ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ವೆಂಕಟಾಪುರದಲ್ಲಿರುವ ಶ್ರೀ ನರಹರಿತೀರ್ಥ ಸ್ವಾಮಿ ವೃಂದಾವನದ ಆರಾಧನಾ ಮಹೋತ್ಸವ ಆಚರಣೆ ವೇಳೆ ಉತ್ತರಾದಿ ಮಠದ ಭಕ್ತರಿಗೆ ತೊಂದರೆ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹೊಸಪೇಟೆ ತಾಲ್ಲೂಕು ಕಮಲಾಪುರ ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.
ಉತ್ತರಾದಿ ಮಠದ ಪೀಠಾಧಿಪತಿ ಸತ್ಯಾತ್ಮತೀರ್ಥ ಸ್ವಾಮೀಜಿ ಪರವಾಗಿ ಮಠದ ಮುಖ್ಯ ಆಡಳಿತಾಧಿಕಾರಿ ಮತ್ತು ಸಾಮಾನ್ಯ ಅಧಿಕಾರ ಪತ್ರ (ಜಿಪಿಎ) ಹೊಂದಿರುವ ವಿದ್ಯಾಧೀಶಾಚಾರ್ಯ ಗುತ್ತಲ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪ್ರಕಟಿಸಿದೆ.
“ಶ್ರೀನರಹರಿತೀರ್ಥ ವೃಂದಾವನದ ಸ್ಥಿರಾಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಸ್ವಾಮಿ ಮಠ ಮತ್ತು ಉತ್ತರಾದಿ ಮಠದ ಮಧ್ಯೆ ದಶಕಗಳಿಂದ ವ್ಯಾಜ್ಯ ನಡೆಯುತ್ತಿದೆ. ಆದರೆ, ಉತ್ತರಾದಿ ಮಠದ ಭಕ್ತರಿಗೆ ನ್ಯಾಯಾಲಯದ ಆದೇಶದ ಅನುಸಾರ ವೃಂದಾವನದ ಕೀಲಿ ಕೈ ನೀಡದೆ ಕಾನೂನು ಸುವ್ಯವಸ್ಥೆ ನೆಪವೊಡ್ಡಿ 2025ರ ಜನವರಿ 9ರಂದು ಉಭಯ ಪಂಗಡಗಳ ಶಾಂತಿ ಸಭೆ ನಡೆಸಿರುವ ಕಮಲಾಪುರ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ರಾಜೇಶ್ ಎ.ಬಟಗುರ್ಕಿ ಕಾನೂನು ನಿಯಮಗಳನ್ನು ಮೀರಿ ವರ್ತಿಸಿದ್ದಾರೆ” ಎಂದು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
“ಭೂಮಿ ಮತ್ತು ಕಟ್ಟಡಗಳ ಬಗೆಗಿನ ವಿವಾದಗಳು ಹಾಗೂ ವಿಷಯಗಳಿಗೆ ಸಂಬಂಧಿಸಿದಂತೆ ಪೊಲೀಸರು ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ರಾಜೇಶ್ ಬಟಗುರ್ಕಿ ಉಲ್ಲಂಘಿಸಿದ್ದಾರೆ. ಸಿವಿಲ್ ವ್ಯಾಜ್ಯದಲ್ಲಿ ಮಧ್ಯಪ್ರವೇಶಿಸುವ ಮೂಲಕ ತಮ್ಮ ಅಧಿಕಾರ ದುರಪಯೋಗಪಡಿಸಿಕೊಂಡಿದ್ದಾರೆ. ಆದ್ದರಿಂದ, ಧಾರವಾಡ ಪೊಲೀಸ್ ಆಯುಕ್ತರು ರಾಜೇಶ್ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ನಾಲ್ಕು ತಿಂಗಳ ಒಳಗಾಗಿ ಹೈಕೋರ್ಟ್‌ಗೆ ವರದಿ ಸಲ್ಲಿಸಬೇಕು” ಎಂದು ನಿರ್ದೇಶಿಸಿದೆ.
“ಉತ್ತರಾದಿ ಮಠದವರು ಪೊಲೀಸ್ ಠಾಣೆಗೆ ಬಂದು ವೃಂದಾವನ ಆವರಣದ ಕೀಲಿ ಕೈಯನ್ನು ರಾಘವೇಂದ್ರ ಸ್ವಾಮಿ ಮಠದವರಿಗೆ ಕೊಡಬೇಕು ಎಂದು ಒತ್ತಡ ಹೇರಿದ ರಾಜೇಶ್ ಬಟಗುರ್ಕಿ ಅವರ ನಡವಳಿಕೆಯ ಹಿಂದಿನ ಉದ್ದೇಶವೇನು ಎಂಬುದು ತಿಳಿಯಬೇಕಿದೆ. ಹೀಗಾಗಿ, ಇವರ ಆಕ್ಷೇಪಾರ್ಹ ವರ್ತನೆಯ ಬಗ್ಗೆ ಇಲಾಖಾ ವಿಚಾರಣೆ ಅಗತ್ಯವಿದೆ” ಎಂಬ ಅಭಿಪ್ರಾಯವನ್ನು ಪೀಠ ವ್ಯಕ್ತಪಡಿಸಿದೆ.
ಅರ್ಜಿದಾರರ ಪರವಾಗಿ ವಕೀಲ ಮಧುಕರ ದೇಶಪಾಂಡೆ ವಾದವನ್ನು ಪುರಸ್ಕರಿಸಿರುವ ಪೀಠವು “ಆದೇಶದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರತಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ರವಾನಿಸಬೇಕು” ಎಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.