ನ್ಯಾಯಮೂರ್ತಿ ಎಸ್ ರವೀಂದ್ರ ಭಟ್  
ಸುದ್ದಿಗಳು

ಪ್ರಭುತ್ವ ಇರುವುದು ಪ್ರಜೆಗಳಿಗಾಗಿಯೇ ವಿನಾ ಪ್ರಜೆಗಳಿರುವುದು ಪ್ರಭುತ್ವಕ್ಕಾಗಿ ಅಲ್ಲ: ನ್ಯಾ. ಎಸ್.ರವೀಂದ್ರ ಭಟ್

ತಮ್ಮ ಮಾತನ್ನು ವಿವರಿಸಿದ ನ್ಯಾಯಮೂರ್ತಿ ಭಟ್, ನಾಗರಿಕರು ಹಕ್ಕುಗಳನ್ನು ಹೊಂದಿರುವವರೇ ಹೊರತು ರಾಜ್ಯವಲ್ಲ ಎಂದು ಹೇಳಿದರು.

Bar & Bench

ಪ್ರಭುತ್ವ ಎಂಬುದು ಪ್ರಜೆಗಳ ಕಲ್ಯಾಣಕ್ಕಾಗಿ ಅಸ್ತಿತ್ವದಲ್ಲಿದೆಯೇ ವಿನಾ ಬೇರೆಯ ಉದ್ದೇಶಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎಸ್‌ ರವೀಂದ್ರ ಭಟ್ ಬುಧವಾರ ಹೇಳಿದರು.

ಕೇರಳ ನ್ಯಾಯಾಂಗ ಅಕಾಡೆಮಿ ಮತ್ತು ಭಾರತೀಯ ಕಾನೂನು ಸಂಸ್ಥೆ ಕೇರಳ ಘಟಕ ಬುಧವಾರ ಕೇರಳ ಹೈಕೋರ್ಟ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ "ವಸಾಹತುಶಾಹಿ ಭಾರ ತೊಡೆದುಹಾಕುವಿಕೆ - ಕಾನೂನು ವ್ಯವಸ್ಥೆ ಭಾರತೀಕರಣಗೊಳಿಸುವ ದೃಷ್ಟಿಕೋನಗಳು" ಎಂಬ ವಿಷಯ ಕುರಿತು ಅವರು ಮಾತನಾಡಿದರು.

ತಮ್ಮ ಹೇಳಿಕೆಯನ್ನು ಮತ್ತಷ್ಟು ವಿವರಿಸಿದ ನ್ಯಾ. ಭಟ್, ಪ್ರಜೆಗಳು ಹಕ್ಕುಗಳನ್ನು ಹೊಂದಿರುವವರೇ ವಿನಾ ಪ್ರಭುತ್ವವಲ್ಲ. ಪ್ರಜೆಗಳ ಏಳಿಗೆಯ ಕರ್ತವ್ಯ ಪ್ರಭುತ್ವದ್ದಾಗಿದೆ ಎಂದು ಅವರು ಹೇಳಿದರು.  

"ಪ್ರಭುತ್ವ ಪ್ರಜೆಗಳಿಗಾಗಿ ಅಸ್ತಿತ್ವದಲ್ಲಿದೆ, ಪ್ರಜೆ ಪ್ರಭುತ್ವಕ್ಕಾಗಿ ಅಲ್ಲ . ಇದನ್ನು ಮತ್ತೆ ಮತ್ತೆ ಹೇಳಬೇಕಾಗಿದೆ, ಲಾವಣಿಗಳಲ್ಲಿ, ಭಜನೆಗಳಲ್ಲಿ ಹಾಡುಗಟ್ಟಿ ತಲುಪಿಸಬೇಕಿದೆ" ಎಂದು ನ್ಯಾ. ಭಟ್ ಹೇಳಿದರು. 

ಹಕ್ಕು ಹೊಂದಿರುವ ಪ್ರಜೆ ಮಾತ್ರ ತನ್ನ ಘನತೆ, ಸಮಾನತೆ, ಜೀವನೋಪಾಯದ ಹಕ್ಕು ಮತ್ತು ಆಡಳಿತದಲ್ಲಿ ತನ್ನನ್ನು ತಾನು ಪ್ರತಿಪಾದಿಸಿಕೊಳ್ಳುವ ಹಕ್ಕನ್ನು ಪ್ರತಿಪಾದಿಸಬಹುದಾಗಿದೆ ಎಂದು ಅವರು ಹೇಳಿದರು.

"ನಿರಂಕುಶ ಪ್ರಭುತ್ವ"ಕ್ಕೆ ಸ್ವರಾಜ್ಯ ಅಥವಾ ಸ್ವಯಂ ಆಡಳಿತ ಒಗ್ಗುವುದಿಲ್ಲ. ಪ್ರಭುತ್ವದೆಡೆಗೆ ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ಪ್ರಜೆಗಳನ್ನು ಒತ್ತಾಯಿಸುತ್ತಾ ಹಕ್ಕು ಮತ್ತು ಕರ್ತವ್ಯಗಳಿಂದ ಕೂಡಿದ ಕ್ರಿಯಾಶೀಲ ರಚನೆಯನ್ನು ಹಿಮ್ಮೆಟ್ಟಿಸುವ ಮೂಲಕ ಸ್ವರಾಜ್ಯ ಸಾಧಿಸಲು ಸಾಧ್ಯವಿಲ್ಲ. ಸೋವಿಯತ್ ರಷ್ಯಾ ಮಾಡಿದ್ದು ಅದನ್ನೇ. ನಾವೂ ಅದನ್ನೇ ಮಾಡಬೇಕೆ?" ಎಂದು ಅವರು ಪ್ರಶ್ನಿಸಿದರು.

ಸ್ವರಾಜ್ಯವು ಪ್ರತಿಯೊಬ್ಬ ಪ್ರಜೆಯ ಹಕ್ಕನ್ನು ಗೌರವಿಸುತ್ತದೆ. ಹಾಗಾಗಿ, ಸಹ ನಾಗರಿಕರಾಗಿ ಸ್ವರಾಜ್ಯದ ಘನತೆ ಮತ್ತು ಅಂತರ್ಗತ ಮೌಲ್ಯಕ್ಕೆ ಸಂಬಂಧಿಸಿದಂತೆ ಪ್ರಜೆಗಳು ಉಳಿದ ಪ್ರಜೆಗಳೆಡೆಗೆ ಕರ್ತವ್ಯವನ್ನು ಹೊಂದಿದ್ದಾರೆ. ಆ ಕರ್ತವ್ಯವು ಪ್ರಸ್ತಾವನೆಯ ಭ್ರಾತೃತ್ವದ ಕಲ್ಪನೆಯಲ್ಲಿ ಹುದುಗಿದೆ ಎಂದು ಅವರು ಹೇಳಿದರು.

ಪ್ರಸ್ತುತ ನ್ಯಾಯಾಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಅವರು ಪ್ರತಿಕ್ರಿಯಿಸಿದರು. ನ್ಯಾಯಮಂಡಳಿ ವ್ಯವಸ್ಥೆ ಕೆಲ ವರ್ಷಗಳಿಂದ ನಿಷ್ಕ್ರಿಯವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ನ್ಯಾಯಮೂರ್ತಿ ಭಟ್ ಅವರ ಭಾಷಣದ ಕುರಿತು ಇಲ್ಲಿ ಇನ್ನಷ್ಟು ಓದಿ.

[ಉಪನ್ಯಾಸದ ವೀಡಿಯೊವನ್ನು ಕೆಳಗೆ ವೀಕ್ಷಿಸಿ]