ಸುಪ್ರೀಂಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ.ರಮಣ ಅವರನ್ನು ನೇಮಕ ಮಾಡಿ ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸೋಮವಾರ ಆದೇಶ ಹೊರಡಿಸಿದ್ದಾರೆ. 48 ನೇ ಸಿಜೆಐ ಆಗಲಿರುವ ನ್ಯಾಯಮೂರ್ತಿ ರಮಣ ಅವರನ್ನು 2014 ರ ಫೆಬ್ರವರಿ 17 ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು. ಹಾಲಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರು ಏಪ್ರಿಲ್ 23ರಂದು ನಿವೃತ್ತರಾಗಲಿದ್ದು, ರಮಣ ಅವರು ಏ.24ರಿಂದ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಹುದ್ದೆಯ ಕಾರ್ಯಭಾರವನ್ನು ವಹಿಸಲಿದ್ದಾರೆ.
ಸಿಜೆಐಗಳನ್ನು ನೇಮಕ ಮಾಡುವಲ್ಲಿ ಸುಪ್ರೀಂ ಕೋರ್ಟ್ ಅನುಸರಿಸಿದ ಹಿರಿತನದ ಮಾನದಂಡಕ್ಕೆ ಅನುಗುಣವಾಗಿ ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆ ಅಲಂಕರಿಸಲು ನ್ಯಾ. ರಮಣ ಅವರ ಹೆಸರನ್ನು ಈಗಿನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಶಿಫಾರಸು ಮಾಡಿದ್ದರು.
2022 ಆಗಸ್ಟ್ 26ರಂದು ನಿವೃತ್ತಿಯಾಗಲಿರುವ ನ್ಯಾ. ರಮಣ ಅವರು ಮುಖ್ಯ ನ್ಯಾಯಮೂರ್ತಿಗಳಾಗಿ 16 ತಿಂಗಳ ಕಾಲ ಸೇವೆ ಸಲ್ಲಿಸಲಿದ್ದಾರೆ. ವಾಸ್ತವವಾಗಿ, ದಶಕದಿಂದೀಚೆಗೆ ಅತಿ ದೀರ್ಘಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳುವ ಅಗ್ಗಳಿಕೆ ಅವರದ್ದಾಗಲಿದೆ. ದಿವಂಗತ ನ್ಯಾಯಮೂರ್ತಿ ಎಸ್ ಎಚ್ ಕಪಾಡಿಯಾ ಅವರು ಮೇ 2010 ರಿಂದ ಸೆಪ್ಟೆಂಬರ್ 2012ರವರೆಗೆ ದೀರ್ಘಾವಧಿಯವರೆಗೆ ಮುಖ್ಯ ನ್ಯಾಯಮೂರ್ತಿಯಾಗಿದ್ದರು.
ಅಮರಾವತಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್ ಜಗನ್ ಮೋಹನ್ ರೆಡ್ಡಿ ಅವರು ನ್ಯಾ. ರಮಣ ಅವರ ಬಗ್ಗೆ ದೂರು ನೀಡಿ ಸಿಜೆಐ ಬೊಬ್ಡೆ ಅವರಿಗೆ ಪತ್ರ ಬರೆದಿದ್ದರು. ಆದರೆ ಸ್ವಯಂ ತನಿಖೆ ನಡೆಸಿದ್ದ ಸುಪ್ರೀಂಕೋರ್ಟ್ ಅವರ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿತ್ತು.
ಅಧಿಸೂಚನೆಯನ್ನು ಇಲ್ಲಿ ಓದಿ: