Kedarnath Mules
Kedarnath Mules 
ಸುದ್ದಿಗಳು

ಚಾರ್‌ಧಾಮ್‌ ಯಾತ್ರೆಯಲ್ಲಿ ಕುದುರೆ, ಹೇಸರಗತ್ತೆ ಸಾವು: ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಉತ್ತರಾಖಂಡ ಹೈಕೋರ್ಟ್‌ ಆದೇಶ

Bar & Bench

ಚಾರ್‌ ಧಾಮ್‌ ಯಾತ್ರೆಗಳಲ್ಲಿ ಉಂಟಾಗುತ್ತಿರುವ ಕುದುರೆ, ಹೇಸರಗತ್ತೆಗಳ ಸಾವು, ಈ ಮೂಕಪ್ರಾಣಿಗಳಿಗೆ ನೀಡಲಾಗುತ್ತಿರುವ ಕಿರುಕುಳಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮನವಿಗೆ ಹಿನ್ನೆಲೆಯಲ್ಲಿ ಉತ್ತರಾಖಂಡ ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ಉತ್ತರಾಖಂಡ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಪ್ರಾಣಿ ದಯಾ ಕಾರ್ಯಕರ್ತೆ ಗೌರಿ ಮೌಲೇಖಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಂಜಯ್‌ ಕುಮಾರ್‌ ಮಿಶ್ರಾ ಮತ್ತು ನ್ಯಾಯಮೂರ್ತಿ ರಮೇಶ್‌ ಚಂದ್ರ ಖುಲ್ಬೆ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಉತ್ತರಾಖಂಡ ಸರ್ಕಾರ, ಚಾರ್‌ ಧಾಮ್‌ ತೀರ್ಥಕ್ಷೇತ್ರವಿರುವ ರುದ್ರಪ್ರಯಾಗ, ಉತ್ತರಕಾಶಿ ಮತ್ತು ಚಮೋಲಿಯ ಜಿಲ್ಲಾ ದಂಡಾಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿರುವ ನ್ಯಾಯಾಲಯವು ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಆದೇಶಿಸಿದ್ದು, ಜೂನ್‌ 22ಕ್ಕೆ ವಿಚಾರಣೆ ಮುಂದೂಡಿದೆ.

ಉತ್ತರಾಖಂಡದಲ್ಲಿನ ತೀರ್ಥಯಾತ್ರೆಯಲ್ಲಿ ಕುದುರೆ ಮತ್ತು ಅವುಗಳಂತಹ ವರ್ಗಕ್ಕೆ (ಈಕ್ವೈನ್) ಸೇರಿದ ಪ್ರಾಣಿಗಳ ಬಳಕೆ ನಿಲ್ಲಿಸಬೇಕು. ಈ ಪ್ರಾಣಿಗಳ ಬಳಕೆಗೆ ಸಂಬಂಧಿಸಿದಂತೆ ಹಾಲಿ ಇರುವ ಕಾನೂನಿಗೆ ಅನುಗುಣವಾಗಿ ಪರಿಣಾಮಕಾರಿಯದ ನೀತಿ ರೂಪಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಲಾಗಿದೆ.

ರುದ್ರಪ್ರಯಾಗ ನಗರದಲ್ಲಿ ಜನರು ಮತ್ತು ಸಾಮಾನು ಸರಂಜಾಮನ್ನು ಕೊಂಡೊಯ್ಯಲು 20,000 ಕ್ಕೂ ಅಧಿಕ ಕುದುರೆ, ಸಣ್ಣ ಕುದುರೆ, ಹೇಸರಗತ್ತೆ ಮತ್ತು ಕತ್ತೆಗಳನ್ನು ವಿವಿಧ ಧಾರ್ಮಿಕ ಯಾತ್ರಾ ಮಾರ್ಗಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಪ್ರಾಣಿಗಳ ದುರ್ಬಳಕೆ, ಅಪಾರ ಅವ್ಯವಸ್ಥೆ ಈ ಯಾತ್ರೆಗಳುದ್ದಕ್ಕೂ ಎದ್ದು ಕಾಣುತ್ತಿದೆ. ಇದು ರಾಜ್ಯ ಸರ್ಕಾರದ ದುರ್ನೀತಿಗೆ ಹಿಡಿದ ಕನ್ನಡಿಯಾಗಿದೆ. ಇದರಿಂದಾಗಿ ಪ್ರಾಣಿ ಹಿಂಸೆ, ದೇಗುಲದ ಸುತ್ತಲಿನ ಸೂಕ್ಷ್ಮ ಪರಿಸರದಲ್ಲಿ ವ್ಯತ್ಯಯಕ್ಕೆ ಮತ್ತು ಸಾರ್ವಜನಿಕ ಸ್ವಾಸ್ಥ್ಯಕ್ಕೆ ಅಪಾಯ ಎದುರಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಕೇದರನಾಥ ಮಾರ್ಗವೊಂದರಲ್ಲಿ ಕಳೆದ ಎರಡು ತಿಂಗಳಲ್ಲಿ ತೀರ್ಥಯಾತ್ರೆಗೆ ಬಳಕೆ ಮಾಡಲಾದ 600ಕ್ಕೂ ಹೆಚ್ಚು ಪ್ರಾಣಿಗಳು ಸಾವನ್ನಪ್ಪಿವೆ ಎಂಬ ವರದಿ ಇದೆ. ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು. ಉತ್ತರಾಖಂಡಕ್ಕೆ ಕೊಂಡೊಯ್ಯಲಾಗುವ ಪ್ರಾಣಿಗಳು ಅತ್ಯಂತ ಎತ್ತರದ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಸಾಮರ್ಥ್ಯ ಅರಿಯಲು ಪ್ರಾಣಿಗಳ ಆರೋಗ್ಯ ತಪಾಸಣೆಗೆ ಸಂಬಂಧಿಸಿದ ಯಾವುದೇ ಪರೀಕ್ಷೆ ನಡೆಸಲಾಗುತ್ತಿಲ್ಲ. ಗಾಯ, ನಿತ್ರಾಣಗೊಂಡ ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಯಾವುದೇ ಮಾನವ ಸಂಪನ್ಮೂಲ ಅಥವಾ ಸೌಲಭ್ಯ ಕಲ್ಪಿಸಲಾಗಿಲ್ಲ. ಪ್ರಾಣಿಗಳು ನರಳಿ ಜೀವ ಬಿಡುತ್ತಿವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.