವೈವಿಧ್ಯಮಯ ದೇಶದಲ್ಲಿ  ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ನ ಸವಾಲುಗಳನ್ನು ಎದುರಿಸಲು "ಸಂದರ್ಭೀಕರಣ" ತತ್ವ ಮಹತ್ವದ್ದಾಗುತ್ತದೆ.

  • ಪಾರದರ್ಶಕತೆ ಮತ್ತು ನ್ಯಾಯಸಮ್ಮತೆಗಾಗಿ ನಾವು ಬಳಸುವ ಎಐ ರೀತಿಯ ಸಾಧನಗಳನ್ನು ಪರಿಶೀಲನೆಗೊಳಪಡಿಸಬೇಕು.

  • ಸಂಭಾವ್ಯ ಪಕ್ಷಪಾತಗಳ ಬಗ್ಗೆ ನಾವು ಜಾಗರೂಕರಾಗಿರಬೇಕು. ಉದ್ದೇಶರಹಿತವಾಗಿ ನಡೆಯುವ ತಾರತಮ್ಯದ ಪರಿಣಾಮಗಳನ್ನು ತಗ್ಗಿಸಲು ಸಕ್ರಿಯವಾಗಿ ಪ್ರಯತ್ನಿಸಬೇಕು.

  • ಸಮಾಜದಂಚಿನಲ್ಲಿರುವ ಮತ್ತು ಸವಲುತ್ತುಗಳು ದೊರೆಯದ ಗುಂಪುಗಳು ಈಗಾಗಲೇ ಎದುರಿಸುತ್ತಿರುವ ಅಸಮಾನತೆಯನ್ನು ಹವಾಮಾನ ವೈಪರೀತ್ಯ ಉಲ್ಬಣಗೊಳಿಸುತ್ತದೆ.

  • ಮಹಿಳೆಯರು, ಮಕ್ಕಳು, ಅಂಗವಿಕಲ ವ್ಯಕ್ತಿಗಳು ಮತ್ತು ಸ್ಥಳೀಯ ಜನ ಹವಾಮಾನ ವೈಪರೀತ್ಯದಿಂದ ಗುಳೆ ಹೋಗುವಂತಹ ಮತ್ತು ಆರೋಗ್ಯ ಅಸಮಾನತೆ  ಮತ್ತು ಆಹಾರದ ಕೊರತೆಯಂತಹ ದೊಡ್ಡ ಅಪಾಯಗಳನ್ನು ಎದುರಿಸುತ್ತಾರೆ.

  • 'ಹವಾಮಾನ ನ್ಯಾಯ' ಒದಗಿಸುವುದಕ್ಕಾಗಿ ಈ ವಿಭಿನ್ನ ಪರಿಣಾಮಗಳನ್ನು ಗುರುತಿಸಬೇಕಿದೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ತೊಂದರೆ ಎದುರಿಸುತ್ತಿರುವ ಸಮುದಾಯಗಳನ್ನು ಸಕ್ರಿಯವಾಗಿ ಭಾಗಿಯಾಗುವಂತೆ ಮಾಡುವ ಅಗತ್ಯವಿದೆ.