A1
ಸುದ್ದಿಗಳು

ಎಲ್ಲಾ ವಲಸೆ ಕಾರ್ಮಿಕರಿಗೂ 'ಬಾಂಗ್ಲಾದೇಶಿʼ ಎಂದು ಹಣೆಪಟ್ಟಿ ಹಚ್ಚುವುದು ಅಪಾಯಕಾರಿ: ನ್ಯಾ. ಎಸ್ ಮುರಳೀಧರ್

ಹೀಗೆ ವ್ಯಾಪಕವಾಗಿ ಸಾಮಾನೀಕರಣಗೊಳಿಸುವುದರಿಂದಾಗಿ ಆಗಾಗ ಅನಗತ್ಯ ರಾಷ್ಟ್ರೀಯ ಭದ್ರತಾ ಆತಂಕ ಉಂಟಾಗುತ್ತದೆ ಮತ್ತು ವಲಸಿಗರು, ನಿರಾಶ್ರಿತರು ಹಾಗೂ ಆಸರೆ ಬಯಸಿರುವವರಿಗೆ ಅನ್ಯಾಯ ಎಸಗಿದಂತಾಗುತ್ತದೆ ಎಂದು ಅವರು ಹೇಳಿದರು.

Bar & Bench

ಪ್ರತಿಯೊಬ್ಬ ವಲಸೆ ಕಾರ್ಮಿಕರನ್ನೂ 'ಬಾಂಗ್ಲಾದೇಶಿʼ ಎಂದು ಹಣೆಪಟ್ಟಿ ಹಚ್ಚದಂತೆ ಒಡಿಶಾ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್‌ ಮುರಳೀಧರ್‌ ಎಚ್ಚರಿಕೆ ನೀಡಿದ್ದಾರೆ.

ವಲಸೆ ಮತ್ತು ರಾಜಕೀಯ ಆಶ್ರಯ ಯೋಜನೆ (ಮೈಗ್ರೇಷನ್‌ ಅಂಡ್‌ ಅಸೈಲಮ್‌ ಪ್ರಾಜೆಕ್ಟ್) ಹೆಸರಿನ ವಕೀಲರ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ “ನ್ಯಾಯದ ಬಾಗಿಲು ಮುಕ್ತವಾಗಿಡುವುದು: ವಲಸಿಗ ಮಹಿಳೆಯರ ಮೇಲಿನ ದೌರ್ಜನ್ಯ ತಡೆ” ಎಂಬ ವಿಷಯದ ಕುರಿತು ಅವರು ಮಾತನಾಡಿದರು.  

ವಲಸಿಗರನ್ನು ಹೀಗೆ ವ್ಯಾಪಕವಾಗಿ ಸಾಮಾನ್ಯೀಕರಣಗೊಳಿಸುವುದರಿಂದಾಗಿ ಅನಗತ್ಯ ರಾಷ್ಟ್ರೀಯ ಭದ್ರತಾ ಆತಂಕ ಉಂಟಾಗುತ್ತದೆ. ವಲಸಿಗರು, ನಿರಾಶ್ರಿತರು ಹಾಗೂ ಆಸರೆ ಬಯಸಿರುವವರಿಗೆ ಅನ್ಯಾಯ ಎಸಗಿದಂತಾಗುತ್ತದೆ ಎಂದು ಅವರು ಹೇಳಿದರು.

ಭಾಷಣದ ಪ್ರಮುಖಾಂಶಗಳು

  • ಪ್ರಭುತ್ವದ ದೃಷ್ಟಿಯಿಂದ ಪ್ರತಿಯೊಬ್ಬ ವಲಸಿಗರನ್ನೂ ಬಾಂಗ್ಲಾದೇಶಿ ಎಂದು ಕರೆಯುವುದು ಅಪಾಯಕಾರಿ.

  • ಹೀಗೆ ಸಾಮಾನ್ಯೀಕರಿಸುವುದರಿಂದಾಗಿ ರಾಷ್ಟ್ರೀಯ ಭದ್ರತೆ ಮತ್ತು ಏಕತೆಗೆ ಧಕ್ಕೆ ಉಂಟಾಗುತ್ತದೆ. ವಲಸಿಗರು, ನಿರಾಶ್ರಿತರು ಹಾಗೂ ರಾಜಕೀಯ ಆಶ್ರಯ ಬಯಸುವವರಿಗೆ ಅನ್ಯಾಯ ಎಸಗಿದಂತಾಗುತ್ತದೆ

  • ಭಾರತ ಸದಾ ವಲಸಿಗರ ದೇಶವಾಗಿದ್ದು ರಾಜಕೀಯ , ಕಾನೂನಾತ್ಮಕ ಗಡಿಗಳು ಅವರನ್ನು ಬಾಂಗ್ಲಾದೇಶಿಯರು, ರೋಹಿಂಗ್ಯಾಗಳು ಹಾಗೂ ಅಕ್ರಮ ವಲಸಿಗರು ಎಂದು ಕರೆದಿವೆ.

  • ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶ ಜಮ್ಮು ಕಾಶ್ಮೀರದಲ್ಲಿದ್ದ ಕೆಲ ರೋಹಿಂಗ್ಯಾಗಳಿಗೆ ಪರಿಹಾರ ನಿರಾಕರಿಸಿದರೆ ಇತ್ತ ಮಣಿಪುರ ಹೈಕೋರ್ಟ್‌ನ ಅದ್ಭುತ ತೀರ್ಪೊಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ (ಯುಎನ್‌ಎಚ್‌ಸಿಆರ್) ಪ್ರಮಾಣಪತ್ರಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿತು.

  • ಭಾರತದಲ್ಲಿ ಮಾನವ ಹಕ್ಕು ಆಧಾರಿತ ಕಾನೂನು ಶಿಕ್ಷಣದ ಕೊರತೆ ಇದೆ. ಮಾನವ ಹಕ್ಕು ಕಾರ್ಯಕ್ಕಾಗಿ ವಕೀಲರನ್ನು ರೂಪಿಸುವ ತುರ್ತು ಅಗತ್ಯ ಇದೆ.

  • ಅಕ್ರಮ ವಲಸಿಗರು ಮತ್ತು ಆಶ್ರಯ ಪಡೆಯುವವರು ತಮಗೆ ಕಾನೂನು ಹಕ್ಕುಗಳಿಲ್ಲ ಎಂದು ಭಾವಿಸಿರುವುದು ತಪ್ಪು ಕಲ್ಪನೆ. ಈ ಕಲ್ಪನೆಯಲ್ಲಿ ಬದಲಾವಣೆ ತರುವ ಅಗತ್ಯವಿದ್ದು ತಮ್ಮ ಹಕ್ಕುಗಳ ಬಗ್ಗೆ ಅವರು ಚೆನ್ನಾಗಿ ತಿಳಿದಿರಬೇಕಾಗುತ್ತದೆ.